Advertisement
ಇದರ ಹೊರತಾಗಿ ಯೂ ಪಡಿತರ ಚೀಟಿ ಯಜಮಾನಿಯರಾಗದ, ಕೆವೈಸಿ ಮಾಡಿಸದ ಮತ್ತು ಪಡಿತರ ಪಡೆಯದವರು ಸೇರಿದಂತೆ ಇಪ್ಪತ್ತು, ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಗೃಹಲಕ್ಷ್ಮಿ ಸೌಲಭ್ಯದಿಂದ ಹೊರಗುಳಿದಿದ್ದಾರೆ.
Related Articles
Advertisement
ವರ್ಗವಾರು ಅನುದಾನ: ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಪರಿಶಿಷ್ಟ ಜಾತಿಯ 88,641 ಮಂದಿಗೆ, ಪರಿಶಿಷ್ಟ ವರ್ಗದ 17,114 ಮಂದಿಗೆ ಮತ್ತು ಸಾಮಾನ್ಯ ವರ್ಗದ 1.74 ಲಕ್ಷ ಮಂದಿಗೆ ಗೃಹಲಕ್ಷ್ಮಿ ಯೋಜನೆಯ ಅನುದಾನ ಬ್ಯಾಂಕ್ ಖಾತೆಗಳಿಗೆ ತಲುಪಿರುವುದು ದೃಢಪಟ್ಟಿದೆ. ಆದರೂ, ಸಮಾಜ ದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲವು ಸೀಮಿತ ವರ್ಗದವರಿಗೆ ಮಾತ್ರವೇ ಸಿಗುತ್ತಿದೆಯೆಂಬ ವದಂತಿಗಳು ಹರಡುವಂತಾಗಿದೆ.
ಸರ್ವರ್ ಸಮಸ್ಯೆಯಿಂದ ವಿಳಂಬ: ಗೃಹಲಕ್ಷ್ಮಿ ಯೋಜನೆ ಆರಂಭವಾದ ಕೆವೈಸಿ ಮಾಡಿಸದ, ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸದ ಹಾಗೂ ಹೆಸರುಗಳ ಹೊಂದಾಣಿಯಾಗದ, ಪಡಿತರ ಚೀಟಿಯಲ್ಲಿ ಯಜಮಾನಿಯಾಗಿರದ ಮಹಿಳೆಯರು ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಈಗಾಗಲೇ ಸೇವಾ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಸಕಾಲದಲ್ಲಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ಬದಲಾವಣೆ ಮಾಡಿಕೊಂಡವರ ಹೆಸರುಗಳು ಅಪಡೇಟ್ ಆಗಿ ಹೊಸ ಪಡಿತರ ಚೀಟಿ ಬಾರದಿರುವುದರಿಂದಲೂ ಗೃಹಲಕ್ಷ್ಮಿಗೆ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ . ಇವೆಲ್ಲಾ ಸಮಸ್ಯೆಗಳಿಂದಾಗಿ ಆರಂಭದ ಆಗಸ್ಟ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ 33 ಸಾವಿರ ಮತ್ತು ಅರ್ಜಿ ಸಲ್ಲಿಸಲು ಸಾಧ್ಯವಾಗದ 20 ರಿಂದ 30 ಸಾವಿರ ಮಂದಿಗೆ ಗೃಹಲಕ್ಷ್ಮಿ ಭಾಗ್ಯ ಕೈಗೆಟುಕದಂತಾಗಿದೆ.
ಅನುದಾನ ಬಾರದಿರಲು ಕಾರಣವೇನು? : ಈಗಾಗಲೇ ಅರ್ಜಿ ಸಲ್ಲಿಸಿದ 2.77 ಲಕ್ಷ ಮಂದಿಯ ಪೈಕಿ 33 ಸಾವಿರ ಮಂದಿಗೆ ಅನುದಾನ ತಲುಪಿಲ್ಲ. ಇದಕ್ಕೆ ಮೂರು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಪಡಿತರ ಚೀಟಿ, ಅಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಹೆಸರು ಹೊಂದಾಣಿಕೆಯಾಗದೆ ಇರುವುದರಿಂದ, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿರುವುದು ಮತ್ತು ಪಡಿತರ ಪಡೆಯದೆ ಕೆವೈಸಿ ದಾಖಲಾಗಿ ಅಪ್‌ಡೇಟ್ ಮಾಡದಿರುವುದರಿಂದಲೂ ಗೃಹಲಕ್ಷ್ಮಿ ಫಲಾನುಭವಿಗಳಾಗಲು ಸಾಧ್ಯವಾಗಿಲ್ಲ.
ಏನು ಮಾಡಬೇಕು?: ಪ್ರತಿ ನಿತ್ಯವೂ ನೂರಾರು ಮಂದಿ ಗೃಹಲಕ್ಷ್ಮಿ ನೋಂದಣಿ ಸಾಧ್ಯವಾಗದೆ ಪರದಾಡುತ್ತಿದ್ದು, ಇಂತವರು ಏನು ಮಾಡಬೇಕು ಎಂಬ ಗೊಂದಲ ಉಂಟಾಗಿದೆ. ಮೊದಲು ಬ್ಯಾಂಕ್ ಖಾತೆಆಧಾರ್ ಲಿಂಕ್ ಮಾಡಿಸಿ, ಪಡಿತರ ಚೀಟಿಯಲ್ಲಿ ಯಜಮಾನಿಯನ್ನು ಗುರುತಿಸಿಕೊಂಡು, ಹೆಸರು ವಿಳಾಸದ ಅಥವಾ ಬ್ಯಾಂಕ್ ಖಾತೆಯ ಮೊಬೈಲ್ ಸಂಖ್ಯೆಯ ಬದಲಾವಣೆಗಳಿದ್ದರೆ ಸರಿಪಡಿಸಿಕೊಳ್ಳಬೇಕು. ಈ ಮಾಹಿತಿ ಸರಿಯಾಗಿ ಅಪಡೇಟ್ ಆದಮೇಲೆ ಆಯಾ ತಾಲೂಕಿನ ಸಿಡಿಪಿಒ ಕಚೇರಿ ಅಥವಾ ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿನ ಗೃಹಲಕ್ಷ್ಮಿಗಾಗಿಯೇ ಸ್ಥಾಪಿಸಿರುವ ಕೌಂಟರ್‌ನಲ್ಲಿ ನೋಂದಣಿ ಕಾರ್ಯವನ್ನು ಮಾಡಿಸಿಕೊಳ್ಳಬೇಕು, ಹೀಗೆ ನೋಂದಣಿ ಮಾಡಿಸಿಕೊಂಡ ನಂತರ ಕನಿಷ್ಠ ಒಂದು ತಿಂಗಳಾದರೂ ಕಾದರೆ ಗೃಹಲಕ್ಷ್ಮಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಒಂದು ತಿಂಗಳಾದ ನಂತರವೂ ಖಾತೆಗೆ 2 ಸಾವಿರ ಬಾರದಿದ್ದರೆ ಸಿಡಿಪಿಒ ಕಚೇರಿಗೆ ತೆರಳಿ ತಮ್ಮ ಅರ್ಜಿಯ ಸ್ಥಿತಿ ಏನಾಗಿದೆ ಎಂಬುದನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ನೋಂದಣಿಗೆ ಇರುವ ಸಮಸ್ಯೆಗಳನ್ನು ನಿವಾರಿಸುವಂತೆ ಕೋಲಾರ ಜಿಲ್ಲೆಯ 156 ಗ್ರಾಮ ಪಿಡಿಒಗಳಿಗೂ ವ್ಯಾಟ್ಸಾಪ್ ಗುಂಪಿನ ಮೂಲಕ ಮಾಹಿತಿ ನೀಡುತ್ತಿದ್ದು, ಆಯಾ ದಿನದ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿಕೊಂಡ ನಂತರವೂ 2 ಸಾವಿರ ಅನುದಾನ ಬ್ಯಾಂಕ್ ಖಾತೆಗೆ ಜಮೆಯಾಗದಿ ರುವವರು ಆಯಾ ತಾಲೂಕಿನ ಸಿಡಿಪಿಒ ಕಚೇರಿಗಳಿಗೆ ಹೋಗಿ ಅಲ್ಲಿನ ಕೌಂಟರ್‌ಗಳಲ್ಲಿ ತಮ್ಮ ಅರ್ಜಿಯ ಸ್ಥಿತಿ ಪರಿಶೀಲಿಸಿಕೊಂಡು ನೋಡಲ್ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಅವಕಾಶ ಕಲ್ಪಿಸಲಾಗಿದ್ದು, ಮಹಿಳೆಯರು ಈ ಸೌಲಭ್ಯವನ್ನು ಸದುಪಯೋಗಿಸಿಕೊಳ್ಳಬಹುದು. – ಎಂ.ಮುದ್ದಣ್ಣ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೋಲಾರ
-ಕೆ.ಎಸ್.ಗಣೇಶ್