Advertisement

ರೇಷನ್‌ಕಾರ್ಡ್‌ನ ಯಜಮಾನಿಯೇ ಗೃಹಲಕ್ಷ್ಮೀ

01:32 PM Jul 20, 2023 | Team Udayavani |

ಮಂಡ್ಯ: ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಡಿಬಿಟಿ(ನೇರ ನಗದು ವರ್ಗಾವಣೆ) ಮೂಲಕ ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಿಲ್ಲೆಯಲ್ಲಿ ಜು.20ರಿಂದ ನೋಂದಣಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

Advertisement

ಗ್ರಾಮ ಒನ್‌, ಕರ್ನಾಟಕ ಒನ್‌, ಬಾಪೂಜಿ ಸೇವಾ ಕೇಂದ್ರಗಳು ಹಾಗೂ ಪ್ರಜಾಪ್ರತಿನಿಧಿಗಳು ಸೇರಿದಂತೆ ಒಟ್ಟು 479 ಕೇಂದ್ರಗಳಲ್ಲಿ ಏಕಕಾಲದಲ್ಲಿ ನೋಂದಣಿ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ತೆರಿಗೆ ಪಾವತಿಯಾಗಿದ್ದರೆ ಯೋಜನೆ ಅನ್ವಯಿಸಲ್ಲ: ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗುತ್ತಾರೆ. ಆದರೆ, ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರು ಆದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ ಎಂದರು.

4.79 ಲಕ್ಷ ಗೃಹಲಕ್ಷ್ಮೀಯರು ಅರ್ಹರು: ಜಿಲ್ಲೆಯಲ್ಲಿ 4.79 ಲಕ್ಷ ಮಹಿಳೆಯರು ಈ ಯೋಜನೆಗೆ ಅರ್ಹರಿದ್ದು, ಹೆಸರು ನೋಂದಾಯಿಸಲು ಪಡಿತರ ಚೀಟಿಯ ಸಂಖ್ಯೆ, ಯಜಮಾನಿ ಹಾಗೂ ಪತಿಯ ಆಧಾರ್‌ ಕಾರ್ಡ್‌ ಸಂಖ್ಯೆ, ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌ ಅಥವಾ ಫಲಾನುಭವಿಯು ಇಚ್ಛಿಸುವ ಪರ್ಯಾಯ ಬ್ಯಾಂಕ್‌ ಖಾತೆಯ ದಾಖಲೆಗಳನ್ನು ನೀಡಬೇಕು ಎಂದು ತಿಳಿಸಿದರು.

ಸಂದೇಶದ ನಂತರವೇ ನೋಂದಣಿ: ಪ್ರತಿದಿನ ಅರ್ಹ 60 ಫಲಾನುಭವಿಗಳಿಗೆ ಸಮಯ ಹಾಗೂ ನೋಂದಣಿ ಕೇಂದ್ರದ ವಿವರಗಳು ಮೊಬೈಲ್‌ ಸಂದೇಶದ ಮೂಲಕ ಸ್ವೀಕೃತವಾಗಲಿವೆ. ಸಂದೇಶ ಸ್ವೀಕೃತಗೊಂಡ ಫಲಾನುಭವಿಗಳು ಮಾತ್ರ ಸಂದೇಶದಲ್ಲಿ ವಿವರಿಸಿದ ಸೇವಾ ಕೇಂದ್ರಕ್ಕೆ ನಿಗದಿಪಡಿಸಿದ ಸಮಯಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬಹುದು ಎಂದರು.

Advertisement

ಶುಲ್ಕ ನೀಡುವಂತಿಲ್ಲ: ನೋಂದಣಿಗೆ ಮಹಿಳೆಯರು ಯಾವುದೇ ಶುಲ್ಕ ನೀಡುವಂತಿಲ್ಲ. ನೋಂದಣಿಯು ಗ್ರಾಮ ಒನ್‌ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಭಾಗದಲ್ಲಿ ಕರ್ನಾಟಕ ಒನ್‌ ಸೆಂಟರ್‌ ಹಾಗೂ ಹೆಚ್ಚುವರಿಯಾಗಿ ನಗರಸಭೆ ವ್ಯಾಪ್ತಿಯಲ್ಲಿ ತೆರೆಯುವ 5, ಪುರಸಭೆ ವ್ಯಾಪ್ತಿಯಲ್ಲಿ-3 ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯುವ 2 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಹೇಳಿದರು.

ಪ್ರಜಾಪ್ರತಿನಿಧಿಗಳ ನೇಮಕ: ಪರ್ಯಾಯವಾಗಿ ಪ್ರಜಾ ಪ್ರತಿನಿಧಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇವರಿಗೆ ಯಾವುದೇ ರೀತಿಯ ಗೌರವಧನ ನೀಡಲಾಗುವುದಿಲ್ಲ. ಒಂದು ಸಾವಿರ ಜನಸಂಖ್ಯೆಗೆ ಇಬ್ಬರೂ ಪ್ರಜಾಪ್ರತಿನಿಧಿಯನ್ನು ನೇಮಕ ಮಾಡಲು ಅವಕಾಶವಿದೆ. ಇಬ್ಬರಲ್ಲಿ ಒಬ್ಬರೂ ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಪ್ರಜಾಪ್ರತಿನಿಧಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹಾಗೂ ಮೊಬೈಲ್‌ ಹೊಂದಿರಬೇಕು ಎಂದು ಹೇಳಿದರು.

ಅಂತಿಮ ದಿನಾಂಕ ನಿಗದಿ ಇಲ್ಲ: ಈ ಯೋಜನೆಯಡಿ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ನೋಂದಣಿ ಕೇಂದ್ರಗಳಿಗೆ ಹೋಗಲು ಸಾದ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಮೊಬೈಲ್‌ಗೆ ಮಂಜೂರಾತಿ ಸಂದೇಶ: ಪ್ರಜಾಪ್ರತಿನಿಧಿ ಮೂಲಕ ಅಥವಾ ನೋಂದಣಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಲ್ಲಿ ಅರ್ಜಿದಾರರು ನೀಡಿದ ಮೊಬೈಲ್‌ ಸಂಖ್ಯೆಗೆ ಎಸ್‌ ಎಂಎಸ್‌ ಮೂಲಕ ಮಂಜೂರಾತಿ ಬಗ್ಗೆ ಸಂದೇಶ ರವಾನಿಸಲಾಗವುದು ಎಂದು ತಿಳಿಸಿದರು.

ಸೌಜನ್ಯದೊಂದಿಗೆ ವರ್ತಿಸಿ: ಈ ಯೋಜನೆಯಡಿ ವಯಸ್ಸಾದ ಮಹಿಳೆಯರು, ಗ್ರಾಮೀಣ ಮಹಿಳೆಯರು, ಅನಕ್ಷರಸ್ಥ ಮಹಿಳೆಯರು ಬರುತ್ತಾರೆ. ಹೀಗಾಗಿ, ನೋಂದಣಿ ಕೇಂದ್ರದವರಿಗೆ ಅವರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಲಾಗಿದೆ. ಗ್ರಾಮ ಒನ್‌ ಸೆಂಟರ್‌ಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಮಹಿಳೆಯರಿಗೆ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಎಂ.ಕೃಷ್ಣಕುಮಾರ್‌ ಇದ್ದರು.

ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ನೋಂದಾಯಿಸುವ ಪ್ರಕ್ರಿಯೆಯನ್ನು ಉಸ್ತುವಾರಿ ಮಾಡಲು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, ಪ್ರತಿ ನೋಂದಣಿ ಕೇಂದ್ರಕ್ಕೂ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ●ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next