ಬೇಸರವಾದಾಗ, ಸಿಟ್ಟು ಬಂದಾಗ ಮೌನಕ್ಕೆ ಶರಣಾಗಿ, ಖುಷಿಯಾದಾಗ ಎಲ್ಲರೊಂದಿಗೂ ಹಂಚಿಕೊಂಡು ಕುಣಿದಾಡಿ, ಒಮ್ಮೊಮ್ಮೆ ಚಿಕ್ಕ ಮಗುವಿನಂತೆ ಆಡಿ, ಕೆಲವೊಮ್ಮೆ ಗಾಂಭೀರ್ಯ ತಾಳುವ ನಿನ್ನನ್ನು ಅರ್ಥ ಮಾಡಿಕೊಳ್ಳುವುದು ತುಸು ಕಷ್ಟವೇ. ನಿನಗೇ ಗೊತ್ತಿಲ್ಲದ ಹಾಗೆ, ನೀನು ಬದುಕನ್ನು ಪ್ರೀತಿಸುವ ಶೈಲಿಯನ್ನು ನಾನು ಕಲಿತಿದ್ದೇನೆ.
ಮೊದಲ ಸಲ ನಿನ್ನ ಜೊತೆ ಮಾತಾಡಿದಾಗ, ಮುಂದೆ ಇಬ್ಬರೂ ಇಷ್ಟು ಹತ್ತಿರ ಆಗ್ತಿವಿ ಅಂತ ನಾನು ಅಂದುಕೊಂಡಿರಲಿಲ್ಲ. ನಾವಿಬ್ಬರೂ ಹತ್ತಿರವಾಗೋಕೆ ಕಾರಣ, ನಮ್ಮ ಯೋಚನಾಲಹರಿ, ಒದಗಿ ಬಂದ ಪರಿಸ್ಥಿತಿಗಳು, ನಮ್ಮ ಬೇಜಾರುಗಳು, ನೋವುಗಳು, ನಲಿವುಗಳು, ನಂಗಿಷ್ಟದ ಭಾವ ಗೀತೆಗಳು, ನಿಂಗಿಷ್ಟವಾಗಿದ್ದ ಇಂಗ್ಲಿಷ್ ಹಾಡುಗಳು… ಇತ್ಯಾದಿ ಇತ್ಯಾದಿ. ನಮ್ಮ ದುಃಖವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ ಅದು ಕಡಿಮೆ ಆಗುತ್ತಂತೆ, ಖುಷಿ ಹಂಚಿಕೊಂಡರೆ ಜಾಸ್ತಿ ಆಗುತ್ತಂತೆ. ಹಾಗೆ ಹೇಳ್ಳೋದನ್ನು ಕೇಳಿದ್ದೆ. ನಿನ್ನ ಭೇಟಿ ಆಗೋವರೆಗೂ ಆ ಮಾತಿನ ಮೇಲೆ ನಂಗೆ ನಂಬಿಕೇನೇ ಇರಲಿಲ್ಲ.
ಎಲ್ಲ ಹೆಣ್ಣಿನಲ್ಲಿಯೂ ತಾಯಿಯ ಗುಣ ಇರುತ್ತಂತೆ. ನಿನ್ನಲ್ಲಿ ಆ ಗುಣ ತುಸು ಜಾಸ್ತಿಯೇ ಇದೆ. ಯಾಕೆಂದರೆ ನಿನ್ನಲ್ಲಿ ಕಷ್ಟ ಹೇಳಿಕೊಂಡರೆ, ನನಗಿಂತ ಜಾಸ್ತಿ ನೀನೇ ಅದಕ್ಕೆ ಮರುಗುತ್ತೀಯ. ನನ್ನ ನೋವು ನಿನಗೇ ಆಗಿದೆಯೇನೋ ಅನ್ನುವ ಹಾಗೆ ಚಡಪಡಿಸ್ತೀಯ. ಸಮಸ್ಯೆಗೆ ಪರಿಹಾರ ಸೂಚಿಸ್ತೀಯ. ನಾನು ನಂಗೆ ಗೊತ್ತಿಲ್ಲದೆಯೇ ನಿನ್ನ ಮನಸ್ಸು ನೋಯಿಸಿದಾಗಲೂ, ಅವೆಲ್ಲವನ್ನು ಮರೆತು ಮತ್ತೆ ನನ್ನ ಬಗ್ಗೆ ಕಾಳಜಿ ತೋರಿಸ್ತೀಯ. ಬೇಸತ್ತ ನನ್ನ ಮನಸ್ಸಿಗೆ ಸಾಂತ್ವನ ಹೇಳಿ, ಜೊತೆಗೆ ಕೀಟಲೆ ಮಾತುಗಳನ್ನಾಡಿ ನಗಿಸೋ ನಿನ್ನ ಗುಣವಿದೆಯಲ್ಲ…
ನೀನೆಷ್ಟು ಹಸನ್ಮುಖಿಯೋ, ಅಷ್ಟೇ ಅಂತರ್ಮುಖಿಯೆಂದು ನನಗೆ ಗೊತ್ತು. ಬೇಸರವಾದಾಗ, ಸಿಟ್ಟು ಬಂದಾಗ ಮೌನಕ್ಕೆ ಶರಣಾಗಿ, ಖುಷಿಯಾದಾಗ ಎಲ್ಲರೊಂದಿಗೂ ಹಂಚಿಕೊಂಡು ಕುಣಿದಾಡಿ, ಒಮ್ಮೊಮ್ಮೆ ಚಿಕ್ಕ ಮಗುವಿನಂತೆ ಆಡಿ, ಕೆಲವೊಮ್ಮೆ ಗಾಂಭೀರ್ಯ ತಾಳುವ ನಿನ್ನನ್ನು ಅರ್ಥ ಮಾಡಿಕೊಳ್ಳುವುದು ತುಸು ಕಷ್ಟವೇ. ನಿನಗೇ ಗೊತ್ತಿಲ್ಲದ ಹಾಗೆ, ನೀನು ಬದುಕನ್ನು ಪ್ರೀತಿಸುವ ಶೈಲಿಯನ್ನು ನಾನು ಕಲಿತಿದ್ದೇನೆ. ನೂರಾರು ಪಾಠಗಳನ್ನು ಹೇಳಿ ಕೊಟ್ಟ ಗುರು ನೀನು. ಇಷ್ಟೆಲ್ಲಾ ಸದ್ಗುಣಗಳಿರೋ ನಿನ್ನನ್ನು ಯಾರು ತಾನೇ ಮೆಚ್ಚಿಕೊಳ್ಳುವುದಿಲ್ಲ ಹೇಳು? ನೀನು ನನಗೂ ಇಷ್ಟ ಆಗಿದ್ದೀಯ. ನಾನು ನಿನ್ನನ್ನು ತುಂಬಾ ಪ್ರೀತಿಸ್ತಿದ್ದೀನಿ. ನೀನು ಹೂಂ ಅಂದ್ರೆ, ನನ್ನ ಸಣ್ಣ ಸಾಮ್ರಾಜ್ಯದ ಪಟ್ಟದ ರಾಣಿಯಾಗಿ ನೋಡಿಕೊಳ್ತೀನಿ.
ಇದನ್ನೆಲ್ಲ ನಿನ್ನ ಮುಂದೆ ನೇರವಾಗಿ ಹೇಳಲಾರದಷ್ಟು ದೂರದವನೇನಲ್ಲ ನಾನು. ಅದು ನನಗೂ ಗೊತ್ತು, ನಿನಗೂ ಕೂಡ. ಆದರೆ ನೀನು ನನ್ನ ಮುಂದೆ ನಿಂತು ಮುಗುಳ್ನಕ್ಕರೆ ಸಾಕು, ಹೇಳಬೇಕಾಗಿರೋ ಎಲ್ಲ ಮಾತೂ ಮರೆತೇ ಹೋಗುತ್ತೆ. ಅದಕ್ಕೋಸ್ಕರಾನೇ ಬಿಡುವಿಲ್ಲದ ಸಮಯದಲ್ಲಿ, ಸ್ವಲ್ಪ ಪುರುಸೊತ್ತು ಮಾಡ್ಕೊಂಡು ಈ ಪತ್ರ ಬರೆದಿದ್ದೀನಿ. ನೀನೂ ಕೂಡ ಅಷ್ಟೇ ಪುರುಸೊತ್ತು ಮಾಡ್ಕೊಂಡು ಓದಿ ಪ್ರತಿಕ್ರಿಯೆ ತಿಳಿಸು.
ನಿನ್ನ ಉತ್ತರಕ್ಕಾಗಿ ಕಾದಿರುವ…
ಈರಯ್ಯ ಉಡೇಜಲ್ಲಿ, ಹುಬ್ಬಳ್ಳಿ