Advertisement

ಜಿಎಸ್‌ಬಿ ವಡಾಲ 63ನೇ ವಾರ್ಷಿಕ ಗಣೇಶೋತ್ಸವ ಪೂರ್ವಭಾವಿ ಸಭೆ

12:12 PM Aug 23, 2017 | Team Udayavani |

ಮುಂಬಯಿ: ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಡಾಲ ಇದರ 63ನೇ ಗಣೇಶೋತ್ಸವ ಸಂಭ್ರಮವು ಆ. 25ರಿಂದ ಪ್ರಾರಂಭಗೊಂಡು ಸೆ. 5ರವರೆಗೆ ವಡಾಲದ ಶ್ರೀ ರಾಮಂದಿರದಲ್ಲಿ ಜರಗಲಿದ್ದು, ಇದರ ಪೂರ್ವ ಸಿದ್ಧತಾ ಸಭೆಯು ಆ. 17ರಂದು ಮಂದಿರದ ಸಭಾಂಗಣದಲ್ಲಿ ಜರಗಿತು.

Advertisement

ವಿಶ್ವಸ್ತ ಕಾರ್ಯಾಧ್ಯಕ್ಷ ನರಸಿಂಹ ಎನ್‌. ಪಾಲ್‌ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, 12 ದಿವಸದುದ್ದಕ್ಕೂ ನಡೆಯಲಿರುವ ಉತ್ಸವವನ್ನು ಪ್ರೀತಿ, ಪ್ರೇಮ, ಬಾಂಧವ್ಯದಿಂದ ಭಕ್ತಾದಿಗಳು ಪಾಲ್ಗೊಂಡು ಯಶಸ್ವಿಯಾಗಿ ನೆರವೇರಿಸಬೇಕು. ಸ್ವಯಂ ಸೇವಕರು ಭಕ್ತಾದಿಗಳಿಗೆ ಉತ್ತಮ ಸಹಕಾರವನ್ನು ನೀಡಬೇಕು. ಉತ್ಸವದುದ್ದಕ್ಕೂ ಪ್ರಾತಃಕಾಲ 7 ರಿಂದ ಪ್ರತೀ ದಿನ ರಾತ್ರಿ 11 ಗಂಟೆಯವರೆಗೆ ನಡೆಯಲಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ವಿವಿಧೆಡೆಗಳಿಂದ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು ಎಂದು ನುಡಿದರು.

ಉತ್ಸವಾಧ್ಯಕ್ಷ ಉಲ್ಲಾಸ್‌ ಕಾಮತ್‌ ಅವರು ಮಾತನಾಡಿ, ಮುಂಜಾನೆ ನಡೆಯಲಿರುವ ಗಣಹೋಮ, ಮೂಡುಗಣಪತಿ ಸೇವೆ, ಮಧ್ಯಾಹ್ನದ ಮಹಾಪೂಜೆ, ಅನ್ನಸಂತರ್ಪಣೆ, ವಿಶೇಷ ಸೇವೆ, ಉದಯಾಸ್ತಮಾನಸೇವೆ, ಸಂಪೂರ್ಣ ಸೇವೆಗಳ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿ ವಿಶೇಷ ಸೂಚನೆಗಳನ್ನು ನೀಡಿದರು. ಪ್ರತಿದಿನ ಪೂರ್ತಿ ದಿವಸ ದಾದರ್‌ ಪೂರ್ವ ರೈಲ್ವೇ ನಿಲ್ದಾಣದಿಂದ ಶ್ರೀ ರಾಮಮಂದಿರಕ್ಕೆ ಬಸ್‌ನ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದರ ಸದುಪಯೋಗವನ್ನು ಪಡೆಯುವಂತೆ ವಿನಂತಿಸಿದರು.

ಶ್ರೀ ರಾಮಮಂದಿರದ ಕಾರ್ಯದರ್ಶಿ ಅಮೋಲ್‌ ಪೈ ಮತ್ತು ಪೂಜಾ ನೋಂದಣಿ ಸಮಿತಿಯ ಸಂಚಾಲಕ ಸುರೇಶ್‌ ಕಾಮತ್‌ ಅವರು ಸೇವಾದಾರರ ಪೂಜೆಯ ನೋಂದಣಿಯ ವಿವಿಧ ಪ್ರಕಾರಗಳ ನೂತನ ಸಾಫ್ಟ್‌ವೇರ್‌ ಸಿಸ್ಟಂಗಳ ಮಾಹಿತಿ ನೀಡಿದರು.

ಸಾಂಸ್ಕೃತಿಕ ವಿಭಾಗದ ಸಂಚಾಲಕ ನಾಗರಾಜ್‌ ಕಿಣಿ ಅವರು ಮಾತನಾಡಿ, ಉತ್ಸವದುದ್ದಕ್ಕೂ ರಾಮ ಸೇವಕ ಸಂಘ ಮತ್ತು ಎನ್‌ಕೆಜಿಎಸ್‌ಬಿ ವೆಲ್ಫೆàರ್‌ ಅಸೋಸಿಯೇಶನ್‌ ವಡಾಲದ ಲಾಂಛನದಲ್ಲಿ ವಸುಧಾ ಪ್ರಭು ಅವರು ರಚಿಸಿ, ನಿರ್ದೇಶಿಸಿರುವ ಭಕ್ತಿಪ್ರದಾನ ಕಿರು ನಾಟಕ ಭಕ್ತ ಪುರಂದರದಾಸ ನಡೆಯಲಿದೆ. ಆ 26ರಂದು ರಾತ್ರಿ 9.30 ರಿಂದ ಕೊಂಕಣಿ ತ್ರಿವೇಣಿ ಕಲಾಸಂಗಮದ ಕಲಾವಿದರಿಂದ ಡಾ| ಚಂದ್ರಶೇಖರ್‌ ಶೆಣೈ ಅವರ ನಿರ್ದೇಶನದಲ್ಲಿ ನಡೆಯಲಿರುವ ನಾಟಕದ ಬಗ್ಗೆ ಮಾಹಿತಿ ನೀಡಿದರು.

Advertisement

ಗಣೇಶೋತ್ಸವದ ವಕ್ತಾರ ಕಮಲಾಕ್ಷ ಸರಾಫ್‌ ಅವರು 12 ದಿನಗಳ ಉತ್ಸವದುದ್ದಕ್ಕೂ ನೆರವೇರಲಿರುವ ವಿವಿಧ ಕಾರ್ಯಕಲಾಪಗಳು ಸಮಾಜ ಬಾಂಧವರಿಗೆ ಕೊಂಕಣಿ, ಕನ್ನಡ, ತುಳು, ಮರಾಠಿ ಬಾಂಧವರಿಗೆ ತಲುಪಿಸುವ ದೃಷ್ಟಿಯಿಂದ ಸಲಹೆ ನೀಡಿದರು. ಮಾಧ್ಯಮಗಳ ಮೂಲಕ ಗಣೇಶೋತ್ಸವದ ಸುದ್ದಿಯನ್ನು ಭಕ್ತಾದಿಗಳಿಗೆ ತಿಳಿಸುವ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಬಯಸಿದರು. ಸಭೆಯಲ್ಲಿ ವಿಶ್ವಸ್ತರಾದ ರಾಜೀವ ಶೆಣೈ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಆ. 25 ರಂದು ಬೆಳಗ್ಗೆ 7 ರಿಂದ ದೇವತಾ ಪ್ರಾರ್ಥನೆ, ಪ್ರಾಣ ಪ್ರತಿಷ್ಠೆಗೊಳ್ಳಲಿದೆ. ಪ್ರತೀ ದಿನ ಮುಂಬಯಿ ಹಾಗೂ ಉಪನಗರಗಳ ವಿವಿಧ ಭಜನ ಮಂಡಳಿಯವರಿಂದ ಭಜನ ಸೇವೆ, ಜಿಎಸ್‌ಬಿ ಮೆಡಿಕಲ್‌ ಟ್ರಸ್ಟ್‌ ವತಿಯಿಂದ ಆ. 27ರಂದು ಪೂರ್ವಾಹ್ನ 10ರಿಂದ ಆರೋಗ್ಯವಂತ ಶಿಶು ಸ್ಪರ್ಧೆ, ಭಗವದ್ಗೀತೆ ಸ್ಪರ್ಧೆ, ರಾತ್ರಿ 9.30ರಿಂದ ಅರ್ಪಣಾ ಮಾನೆ ಶಿರೋಡ್ಕರ್‌ ತಂಡದವರಿಂದ ಕಥಕ್‌ ನೃತ್ಯ ಪ್ರದರ್ಶನ, ಆ. 28ರಂದು ರಾತ್ರಿ ಗಾಯಕ ಬಾಲಚಂದ್ರ ಪ್ರಭು ಅವರಿಂದ ಭಕ್ತಿ ರಸಸಂಜೆ, ಆ. 31 ರಂದು ರಾತ್ರಿ 9.30ರಿಂದ ಪಂಚಮಿ ನಿರ್ಮಿತ ಅಭಯ ಕುಲಕರ್ಣಿ ಅವರಿಂದ ಭಕ್ತಿಸಾಗರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆ. 29 ರಂದು ಸಂಜೆ 9.30ರಿಂದ ಅವಧೂತ್‌ ರೇಗೆ ಅವರಿಂದ ಸ್ವರ ಬಂಧಿಶ್‌ ಕಾರ್ಯಕ್ರಮ, ಸೆ. 1 ರಂದು ಕಾಮಾಕ್ಷಿ ಪೈ ಬೆಳಗಾವಿ  ಅವರಿಂದ  ಸ್ವರ ಸಂಧ್ಯಾ ಕಾರ್ಯಕ್ರಮ ನೆರವೇರಲಿದೆ. ಆ. 25 ರಂದು ರಾಮ ಸೇವಕ ಸಂಘ ಭಜನ ಮಂಡಳಿಯವರಿಂದ ರಾತ್ರಿ 10ರಿಂದ ವಿಶೇಷ ಭಜನ ಕಾರ್ಯಕ್ರಮ, ಸಮಾಜ ಚಿಣ್ಣರಿಗಾಗಿ ಛದ್ಮವೇಷ, ನೃತ್ಯ ಸ್ಪರ್ಧೆಯು ಆ. 26ರಂದು ಸಂಜೆ 6ರಿಂದ ಆಯೋಜಿಸಲಾಗಿದೆ.  ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next