Advertisement

ರೇಷ್ಮೆ ಹಣಕ್ಕಾಗಿ ಬೆಳೆಗಾರರ ಪ್ರತಿಭಟನೆ

01:52 PM Sep 18, 2019 | Suhan S |

ರಾಮನಗರ: ರೇಷ್ಮೆ ಗೂಡು ಹರಾಜಾಗಿ 15 ದಿನಗಳು ಕಳೆದಿದೆ. ಆದರೂ ತಮ್ಮ ಖಾತೆಗೆ ಹಣ ಜಮೆ ಆಗಿಲ್ಲ ಎಂದು ಆರೋಪಿಸಿ ಸ್ಥಳೀಯ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಕರ್ನಾಟ ರೈತ ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್‌ ಮಾತನಾಡಿ, ರೇಷ್ಮೆ ಗೂಡು ಹರಾಜು ಆದ ನಂತರ ಗೂಡು ಬೆಳೆಗಾರರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವ ಹೊಣೆ ಗೂಡು ಮಾರುಕಟ್ಟೆಯ ಉಪನಿರ್ದೇಶಕರದ್ದಾಗಿದೆ. ಆದರೆ, ಎರಡು ವಾರ ಕಳೆದರೂ ಬೆಳೆಗಾರರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆನ್‌ಲೈನ್‌ ವ್ಯವಸ್ಥೆ ಕುಂಠಿತ: ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆಗೂ ಮುನ್ನ ಗೂಡು ಖರೀದಿದಾರರು ನಗದು, ಚೆಕ್‌ ಮೂಲಕ ಹರಾಜು ಮೊತ್ತವನ್ನು ಪಾವತಿಸುತ್ತಿದ್ದರು. ಚೆಕ್‌ಗಳು ಬೌನ್ಸ್‌ ಆಗುತ್ತಿತ್ತು. ನಗದು ಕೊಡಲು ತಡವಾಗುತ್ತಿತ್ತು. ದೂರದಿಂದ ಬಂದ ರೈತರಿಗೆ ಇದರಿಂದ ಅತೀವ ತೊಂದರೆಯಾಗುತ್ತಿತ್ತು. ಹೀಗಾಗಿ ಸರ್ಕಾರ ಆನ್‌ಲೈನ್‌ ಮೂಲಕ ಬೆಳೆಗಾರರ ಖಾತೆಗೆ ಹರಾಜು ಮೊತ್ತವನ್ನು ತುಂಬುವ ವ್ಯವಸ್ಥೆ ಜಾರಿ ಮಾಡಿದೆ. ನೂತನ ವ್ಯವಸ್ಥೆಯಲ್ಲಿ 48 ಗಂಟೆಗಳಲ್ಲಿ ಹಣ ಪಾವತಿಯಾಗುತ್ತಿತ್ತು. ಆದರೆ, ವ್ಯವಸ್ಥೆ ಮತ್ತೆ ಕುಂಠಿತವಾಗಿದೆ. ಬೆಳೆಗಾರರು ಮತ್ತೆ ಮೋಸ ಹೋಗುತ್ತಿದ್ದಾರೆ. 15 ದಿನಗಳಾದರು ಬೆಳೆಗಾರರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುತ್ತಿಲ್ಲ. ಇದಕ್ಕೆ ಗೂಡು ಮಾರುಕಟ್ಟೆಯ ಉಪನಿರ್ದೆಶಕರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಮಾರುಕಟ್ಟೆಯಲ್ಲಿ ಹೆಚ್ಚು ವಹಿವಾಟು: ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಹಿವಾಟು ಆಗುವ ಮಾರುಕಟ್ಟೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ ರಾಜ್ಯಗಳಿಂದ, ಕರ್ನಾಟಕದ ಹಾವೇರಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಗದಗ, ಮಂಡ್ಯ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಗಳಿಂದ ರೇಷ್ಮೆ ಬೆಳೆಗಾರರು ತಮ್ಮ ಗೂಡನ್ನು ಇಲ್ಲಿ ತಂದು ಮಾರುತ್ತಾರೆ. ಮಾರಾಟವಾದ ಕೂಡಲೇ ಹಣ ಜಮೆ ಮಾಡುವ ಉದ್ದೇಶ ಈಡೇರುತ್ತಿಲ್ಲ. ಬೆವರು ಸುರಿಸಿ ಬೆಳೆದ ಗೂಡು ಮಾರಿ ವಾರಗಟ್ಟಲೆ ಕಾದರು ಬೆಳೆಗಾರರಿಗೆ ಹಣ ಸಿಗುತ್ತಿಲ್ಲ ಎಂದು ದೂರಿದರು.

ತೂಕದಲ್ಲೂ ಮೋಸ: ಹರಾಜಾದ ಗೂಡಿಗೆ ಹಣಕ್ಕಾಗಿ ಕಾಯುವುದು ಒಂದೆಡೆಯಾದರೆ, ಮಾರುಕಟ್ಟೆಯಲ್ಲಿ ಗೂಡು ತೂಕ ಮಾಡುವುದರಲ್ಲೂ ಬೆಳೆಗಾರ ಮೋಸ ಹೋಗುತ್ತಿದ್ದಾನೆ ಎಂದು ತುಂಬೇನಹಳ್ಳಿ ಶಿವಕುಮಾರ್‌ ದೂರಿದರು.

Advertisement

ಸ್ಯಂಪಲ್ ನೋಡುವ ನೆಪದಲ್ಲಿ ಕೆಲವು ರೀಲರ್‌ಗಳು ಅರ್ಧ ಕೇಜಿಗೂ ಹೆಚ್ಚು ಪ್ರಮಾಣದ ಗೂಡು ಲಪಟಾಯಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

48 ಗಂಟೆಯೊಳಗೆ ಹಣ ವರ್ಗಾವಣೆಯಾಗಲಿ: ರೇಷ್ಮೆ ಗೂಡು ನೀಡಿದ ರೈತರಿಗೆ 48 ಗಂಟೆ ಒಳಗಾಗಿ ಹಣ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಬೇಕು. ಸರಿಯಾದ ತೂಕ ಮಾಡಬೇಕು, ಗುಣಮಟ್ಟದ ಆಧಾರದಲ್ಲಿ ಗೂಡುಗಳಿಗೆ ಸರಿಯಾದ ಬೆಲೆ ನೀಡಬೇಕು ಎಂದ ಒತ್ತಾಯಿಸಿದ ಅವರು, ಮಾರುಕಟ್ಟೆಯಲ್ಲಿ ಅವ್ಯವಸ್ಥೆಗೆ ಕಾರಣವಾಗಿರುವ ಉಪನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಆರ್‌.ಶಿವಕುಮಾರ್‌, ರೇಷ್ಮೆ ಬೆಳೆಗಾರರಾದ ಎಸ್‌.ಎನ್‌.ದೇವರಾಜು, ಸಿ.ಎಂ.ಕೃಷ್ಣ, ಚಿಕ್ಕರಾಜು, ದೇವರ ಕಗ್ಗಲಹಳ್ಳಿಯ ವೆಂಕಟಮ್ಮ, ದಾವಣಗೆರೆ ಜಿಲ್ಲೆಯ ಹನುಮಂತಪ್ಪ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next