ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಬಳಕೆಗೆ ಬಿಲ್‌ನಲ್ಲಿ ಮಾಸಿಕ ಸಂಪೂರ್ಣ ಉಚಿತ ಪಡೆಯುತ್ತಿದ್ದ ಗ್ರಾಹಕರಿಗೆ ಇದೀಗ ಬೇಸಿಗೆಯ ಬಿಸಿ ಪರಿಣಾಮ ಗ್ರಾಹಕರ ಜೇಬಿಗೆ ಬೆಸ್ಕಾಂನ ವಿದ್ಯುತ್ ಬಿಲ್ ತೀವ್ರ ಹೊರೆಯಾಗಿ ಪರಿಣಮಿಸಿದೆ.
ಹೌದು, ಬೇಸಿಗೆಯಿಂದ ಸರ್ಕಾರ ನಿಗದಿಪಡಿಸಿರುವ ನಿಗದಿತ ಯೂನಿಟ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ತಮ್ಮ ಗೃಹ ಬಳಕೆಗೆ ವಿದ್ಯುತ್ ಬಳಸುತ್ತಿರುವ ಪರಿಣಾಮ ಈಗ ಸಂಪೂರ್ಣ ವಿದ್ಯುತ್ ಬಿಲ್ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೇಸಿಗೆ ಯಿಂದ ಗೃಹಜ್ಯೋತಿ ಗ್ರಾಹಕರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಅಧಿಕ ಪ್ರಮಾಣದಲ್ಲಿ ವಿದ್ಯುತ್ ಬಳಕೆ: ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಯ 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಪ್ರಮಾಣಕ್ಕೆ ಹೆಚ್ಚುವರಿಯಾಗಿ ಶೇ.10 ರಷ್ಟು ಹೆಚ್ಚುವರಿ ಯೂನಿಟ್ ವಿದ್ಯುತ್ ಸೇರಿಸಿ ಯೋಜನೆಯ ಪ್ರಯೋಜನ ಒದಗಿಸಿದೆ. ಅಂದರೆ ಪ್ರತಿ ತಿಂಗಳು 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದೆ. ಪ್ರತಿ ಮನೆಯು ಪ್ರತಿ ತಿಂಗಳು ಬಳಸುವ ಒಟ್ಟು ಯೂನಿಟ್ ಸರಾಸರಿ ಲೆಕ್ಕಚಾರದಲ್ಲಿ ವಿದ್ಯುತ್ ಬಳಕೆಯನ್ನು ಉಚಿತಗೊಳಿಸಿದೆ. ಅದರೆ ಜೊತೆಗೆ ಹೆಚ್ಚುವರಿಯಾಗಿ 10 ಯೂನಿಟ್ ವಿದ್ಯುತ್‌ನ್ನು ಸೇರಿಸಿದೆ. ಅಂದರೆ ಒಂದು ಕುಟುಂಬ ಪ್ರತಿ ತಿಂಗಳು 60 ರಿಂದ 70 ಯೂನಿಟ್ ಬಳಕೆ ಮಾಡುತ್ತಿದ್ದರೆ ಅದಕ್ಕೆ ಹೆಚ್ಚುವರಿ 10 ಯೂನಿಟ್ ಸೇರಿಸಿದರೆ ಪ್ರತಿ ಕುಟುಂಬಕ್ಕೆ 70 ರಿಂದ 80 ಯೂನಿಟ್‌ನಷ್ಟು ವಿದ್ಯುತ್ ಉಚಿತವಾಗಿಯೆ ಸಿಗುತ್ತಿದೆ. ಆದರೆ ಬೇಸಿಗೆ ಪರಿಣಾಮ ಈಗ ಗೃಹ ಬಳಕೆಗೆ ಹೆಚ್ಚು ವಿದ್ಯುತ್ ಬಳಕೆ ಆಗುತ್ತಿದೆ. ಹೀಗಾಗಿ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ವಿದ್ಯುತ್‌ನ್ನು ಗೃಹಜ್ಯೋತಿ ಗ್ರಾಹಕರು ಬಳಸುತ್ತಿರು ವುದರಿಂದ ಇದೀಗ ಸಂಪೂರ್ಣ ವಿದ್ಯುತ್ ಬಿಲ್ ಪಾವತಿಸುವ ಅನಿರ್ವಾಯತೆಯನ್ನು ಬೇಸಿಗೆ ಸೃಷ್ಟಿಸಿದೆ. ಇದರಿಂದ ಆರೇಳು ತಿಂಗಳಿಂದ ಗೃಹ ಜ್ಯೋತಿ ಯೋಜನೆಯಡಿ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯುತ್ತಿದ್ದ ಗ್ರಾಹಕರಿಗೆ ಈಗ ವಿದ್ಯುತ್ ಬಳಕೆಗೆ ಸಂಪೂರ್ಣ ಬಿಲ್ ಪಾವತಿಸುವಂತೆ ಬೆಸ್ಕಾಂ ವಿತರಿಸಿರುವ ದುಬಾರಿ ಬಿಲ್ ರಸೀದಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ವಿದ್ಯುತ್ ಬಿಲ್ ಶಾಕ್! :
ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಕಡಿಮೆ ವಿದ್ಯುತ್ ಬಳಸಿ ಇದುವರೆಗೂ ಬಿಲ್‌ನಲ್ಲಿ ಸಂಪೂರ್ಣ ಉಚಿತ ಪಡೆಯುತ್ತಿದ್ದ ಗ್ರಾಹಕರಿಗೆ ಮಾರ್ಚ್ ತಿಂಗಳ ವಿದ್ಯುತ್ ಬಿಲ್ ನೋಡಿ ಶಾಕ್ ಆಗಿದೆ. ಬೇಸಿಗೆಯಿಂದ ಮನೆಗಳಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದ್ದು ಇದರ ಪರಿಣಾಮ ಗೃಹಜ್ಯೋತಿ ಯೋಜನೆಯಡಿ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವಿದ್ಯುತ್ ಬಳಕೆಗೆ ಬೆಸ್ಕಾಂ ಸಂಪೂರ್ಣ ಬಿಲ್ ವಿಧಿಸಿದ್ದು, ಕೆಲ ಮನೆಗಳಿಗೆ 400, 500, 1000 ರೂ. ವರೆಗೂ ಹಣ ಪಾವತಿಸುವಂತೆ ವಿದ್ಯುತ್ ಬಿಲ್ ನೋಡಿ ಗ್ರಾಹಕರು ದಂಗಾಗಿದ್ದಾರೆ.
ಬೇಸಿಗೆ ಪರಿಣಾಮ ವಿದ್ಯುತ್: ಬಳಕೆ ಹೆಚ್ಚಳ:
ಬೇಸಿಗೆಯ ಪರಿಣಾಮ ಮನೆಗಳಲ್ಲಿ ವಿಪರೀತ ಸೆಕೆ ಹೆಚ್ಚಾಗಿದ್ದು ಇದರಿಂದಾಗಿ ಬಿಸಿಯಿಂದ ಪಾರಾಗಲು ಮನೆಗಳಲ್ಲಿ ಫ್ಯಾನ್‌ಗಳ ಜೊತೆ ಕೂಲರ್‌ಗಳ ಹಾಗೂ ಪ್ರಿಡ್ಜ್ಗಳ ಬಳಕೆ ಕೂಡ ಹೆಚ್ಚಾಗಿದೆ. ಇದರಿಂದ ಗೃಹ ಜ್ಯೋತಿ ಯೋಜನೆಯಡಿ ನಿಗದಿಪಡಿಸಿದ್ದ ಯೂನಿಟ್ ವಿದ್ಯುತ್ ಪ್ರಮಾಣಕ್ಕಿಂತ ಅಧಿಕವಾಗಿ ವಿದ್ಯುತ್ ಬಳಕೆ ಆಗುತ್ತಿರುವ ಪರಿಣಾಮ ಗ್ರಾಹಕರು ಈಗ ಗೃಹ ಜ್ಯೋತಿ ಯೋಜನೆಯಿಂದ ವಿನಾಯಿತಿ ಸಿಗದೇ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ ಪಾವತಿಸುವಂತಾಗಿದೆ.
– ಕಾಗತಿ ನಾಗರಾಜಪ್ಪ