Advertisement

Gruha Jyothi Scheme: ಜಿಲ್ಲೆಯ 2.35 ಲಕ್ಷ ಮನೆಗಳಲ್ಲಿ ಗೃಹಜ್ಯೋತಿ

03:44 PM Aug 28, 2023 | Team Udayavani |

ಚಾಮರಾಜನಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿಗೆ ಜಿಲ್ಲೆಯಲ್ಲಿ 2.35 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಶೇ.85.45 ಪ್ರಗತಿ ಸಾಧಿಸಲಾಗಿದೆ. ಈ ಯೋಜನೆಯಡಿ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಒದಗಿಸಲಾಗುತ್ತಿದೆ.

Advertisement

ರಾಜ್ಯದ ಎಲ್ಲಾ ಗೃಹ ಬಳಕೆ ವಿದ್ಯುತ್‌ ಗ್ರಾಹಕರು ಯೋಜನೆಗೆ ಅರ್ಹರಾಗಿದ್ದಾರೆ. 2022-23ನೇ ಸಾಲಿನ ಏಪ್ರಿಲ್‌ ನಿಂದ ಮಾರ್ಚ್‌ವರೆಗೆ ಗೃಹಬಳಕೆ ವಿದ್ಯುತ್‌ ಗ್ರಾಹಕರು ಬಳಸಿದ ಒಟ್ಟಾರೆ ವಿದ್ಯುತ್‌ ಯೂನಿಟ್‌ ಗೆ ಶೇ.10 ಯೂನಿಟ್‌ ಅನ್ನು ಸೇರಿಸಿ 12 ತಿಂಗಳಿಗೆ ಭಾಗಿಸಿದಾಗ ಬರುವಷ್ಟು ಯೂನಿಟ್‌ ನಷ್ಟು ಉಚಿತ ವಿದ್ಯುತ್‌ ನೀಡಲಾಗುತ್ತದೆ. ಇದು 200 ಯೂನಿಟ್‌ವರೆಗೂ ಉಚಿತವಿರುತ್ತದೆ. ಗೃಹ ಬಳಕೆ ಗ್ರಾಹಕರಿಂದ ಅರ್ಜಿ ನೋಂದಣಿ ಪ್ರಕ್ರಿಯೆ ಜೂ.23ರಿಂದ ಅಧಿಕೃತವಾಗಿ ಪ್ರಾರಂಭ ವಾಗಿದ್ದು, ಜುಲೈ ತಿಂಗಳಿಂದ ಗೃಹಜ್ಯೋತಿ ಯೋಜನೆ ಸಂಪೂರ್ಣ ಪ್ರಯೋಜನ ದೊರೆಯುತ್ತಿದೆ.

ಜಿಲ್ಲೆಯಲ್ಲೂ ಆ.5 ರಂದು ಚಾಲನೆ ದೊರೆತಿದೆ. ಜುಲೈ ತಿಂಗಳ ವಿದ್ಯುತ್‌ ಬಳಕೆ ಶೂನ್ಯ ಬಿಲ್‌ ವಿತರಣೆ ಮಾಡುವ ಮೂಲಕ ಜನರಿಗೆ ಸರ್ಕಾರದ ಉಚಿತ ವಿದ್ಯುತ್‌ ಯೋಜನೆ ತಲುಪುತ್ತಿದೆ. 2.35 ಲಕ್ಷ ನೋಂದಣಿ: ಜಿಲ್ಲೆಯಲ್ಲಿ ಒಟ್ಟು 2,35,341 ಅರ್ಜಿ ನೋಂದಾಯಿಸಲಾಗಿದೆ. ಒಟ್ಟಾರೆ ಶೇ. 85.45 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ಅರ್ಹರಾಗಿದ್ದಾರೆ.

ಚಾಮರಾಜನಗರ ವಿಭಾಗದಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕು ಬರಲಿದ್ದು ಈ ಎರಡು ತಾಲೂಕುಗಳಲ್ಲಿ ಒಟ್ಟಾರೆ 1,38,483 ಅರ್ಜಿ ನೋಂದಣಿಯಾಗಿದ್ದು ಶೇ.87.39 ಪ್ರಗತಿಯಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 87,070 ಅರ್ಜಿ ನೋಂದಣಿಯಾಗಿದ್ದು ಶೇ. 87.48 ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ 51,413 ಅರ್ಜಿ ನೋಂದಣಿಯಾಗಿದ್ದು ಶೇ. 87.24 ಪ್ರಗತಿಯಾಗಿದೆ.

ಕೊಳ್ಳೇಗಾಲ ವಿಭಾಗಕ್ಕೆ ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ತಾಲೂಕು ಒಳಪಡಲಿದ್ದು ಒಟ್ಟಾರೆ ಈ ವಿಭಾಗದಲ್ಲಿ 96,858 ಅರ್ಜಿ ನೋಂದಾಯಿ ಸಲಾಗಿದ್ದು ಶೇ. 82.82 ಪ್ರಗತಿಯಾಗಿದೆ. ಕೊಳ್ಳೇಗಾಲ ತಾಲೂಕಿನಲ್ಲಿ 40,744 ಅರ್ಜಿ ನೋಂದಣಿಯಾಗಿದ್ದು ಶೇ.83.53, ಹನೂರು ತಾಲೂಕಿನಲ್ಲಿ 39,621 ಅರ್ಜಿ ನೋಂದಣಿಯಾಗಿದ್ದು ಶೇ. 82.29 ಪ್ರಗತಿಯಾಗಿದೆ.

Advertisement

ಯಳಂದೂರು ತಾಲೂಕಿನಲ್ಲಿ 16,493 ಅರ್ಜಿ ನೋಂದಾಯಿಸಿದ್ದು ಶೇ.82.39 ಪ್ರಗತಿಯಾಗಿದೆ. ಜುಲೈ ತಿಂಗಳ ಬಿಲ್‌ ಆಗಸ್ಟ್‌ನಲ್ಲಿ ಬಂದಿದೆ. 200 ಯೂನಿಟ್‌ನೊಳಗೆ ಸರಾಸರಿ ಬಳಕೆ ಮೀರದ ಗ್ರಾಹಕರಿಗೆ ಶೂನ್ಯ ಬಿಲ್‌ ನೀಡಲಾಗಿದೆ. ಇದರಿಂದ ಬಳಕೆದಾರರು ಸಂತಸಗೊಂಡಿದ್ದಾರೆ.

ಕಾಲಮಿತಿ ಇಲ್ಲ: ಗೃಹಜ್ಯೋತಿ ಯೋಜನೆಯಡಿ ಅರ್ಜಿ ನೋಂದಣಿಗೆ ಯಾವುದೇ ಕಾಲಮಿತಿ ನಿಗದಿ ಮಾಡಲಾಗಿಲ್ಲ. ಆಯಾ ತಿಂಗಳ 27ರವರೆಗೆ ಅರ್ಜಿ ನೋಂದಾಯಿಸಿದ ಗೃಹ ಬಳಕೆ ಗ್ರಾಹಕರಿಗೆ ನಂತರದ ತಿಂಗಳಲ್ಲಿ ಯೋಜನೆ ಪ್ರಯೋಜನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.

ಕಡಿಮೆ ವಿದ್ಯುತ್‌ ಬಳಸಿದವರು ಹಣ ಪಾವತಿಸಬೇಕು!: ಈ ಉಚಿತ ವಿದ್ಯುತ್‌ ಯೋಜನೆಯಲ್ಲಿ ಕಳೆದ ಆರ್ಥಿಕ ವರ್ಷದ ಸರಾಸರಿ ಬಳಕೆ ಲೆಕ್ಕಕ್ಕೆ ತೆಗೆದುಕೊಂಡಿರುವುದರಿಂದ 200 ಯೂನಿಟ್‌ ವರೆಗೂ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ದೊರೆತಿದೆ. ಆದರೆ, ಕಡಿಮೆ ಬಳಕೆ ಮಾಡುತ್ತಿದ್ದು ಉಚಿತ ಸರಾಸರಿ ದಾಟಿದ ಗ್ರಾಹಕರು ಹೆಚ್ಚುವರಿ ಮೊತ್ತ ಪಾವತಿಸಿದ್ದಾರೆ! ರಾಜ್ಯ ಸರ್ಕಾರ 200 ಯೂನಿಟ್‌ ಮೀರದೆ ಬಳಸುವ ಗ್ರಾಹಕರಿಗೆ ಶೂನ್ಯ ಬಿಲ್‌ ನೀಡುತ್ತದೆ. ಇದರನ್ವಯ ಕಳೆದ ಆರ್ಥಿಕ ವರ್ಷದಲ್ಲಿ ಸರಾಸರಿ ತಿಂಗಳಿಗೆ 185-190 ಯೂನಿಟ್‌ ಬಳಸುತ್ತಿದ್ದ ಗ್ರಾಹಕರಿಗೆ ಯೋಜನೆ ಸಂಪೂರ್ಣ ಲಾಭ ದೊರಕುತ್ತದೆ! ಅಂದರೆ ಅವರು ಜುಲೈ ತಿಂಗಳಲ್ಲಿ 190 ಯೂನಿಟ್‌ ಬಳಸಿದ್ದರೂ ಶೂನ್ಯ ಬಿಲ್‌ ಬರುತ್ತದೆ. ಇದಕ್ಕೆ ವಿರುದ್ಧವಾಗಿ ಕಳೆದ ಆರ್ಥಿಕ ವರ್ಷದಲ್ಲಿ ತಿಂಗಳ ಸರಾಸರಿ 35 ಯೂನಿಟ್‌ ಬಳಸಿದ್ದ ಗ್ರಾಹಕರಿಗೆ ಕಳೆದ ಜುಲೈನಲ್ಲಿ 45 ಯೂನಿಟ್‌ ಬಳಸಿದ್ದರೆ, ಹೆಚ್ಚುವರಿ 10 ಯೂನಿಟ್‌ಗೆ ಬಿಲ್‌ ಬಂದಿದೆ! ಪಕ್ಕದ ಮನೆಯವರು 190 ಯೂನಿಟ್‌ ಬಳಸಿದ್ದಾರೆ ಅವರಿಗೆ ಶೂನ್ಯ ಬಿಲ್‌. ನಾವು ಕೇವಲ 45 ಯೂನಿಟ್‌ ಬಳಸಿದ್ದೇವೆ. ನಮಗೆ ಬಿಲ್‌ ಬಂದಿದೆ. ಇದು ಸರಿಯೇ? ಎಂದು ಕೆಲವು ಗ್ರಾಹಕರು ಪ್ರಶ್ನಿಸುತ್ತಾರೆ. ಆದರೆ,

ಬಗ್ಗೆ ಸೆಸ್ಕ್ ಅಧಿಕಾರಿಗಳು ನೀಡುವ ಸ್ಪಷ್ಟನೆ ಹೀಗಿದೆ: ಗ್ರಾಹಕರು ತಾವು ಹಿಂದೆ ಎಷ್ಟು ಯೂನಿಟ್‌ ಬಳಸುತ್ತಿದ್ದರೋ, ಅಷ್ಟೇ ಯೂನಿಟ್‌ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಅನವಶ್ಯಕವಾಗಿ, ಅವರ ಅಗತ್ಯವನ್ನೂ ಮೀರಿ ಬಳಸಬಾರದೆಂಬ ಉದ್ದೇಶ ಈ ಸರಾಸರಿ ಯೋಜನೆಯಲ್ಲಿದೆ. ಸರ್ಕಾರದ ಈ ನಿರ್ಧಾರ ಬಹುತೇಕ ಸರಿ ಇರಬಹುದು. ಆದರೆ, ಕೆಲವು ಪ್ರಕರಣಗಳಲ್ಲಿ ಪ್ರಾಮಾಣಿಕ ಗ್ರಾಹಕರಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂಬ ದೂರುಗಳಿವೆ. ಉದಾಹರಣೆಗೆ, ಬಾಣಂತನಕ್ಕಾಗಿ ತವರು ಮನೆಗೆ ಹೆಂಡತಿ ಹೋಗಿ ಏಳೆಂಟು ತಿಂಗಳಾಗಿರುತ್ತದೆ. ಗಂಡ ಒಬ್ಬನೇ ಮನೆಯಲ್ಲಿದ್ದು ಹೆಚ್ಚಿನ ವಿದ್ಯುತ್‌ ಬಳಕೆ ಆಗಿರುವುದಿಲ್ಲ. ಹೆಂಡತಿ ತವರು ಮನೆಯಿಂದ ಹಿಂದಿರುಗಿದಾಗ, ಹೆಚ್ಚಿನ ವಿದ್ಯುತ್‌ ಬಳಕೆ ಆಗುತ್ತಿದೆ. ಹೀಗಾದಾಗ ಇವರು ಕೇವಲ 50-60 ಯೂನಿಟ್‌ ಬಳಸಿದರೂ ಬಿಲ್‌ ತರಬೇಕು. ಈ ನಿಯಮದಲ್ಲಿ ಕೆಲವು ಬದಲಾವಣೆ ತರಬೇಕು ಎಂದು ಬಳಕೆದಾರರು ಒತ್ತಾಯಿಸಿದ್ದಾರೆ.

ಸರ್ಕಾರ ಪರಿಹಾರ ಕಂಡುಕೊಳ್ಳಲಿ: ಇದಲ್ಲದೇ ಈಗಾಗಲೇ ಗೀಸರ್‌, ಫ್ರಿಜ್‌, ಐರನ್‌ ಬಾಕ್ಸ್‌, ಸ್ಮಾರ್ಟ್‌ ಟಿವಿ, ವಾಷಿಂಗ್‌ ಮೆಷಿನ್‌ ನಂಥ ಉಪಕರಣ ಹೊಂದಿರುವವರು 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಬಳಸಬಹುದು. ಅವರ ಸರಾಸರಿ ಬಳಕೆ ಹೆಚ್ಚಿರುತ್ತದೆ. ಈಗ, ಕೊಂಡವರಿಗೆ ಕೇವಲ 100 ಯೂನಿಟ್‌ ಬಳಸಿದರೂ ಬಿಲ್‌ ಬರುತ್ತದೆ. ಇದು ಅಸಹಜ ನ್ಯಾಯವಲ್ಲವೇ ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ. ಸರ್ಕಾರ ಇದಕ್ಕೊಂದು ಪರಿಹಾರ ಕಂಡು ಹಿಡಿಯಬೇಕೆಂದು ಗ್ರಾಹಕರು ಒತ್ತಾಯಿಸಿದ್ದಾರೆ.

ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿದ ನಮಗೆ ಜುಲೈ ತಿಂಗಳ ಬಳಕೆ ಶೂನ್ಯ ಬಿಲ್‌ ಬಂದಿದೆ. ಪ್ರತಿ ತಿಂಗಳು ಸುಮಾರು 750 ರಿಂದ 850 ರೂ. ಬಿಲ್‌ ಕಟ್ಟುತ್ತಿದ್ದೆವು. ನಮ್ಮ ಮಗ ಕಾರು ಚಾಲಕನಾಗಿದ್ದಾನೆ. 800 ರೂ.ಗಳ ಹೊರೆ ಕಡಿಮೆಯಾದುದು ನಮಗೆ ಬಹಳ ಉಪಕಾರವಾಗಿದೆ. ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಭಾಗ್ಯಮ್ಮ, ಚಾಮರಾಜನಗರ

ಗೃಹಜ್ಯೋತಿ ಯೋಜನೆಯ ಕೆಲ ನಿಯಮಗಳಲ್ಲಿ ಬದಲಾವಣೆ ಆಗಬೇಕು. ಈಗಾಗಲೇ ವಾಷಿಂಗ್‌ ಮೆಷಿನ್‌, ಫ್ರಿಜ್‌ ಬಳಸುತ್ತಿರುವವರಿಗೆ ಶೂನ್ಯ ಬಿಲ್‌ ಬರುತ್ತದೆ. ಈಗ ಹೊಸದಾಗಿ ಇಂಥ ಉಪಕರಣ ಕೊಂಡರೆ ನಾವು ಕಮ್ಮಿ ವಿದ್ಯುತ್‌ ಬಳಸಿದರೂ ಬಿಲ್‌ ಕಟ್ಟಬೇಕಿದೆ. ಇದಕ್ಕೆ ಸರ್ಕಾರ ಪರಿಹಾರ ಹುಡುಕಬೇಕು. ನಾಗಯ್ಯ, ಕೆಎಚ್‌ಬಿ ಕಾಲೋನಿ, ಚಾ.ನಗರ

ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next