ಚಿಕ್ಕಬಳ್ಳಾಪುರ: ಅಕ್ಕಿ, ಬೇಳೆ, ಗೋಧಿ ಸಹಿತ ದವಸಧಾನ್ಯ, ಆಹಾರ ಪದಾರ್ಥಗಳ ಮೇಲೆ ಶೇ.5 ಜಿಎಸ್‌ಟಿ ವಿಧಿ ಸಲು ಕೌನ್ಸಿಲ್ ತೀರ್ಮಾನಿಸಿದ್ದು, ಕೂಡಲೇ ವಾಪಸ್ ಪಡೆಯಬೇಕೆಂದು ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಅಧ್ಯಕ್ಷ ಬಿ.ಆರ್.ಶ್ರೀನಿವಾಸಮೂರ್ತಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಕ್ಕಿ-ಗೋಧಿ ಸಹಿತ ಶೇ.60 ಅವಶ್ಯಕ ವಸ್ತುಗಳನ್ನು ಜನ ನಿತ್ಯ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಕೇಂದ್ರದ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಶೇ.5 ಜಿಎಸ್‌ಟಿ ವಿಧಿಸಲು ತೀರ್ಮಾನಿಸುವ ಮೂಲಕ ರೈತರು, ಗ್ರಾಹಕರಿಗೆ ಬರೆ ಎಳೆಯುವ ಕೆಲಸವನ್ನು ಮಾಡಲಾಗಿದೆ. ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ದವಸಧಾನ್ಯಗಳ ಮೇಲೆ ತೆರಿಗೆ: ದವಸ ಧಾನ್ಯಗಳಿಗೆ ಜಿಎಸ್‌ಟಿ ವಿಧಿ ಸಿದರೆ ನೇರವಾಗಿ ಜನಸಾಮಾನ್ಯರಿಗೆ ಬರೆ ಎಳೆದಂತೆ ಆಗುತ್ತದೆ. ಒಂದು ವೇಳೆ ಜಿಎಸ್‌ಟಿ ವಿಧಿಸಿದರೆ ಅಕ್ಕಿ ಬೆಲೆ ಕೇಜಿಗೆ 5 ರೂ. ಹೆಚ್ಚಳ ಆಗುತ್ತದೆ. ಬೇಳೆ ಕಾಳಿನ ಬೆಲೆ 10 ರೂ. ಹೆಚ್ಚಾಗುತ್ತದೆ. ಈಗಾಗಲೇ ಕೊರೊನಾ ಸೋಂಕಿನಿಂದ ಜನ ಸಾಮಾನ್ಯರು, ರೈತರು ಕಂಗಾಲು ಆಗಿದ್ದಾರೆ. ಈ ಮಧ್ಯೆ ಕೇಂದ್ರದ ಜಿಎಸ್‌ಟಿ ಕೌನ್ಸಿಲ್ ದವಸ ಧಾನ್ಯಗಳ ಮೇಲೆ ತೆರಿಗೆ ವಿಧಿಸುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಗ್ರಾಹಕರಿಗೆ ಹೊರೆ: ಈಗಾಗಲೇ ಜಿಲ್ಲೆಯಲ್ಲಿ ರೈತರು ಕಷ್ಟದಲ್ಲಿದ್ದಾರೆ. ಹೂಡಿರುವ ಬಂಡವಾಳ ಕೈಗೆಟುಕುತ್ತಿಲ್ಲ. ಸಾರಿಗೆ, ಲೇಬರ್ ವೆಚ್ಚ ಜಾಸ್ತಿಯಾಗಿದೆ. ಈ ಮಧ್ಯೆ ಸ್ಪೇರ್ ಪಾಟ್ಸ್ ಗೆ ಶೇ.5 ಜಿಎಸ್‌ಟಿ ತೆರಿಗೆ ಇತ್ತು. ಇದೀಗ ಅದನ್ನು ಶೇ.18 ಮಾಡಿದ್ದಾರೆ. ಇದು ನೇರವಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ವಿವರಿಸಿದರು.
ಅನಿರ್ದಿಷ್ಟಾವಧಿ ಹೋರಾಟ: ರೈತರು, ಗ್ರಾಹಕರಿಗೆ ತೊಂದರೆಯುಂಟು ಮಾಡಿರುವ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಪತ್ರ ಸಲ್ಲಿಸಲಾಗಿದೆ. ಜಿಎಸ್‌ಟಿ ವಿಧಿ ಸುವ ನಿರ್ಧಾರವನ್ನು ವಾಪಸ್ ಪಡೆಯದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಉಪಾಧ್ಯಕ್ಷ ತಲ್ಲಂ ರಾಧಾಕೃಷ್ಣ, ಕಾರ್ಯದರ್ಶಿ ನಾಗೇಶ್, ಖಜಾಂಚಿ ಎಂ.ಎಲ್.ಸಂತೋಷ, ವರ್ತಕರ ಸಂಘದ ಪ್ರತಿನಿ ಧಿಗಳಾದ ಚಿಕ್ಕಬಳ್ಳಾಪುರದ ಎಂಟಿಎಂ ಡಿ.ಎಸ್.ನಟರಾಜ್, ನಂಜುಂಡರಾಮಯ್ಯ ಶೆಟ್ಟಿ, ಗೌರಿಬಿದನೂರು ಎಸ್.ವಿ.ರತ್ನಯ್ಯಶೆಟ್ಟಿ, ಎನ್.ಆರ್.ರಾಧಾಕೃಷ್ಣ ಗುಪ್ತ, ಶಿಡ್ಲಘಟ್ಟದಿಂದ ಮಹೇಶ್, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.