ಹುಣಸೂರು: ಪರಿಸರ ಸಂರಕ್ಷಣೆಯಲ್ಲಿ ಅರಣ್ಯ ಹಾಗೂ ವನ್ಯಜೀವಿಗಳ ಪಾತ್ರ ಸಾಕಷ್ಟಿದ್ದು, ಅರಣ್ಯ ಸಂರಕ್ಷಿಸುವ ಜೊತೆಗೆ ನಾವು ಕಡಿದಿರುವ ಮರಗಳನ್ನು ಮತ್ತೆ ಬೆಳೆಸಬೇಕಿದೆ ಎಂದು ಹುಣಸೂರು ವಲಯ ಅರಣ್ಯಾಧಿಕಾರಿ ಸುರೇಂದ್ರ ಹೇಳಿದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವಲಯ ಪರಿಸರ ದಿನಾಚರಣೆ ಅಂಗವಾಗಿ ಅಳಲೂರು ಗೇಟ್‌ನಿಂದ ಆನೆ ಚೌಕೂರು ಗೇಟ್‌ವರೆಗೆ ಸಿಬ್ಬಂದಿ ಹಾಗೂ ಮಾಲಂಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ಲಾಸ್ಟಿಕ್ ಮತ್ತಿತರ ಅನುಪಯುಕ್ತ ವಸ್ತುಗಳನ್ನು ಆಯ್ದು, ಸಸಿ ನೆಟ್ಟು ನೀರೆರೆದರು.
ಶಾಲಾ ಮುಖ್ಯ ಶಿಕ್ಷಕ ವೃಷಬೇಂದ್ರ ಮಾತನಾಡಿ, ಪರಿಸರವೆಂದರೆ ಗಾಳಿ, ನೀರು, ಬೆಳಕು, ಸ್ವತ್ಛತೆ, ಕಾಡು, ವನ್ಯಜೀವಿಗಳು, ಇವುಗಳನ್ನು ಹಾಳು ಮಾಡದೆ ಸಂರಕ್ಷಿಸಿದಲ್ಲಿ, ಪ್ಲಾಸ್ಟಿಕನ್ನು ಬಳಸದಿರುವುದೇ ನಾವು ನಿಸರ್ಗಕ್ಕೆ ನೀಡುವ ದೊಡ್ಡ ಕಾಣಿಕೆಯಾಗಿದೆ.
ಶಾಲಾ ಮಕ್ಕಳಲ್ಲಿ ಪರಿಸರ ಉಳಿಸುವ ಕುರಿತು ಜಾಗೃತಿ ಮೂಡಿಸುತ್ತಿರುವುದು, ಅರಣ್ಯ-ವನ್ಯಜೀವಿ ಪ್ರೀತಿಯನ್ನು ಬೆಳೆಸುತ್ತಿರುವುದು ಶ್ಲಾಘನೀಯವೆಂದು ಹೇಳಿ, ಶಾಲಾ ಆವರಣದಲ್ಲಿ ಸಸಿ ನೆಟ್ಟಿರುವ ಮಕ್ಕಳು ಜೋಪಾನವಾಗಿ ಕಾಪಾಡಬೇಕೆಂದು ಸೂಚಿಸಿದರು.
ಎರಡು ಟ್ರ್ಯಾಕ್ಟರ್ ಪ್ಲಾಸ್ಟಿಕ್ ಸಂಗ್ರಹಣೆ: ಸಮಾರಂಭದ ಬಳಿಕ ಆರ್‌ಎಫ್‌ಒ ಸುರೇಂದ್ರರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಅಲಲೂರಿನಿಂದ ಆನೆಚೌಕೂರು ಗೇಟ್ ವರೆಗಿನ 4 ಕಿ.ಮೀ ದೂರದ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ರಯಾಣಿಕರು ಬಿಸಾಡಿದ್ದ ಪ್ಲಾಸ್ಟಿಕ್ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿದರು.
ಕಾರ್ಯಕ್ರಮದಲ್ಲಿ ಡಿಆರ್‌ಎಫ್‌ಒಗಳಾದ ವೀರಭದ್ರ, ರತ್ನಾಕರ, ಕೃಷ್ಣಮೂರ್ತಿ ಹಾಗೂ ಶಾಲಾ ಶಿಕ್ಷಕರು ಸಂಭ್ರಮದಿಂದ ಭಾಗವಹಿಸಿದ್ದರು.