Advertisement

ಬೆಳೆದ ಫಸಲು ಅನಾಥಾಶ್ರಮಕ್ಕೆ, ಹುಲ್ಲು ಗೋಶಾಲೆಗೆ

12:30 AM Jul 09, 2019 | sudhir |

ಕೋಟ: ಕೃಷಿಭೂಮಿ ಹಡಿಲು ಹಾಕದಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದೆ. ಅದೇ ರೀತಿ ಕೋಟ ಸಮೀಪ ಕಾರ್ತಟ್ಟು ಚಿತ್ರಪಾಡಿಯ ಅಘೋರೇಶ್ವರ ಕಲಾರಂಗ ಎಂಬ ಸಾಮಾಜಿಕ ಸಂಸ್ಥೆ ಕಳೆದ ಐದು ವರ್ಷದಿಂದ ನಿರಂತರವಾಗಿ ಹಡಿಲುಭೂಮಿಯಲ್ಲಿ ಬೇಸಾಯ ಮಾಡಿ ಬೆಳೆದ ಫಸಲನ್ನು ಅನಾಥಶ್ರಮಕ್ಕೆ ಮತ್ತು ಹುಲ್ಲನ್ನು ಗೋಶಾಲೆಗೆ ನೀಡುವ ಮೂಲಕ ಸಮಾಜ ಸೇವೆಯೊಂದಿಗೆೆ ಯುವಕರನ್ನು ಕೃಷಿಯತ್ತ ಆಕರ್ಷಿಸುವ ಕಾರ್ಯ ಮಾಡುತ್ತಿದ್ದಾರೆ.

Advertisement

ಪ್ರತಿ ವರ್ಷ ಸುಮಾರು 50 ಸೆಂಟ್ಸ್‌ ವಿಸ್ತೀರ್ಣದ ಹಡಿಲುಭೂಮಿಯನ್ನು ಪಡೆದು ಅದರಲ್ಲಿ ಸಂಘದ ಖರ್ಚಿನಲ್ಲೇ ಭತ್ತ ನಾಟಿ ಮಾಡಲಾಗುತ್ತದೆ ಹಾಗೂ ಸಂಸ್ಥೆಯ ಸದಸ್ಯರು ಇದರ ನಿರ್ವಹಣೆಯನ್ನು ಮಾಡುತ್ತಾರೆ. ಕಟಾವಿನ ಅನಂತರ ಫಸಲಿನ್ನು ಮಾರಾಟ ಮಾಡಿ ಅದರ ಸಂಪೂರ್ಣ ಮೊತ್ತದಲ್ಲಿ ಅಕ್ಕಿಯನ್ನು ಖರೀದಿಸಿ ವೃದ್ಧಾಶ್ರಮ, ಅನಾಥಶ್ರಮಕ್ಕೆ ಕೊಡುಗೆಯಾಗಿ ನೀಡಲಾಗುತ್ತದೆ. ಹುಲ್ಲನ್ನು ಗೋಶಾಲೆಗೆ ನೀಡಲಾಗುತ್ತದೆ. ಇದುವರೆಗೆ ಕೋಟೇಶ್ವರದ ಮಾನಸಜ್ಯೋತಿ ಹಾಗೂ ಉಡುಪಿಯ ಹೊಸಬೆಳಕು ಆಶ್ರಮಕ್ಕೆ ಅಕ್ಕಿಯನ್ನು ನೀಡಿರುತ್ತಾರೆ.

ಸಾಥ್‌ ನೀಡುವ ಮಹಿಳೆಯರ ತಂಡ

ಸಂಘದ ಈ ಸಾಮಾಜಿಕ ಚಟುವಟಿಕೆಗೆ ಊರಿನವರು ನೆರವು ನೀಡುತ್ತಾರೆ ಹಾಗೂ ಪ್ರತಿ ವರ್ಷ ಸುಮಾರು 30ಮಂದಿ ಮಹಿಳೆಯರು ಉಚಿತವಾಗಿ ನಾಟಿ ಮಾಡಿಕೊಡುತ್ತಾರೆ. ಸಂಘದ ಸದಸ್ಯರೇ ಗದ್ದೆಗಿಳಿದು ಖುಷಿ-ಖುಷಿಯಾಗಿ ದುಡಿಯುತ್ತಾರೆ. ಈ ಬಾರಿ ಜು.7ರಂದು ಬೆಟ್ಲಕ್ಕಿಯ ನಿತ್ಯಾನಂದ ನಾೖರಿಯವರ ಹಡಿಲುಭೂಮಿಯಲ್ಲಿ ಸಂಘದ ಅಧ್ಯಕ್ಷ ರಾಘವೇಂದ್ರ ನಾೖರಿ ಹಾಗೂ ಕಾರ್ಯದರ್ಶಿ ರಾಧಕೃಷ್ಣ ಬ್ರಹ್ಮಾವರ ಅವರ ಉಸ್ತುವಾರಿಯಲ್ಲಿ ನಾಟಿ ನಡೆಯಿತು.

ಹಲವು ಸಂಘ-ಸಂಸ್ಥೆಗಳಿಗೆ ಪ್ರೇರಣೆ

Advertisement

ಯುವಕರನ್ನು ಕೃಷಿಕಡೆ ಆಕರ್ಷಿಸಬೇಕು ಹಾಗೂ ಇತರ ಸಂಘಟನೆಗಳಿಗೆ ಮಾದರಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಈ ವಿಶಿಷ್ಠ ಕಾರ್ಯಕ್ರಮ ಐದು ವರ್ಷದ ಹಿಂದೆ ಸಂಸ್ಥೆ ಹಾಕಿಕೊಂಡಿತು. ಇದೀಗ ಸ್ಥಳೀಯ ಹಲವಾರು ಸಂಘಟನೆಗಳು ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next