Advertisement

Gruha Lakshmi; ಊರಿಗೆ ಹೋಳಿಗೆ ಊಟ ಹಾಕಿದ ಅಜ್ಜಿ ಬಳಿ ಸಿಎಂ ವಿನಂತಿಸಿಕೊಂಡಿದ್ದೇನು?

09:07 PM Aug 26, 2024 | Team Udayavani |

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಅವರಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿನಂತಿಯೊಂದನ್ನು ಮಾಡುವ ಮೂಲಕ ಸಂದೇಶವೊಂದನ್ನು ರವಾನಿಸಿದ್ದಾರೆ.

Advertisement

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘ಗೃಹಲಕ್ಷ್ಮೀಯರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಲಿ ಎಂಬ ಸದುದ್ದೇಶದಿಂದ ನಾವು ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆ ಇಂದು ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದಾನವಾಗಿದೆ. ಗೃಹಲಕ್ಷ್ಮಿಯ ಹಣ ಮಕ್ಕಳ ವಿದ್ಯಾಭ್ಯಾಸ, ಮನೆಗೆ ದಿನಸಿ, ಹಬ್ಬಕ್ಕೆ ಬಟ್ಟೆ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಬಳಕೆಯಾದ ಬಹಳಷ್ಟು ಸುದ್ದಿಗಳನ್ನು ಮಾಧ್ಯಮಗಳಲ್ಲಿ ಕಂಡಿದ್ದೆ. ಅವೆಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಂತಿದ್ದವು. ಆದರೆ ಇಂದು ಬೆಳಗಾವಿ‌ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಜೀವವೊಂದು ತನಗೆ ಬಂದ ಗೃಹಲಕ್ಷ್ಮೀಯ ಹಣದಲ್ಲಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿ, ಮುತ್ತೈದೆಯರಿಗೆ ಮಡಿಲು ತುಂಬಿರುವ ವೀಡಿಯೋವನ್ನು ನೋಡಿದೆ, ಆ ತಾಯಿ ಸಿದ್ದರಾಮಯ್ಯನಿಗೆ ಒಳಿತಾಗಲೆಂದು ಇದನ್ನು ಮಾಡುತ್ತಿದ್ದೇನೆಂದು ಹೇಳಿದ್ದು ಕೇಳಿ ಮನಸ್ಸು ತುಂಬಿಬಂತು. ಇಂತಹ ಲಕ್ಷಾಂತರ ತಾಯಂದಿರ, ಅಕ್ಕ ತಂಗಿಯರ ಆಶೀರ್ವಾದ, ಹಾರೈಕೆ ನನ್ನ ಜೊತೆಗಿದೆ. ಈ ಪ್ರೀತಿ, ಅಕ್ಕರೆಗಳೇ ನನ್ನ ಬಲ. ಗೃಹಲಕ್ಷ್ಮೀ ಯೋಜನೆ ನಿಲ್ಲಬಾರದು, ಇದು ಇನ್ನಷ್ಟು ಬಡವರ ಹೊಟ್ಟೆತುಂಬಿಸಲಿ ಎಂದು ಅಕ್ಕಾತಾಯಿ ಲಂಗೂಟಿ ಅವರು ಮನವಿ ಮಾಡಿದ್ದಾರೆ, ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ಸ್ಥಗಿತ ಮಾಡಲ್ಲ, ನಮ್ಮ ಸರ್ಕಾರ ಇರುವವರೆಗೆ ಗೃಹಲಕ್ಷ್ಮಿಯ ಹಣ ಬಡವರ ಮನೆ ಸೇರುತ್ತದೆ ಎಂಬುದನ್ನು ಈ ಮೂಲಕ ಆ ಹಿರಿಯ ಜೀವಕ್ಕೆ ಮಾತ್ರವಲ್ಲ ನಾಡಿನ ಪ್ರತಿಯೊಬ್ಬರಿಗೂ ಖಾತ್ರಿಪಡಿಸುತ್ತಿದ್ದೇನೆ’ ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.

”ನಮ್ಮ ಮಣ್ಣಿನ ಗುಣವೇ ಹಾಗೆ, ತನಗೆ ಸಿಕ್ಕಿದ್ದನ್ನು ಹಂಚಿ ತಿನ್ನುವ ಔದಾರ್ಯ, ಇನ್ನೊಬ್ಬರ ಒಳಿತು ಬಯಸುವ ನಿಸ್ವಾರ್ಥ ಭಾವವಿದೆ. ಇಂತಹವರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೇ ಸರಿ. ಹೀಗಿದ್ದರೂ ಅಕ್ಕಾತಾಯಿ ಲಗೋಟಿ ಅವರಲ್ಲಿ ಒಂದು ಸವಿನಯ ವಿನಂತಿ ಇದೆ. ಊರಿಗೆ ಹೋಳಿಗೆ ಊಟ ಹಾಕುವುದು ಒಳ್ಳೆಯ ಗುಣವೇ ಸರಿ. ಆದರೆ ಗೃಹಲಕ್ಷ್ಮೀ ಯೋಜನೆಯ ಹಣದ ಮೇಲಿನ ಮೊದಲ ಹಕ್ಕು ಸ್ವಂತ ಕುಟುಂಬದ್ದಾಗಿದೆ. ಅಕ್ಕಾತಾಯಿಯಂತಹ ಒಳ್ಳೆಯ ಮನಸ್ಸಿನ ಸೋದರಿಯರು ಈ ಹಣವನ್ನು ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯಕರವಾದ ಊಟ-ತಿಂಡಿ ಮತ್ತು ಮಕ್ಕಳ ಶಿಕ್ಷಣ ನೀಡಲು ಬಳಸಿದಾಗ ಮಾತ್ರ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ” ಎಂದು ಸಿಎಂ ಎಕ್ಸ್ ಪೋಸ್ಟ್ ಮೂಲಕ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next