Advertisement

ಜಿಎಸ್‌ಟಿ : ಸತತ 5 ತಿಂಗಳುಗಳಲ್ಲಿ ಲಕ್ಷ ಕೋ. ರೂ. ಗೂ ಹೆಚ್ಚು ಸಂಗ್ರಹ

01:08 AM Mar 26, 2021 | Team Udayavani |

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಈ ತಿಂಗಳು ಹೊಸ ದಾಖಲೆಯನ್ನು ಸ್ಥಾಪಿಸುವ ನಿರೀಕ್ಷೆ ಇದೆ. ಪ್ರಸಕ್ತ ಮಾರ್ಚ್‌ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹವು 1.25 ಲಕ್ಷ ಕೋ. ರೂ.ಗಳಿಂದ 1.30 ಲಕ್ಷ ಕೋ. ರೂ. ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Advertisement

ಯಾವ ವರ್ಷ ಎಷ್ಟೆಷ್ಟು? :

ದೇಶದಲ್ಲಿ 2017ರ ಜುಲೈ ತಿಂಗಳಿನಲ್ಲಿ ಜಿಎಸ್‌ಟಿ ಜಾರಿಗೆ ಬಂದಿತ್ತು. 2017ರ ಜುಲೈ ಮತ್ತು 2018ರ ಮಾರ್ಚ್‌ ನಡುವೆ ಒಟ್ಟು 7.40 ಲಕ್ಷ ಕೋ. ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. 2018ರ ಎಪ್ರಿಲ್‌ ಮತ್ತು 2019ರ ಮಾರ್ಚ್‌ ನಡುವೆ 11.77 ಲಕ್ಷ ಕೋ. ರೂ. ಸಂಗ್ರಹವಾದರೆ, 2019ರ ಎಪ್ರಿಲ್‌ನಿಂದ 2020ರ ಮಾರ್ಚ್‌ ನಡುವೆ 12.22 ಲಕ್ಷ ಕೋ. ರೂ. ಸಂಗ್ರಹವಾಗಿತ್ತು. 2020ರ ಎಪ್ರಿಲ್‌ನಿಂದ 2021ರ ಫೆಬ್ರವರಿ ನಡುವೆ 10.22 ಲಕ್ಷ ಕೋ. ರೂ. ಸಂಗ್ರಹವಾಗಿದೆ.

1 ಲಕ್ಷ ಕೋ. ರೂ. ಗಳಿಗೂ ಹೆಚ್ಚು ಸಂಗ್ರಹ :

ಜಿಎಸ್‌ಟಿ ಸಂಗ್ರಹವು ಕಳೆದ 5 ತಿಂಗಳುಗಳಿಂದ ನಿರಂತರವಾಗಿ 1 ಲಕ್ಷ ಕೋ. ರೂ.ಗಳಿಗಿಂತ ಹೆಚ್ಚು ಸಂಗ್ರಹವಾಗುತ್ತಿದೆ. 2021ರ ಜನವರಿಯಲ್ಲಿ ಅತೀ ಹೆಚ್ಚು ಅಂದರೆ 1,19,847 ಕೋ. ರೂ. ಸಂಗ್ರಹವಾಗಿದೆ.

Advertisement

ಏನು ಕಾರಣ? :

ಕಳೆದ 6 ತಿಂಗಳುಗಳಲ್ಲಿ ಅಂದರೆ ಕೋವಿಡ್ ಸಮಯದಲ್ಲಿ ಜಿಎಸ್‌ಟಿ ತಂಡ ಮತ್ತು ಹಣಕಾಸು ಸಚಿವಾಲಯವು ಬೃಹತ್‌ ಪ್ರಮಾಣದಲ್ಲಿ ಜಿಎಸ್‌ಟಿ ಕಳ್ಳತನವನ್ನು ತಡೆಗಟ್ಟಿದೆ. ಇದು ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ. ಕಳೆದ 6 ತಿಂಗಳುಗಳಲ್ಲಿ ದೇಶಾದ್ಯಂತ ಜಿಎಸ್‌ಟಿಗೆ ಸಂಬಂಧಿಸಿದಂತೆ ಹಲವು ದಾಳಿಗಳು ನಡೆದಿವೆ. ಈ ವೇಳೆ ನಕಲಿ ಕಂಪೆನಿಗಳು ಮತ್ತು ಬಿಲ್‌ಗ‌ಳನ್ನು ಪತ್ತೆ ಹಚ್ಚಲಾಗಿದೆ. ಇಂತಹ ವಂಚನೆಗಳನ್ನು ತಡೆಯಲು ತನ್ನ ಐಟಿ ವ್ಯವಸ್ಥೆಯನ್ನು ಬಲಪಡಿಸಿದ್ದು, ಈ ತಂಡ ಪ್ರತೀ ರಾಜ್ಯದ ಬೃಹತ್‌ ಕಂಪೆನಿಗಳ ಮೇಲೆ ನಿಗಾ ಇಡುವ ಜತೆಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

5 ತಿಂಗಳಲ್ಲಿ ಸತತ 1 ಲ.ಕೋ.ರೂ. :

ಜಿಎಸ್‌ಟಿ ಸಂಗ್ರಹವು ಸತತ 5 ತಿಂಗಳು 1 ಲಕ್ಷ ಕೋಟಿಗಿಂತ ಹೆಚ್ಚಿರುವುದು ಇದೇ ಮೊದಲಾಗಿದೆ. ಅತೀ ಹೆಚ್ಚು ಸಂಗ್ರಹ ಈ ವರ್ಷದ ಜನವರಿಯಲ್ಲಿ ಆಗಿತ್ತು. ಜಿಎಸ್‌ಟಿ ಸಂಗ್ರಹವು ಅಕ್ಟೋಬರ್‌ನಲ್ಲಿ 1.05 ಲಕ್ಷ ಕೋಟಿ ರೂ., ನವೆಂಬರ್‌ನಲ್ಲಿ 1.04 ಲಕ್ಷ ಕೋ. ರೂ., ಡಿಸೆಂಬರ್‌ನಲ್ಲಿ 1.15 ಲಕ್ಷ ಕೋ. ರೂ., ಜನವರಿಯಲ್ಲಿ 1.19ಲಕ್ಷ ಕೋ. ರೂ. ಮತ್ತು ಫೆಬ್ರವರಿಯಲ್ಲಿ 1.13 ಲಕ್ಷ ಕೋ. ರೂ. ಆಗಿತ್ತು.

ಫೆಬ್ರವರಿಯಲ್ಲಿ ಪ್ರತೀ ದಿನ 4,035 ಕೋ. ರೂ. :

ಫೆಬ್ರವರಿ ತಿಂಗಳ ಅಂಕಿ-ಅಂಶವನ್ನು ತೆಗೆದುಕೊಂಡರೆ ಪ್ರತೀ ದಿನ ಸರಾಸರಿ 4,035 ಕೋ. ರೂ. ಸಂಗ್ರಹವಾಗಿದೆ. ಆದರೆ ಫೆಬ್ರವರಿಯಲ್ಲಿ 28 ದಿನಗಳಷ್ಟೇ ಇರುವುದರಿಂದ  ಈ ಆಧಾರದ ಮೇಲೆ ನಾವು 31 ದಿನಗಳನ್ನು ಲೆಕ್ಕಹಾಕಿದರೆ ಮಾರ್ಚ್‌ನಲ್ಲಿ ಈ ಸಂಖ್ಯೆ 1.25 ಲಕ್ಷ ಕೋ.ರೂ.ಗಳಾಗಲಿವೆ ಎಂದು ಅಂದಾಜಸಿಲಾಗಿದೆ. ಆದರೆ ಈ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next