Advertisement
ಕಣ್ಣಿಗೆ ಕಾಡಿಗೆ ಹಚ್ಚಿದರೆ, ಮುಖದ ಅಂದದಲ್ಲಿ ಗಣನೀಯ ಬದಲಾವಣೆಯಾಗುತ್ತದೆ. ಅದಕ್ಕಾಗಿಯೇ ಎಲ್ಲರೂ “ಐ ಮೇಕಪ್’ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಾರೆ. ಆದರೆ, ಕಣ್ಣುಗಳಷ್ಟೇ, ಹುಬ್ಬುಗಳು ಕೂಡಾ ಮಹತ್ವದ್ದು ಎಂಬುದನ್ನು ಹಲವರು ಮರೆತಂತಿದೆ. ಕಣ್ಣುಗಳ ಗಾತ್ರಕ್ಕೆ ಅನುಗುಣವಾಗಿ ಐ ಬ್ರೋ ಶೇಪ್ ಮಾಡಿಸಿಕೊಳ್ಳುವುದು ಇದೇ ಕಾರಣಕ್ಕೆ. ಅಡ್ಡಾದಿಡ್ಡಿಯಾಗಿ, ಗಾಢವಾಗಿ ಬೆಳೆದ ಹುಬ್ಬಿನ ಕೂದಲಿಗೊಂದು ಶೇಪ್ ಕೊಟ್ಟು, ಸರಿ ದಾರಿಗೆ ತರುವುದು ಗೊತ್ತೇ ಇದೆ. ಹಿಂದೆಲ್ಲಾ ದಪ್ಪ ಹುಬ್ಬನ್ನು, ಥಿನ್ ಐ ಬ್ರೋ (ತೆಳುವಾದ ಹುಬ್ಬು) ಆಗಿ ಮಾಡಿಸಿಕೊಳ್ಳುತ್ತಿದ್ದ ಮಹಿಳೆಯರು ಇದೀಗ ಬೋಲ್ಡ್ ಅಂಡ್ ಥಿಕ್ ಹುಬ್ಬಿಗಾಗಿ ಹಂಬಲಿಸುತ್ತಿದ್ದಾರೆ. ಯಾಕೆ, ಹೇಳಿ? ಈಗ ಟ್ರೆಂಡ್‌ನಲ್ಲಿರುವ ಸ್ಟೈಲೇ ಬೋಲ್ಡ್ ಬ್ರೋಸ್.
ಐ ಬ್ರೋ ಶೇಪ್ ಮಾಡಿಸುವುದು ಎಂದರೆ ಕೇವಲ ಥ್ರೆಡಿಂಗ್ (ದಾರದ ಸಹಾಯದಿಂದ ಹುಬ್ಬಿಗೆ ಶೇಪ್ ಕೊಡುವುದು)ಅಷ್ಟೇ ಅಲ್ಲ. ಮೈಕ್ರೋ ಬ್ಲೇಡಿಂಗ್, ಟಿಂಟಿಂಗ್, ಲ್ಯಾಮಿನೇಟಿಂಗ್‌ನಂಥ ಅನೇಕ ವಿಧಾನಗಳಿವೆ. ತಲೆ ಕೂದಲ ಬಣ್ಣಕ್ಕೆ ಹೋಲುವಂತೆ, ಹುಬ್ಬುಗಳಿಗೂ ಬಣ್ಣ ಹಚ್ಚಿಕೊಳ್ಳುವವರಿದ್ದಾರೆ. ಇಲ್ಲವಾದರೆ ತಲೆ ಕೂದಲು ಕೆಂಚು ಮತ್ತು ಹುಬ್ಬುಗಳು ಕಪ್ಪಾಗಿ ಕಾಣುತ್ತವೆ. ಎರಡೂ ಮ್ಯಾಚಿಂಗ್ ಇದ್ದರೆ ಚೆನ್ನ ಎಂಬುದು ಹಲವರ ನಂಬಿಕೆ. ಹಾಗಾಗಿ ಐ ಬ್ರೋ ಟಿಂಟಿಂಗ್‌ಗೆ ಬಹಳಷ್ಟು ಬೇಡಿಕೆ ಇದೆ. ಟಿಂಟಿಂಗ್ ತಂತ್ರ
ಟಿಂಟಿಂಗ್ ಅನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು. ಅರೆ ಶಾಶ್ವತ ಶಾಯಿ ಬಳಸಿ, ಹುಬ್ಬುಗಳ ಬಣ್ಣ, ಗಾತ್ರ ಮತ್ತು ಆಕಾರವನ್ನು ಬೇಕಾದಂತೆ ತಿದ್ದಿಕೊಳ್ಳಬಹುದು. ಇಲ್ಲವಾದರೆ, ಸಲೂನ್, ಪಾರ್ಲರ್‌ಗಳಲ್ಲಿ ಈ ಸೇವೆ ಲಭ್ಯ ಇದೆ. “ಅಟ್ ಹೋಂ ಕಿಟ್’ಗಳನ್ನು ಖರೀದಿಸಿ, ಅದನ್ನು ಬಳಸಬಹುದು. ಚೆನ್ನಾಗಿ ತೊಳೆದರೆ, ಒಂದೆರಡು ದಿನಗಳಲ್ಲಿ ಬಣ್ಣ ಮಾಸಿ ಹೋಗುತ್ತದೆ. ಹಾಗಾಗಿ ಮತ್ತೆ ಮತ್ತೆ ಪ್ರಯೋಗ ಕೂಡಾ ಮಾಡಿ ನೋಡಬಹುದು.
Related Articles
Advertisement
ಹುಬ್ಬಿನ ಮೇಲೆ ಚಿತ್ತಾರಕೆಲವರ ಹುಬ್ಬು ಚಿಕ್ಕದಾಗಿ, (ಕಣ್ಣನ್ನು ಮೇಲಿನಿಂದ ಪೂರ್ತಿಯಾಗಿ ಆವರಿಸದೆ) ಇರುತ್ತದೆ. ಅಂಥವರು, ಪೆನ್ಸಿಲ್ ಬಳಸಿ ಐ ಬ್ರೋಗಳನ್ನು ಉದ್ದವಾಗಿ ಬಿಡಿಸಿಕೊಳ್ಳಬಹುದು. ಕಾಗದದ ಮೇಲೆ ಚಿತ್ರ ಬಿಡಿಸಿದಂತೆ ಹಣೆಯ ಮೇಲೆ ಹುಬ್ಬುಗಳನ್ನು ನಿಧಾನಕ್ಕೆ ಬಿಡಿಸಬಹುದು. ಪೆನ್ಸಿಲ್‌ನ ಬಣ್ಣ, ನಿಮ್ಮ ಹುಬ್ಬಿನ ಕೂದಲಿನ ನೈಜ ಬಣ್ಣಕ್ಕೆ ಹತ್ತಿರ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ, ಉದ್ದವಾಗಿ ಬಿಡಿಸಿದ ಹುಬ್ಬುಗಳ ತುದಿ ಮಾತ್ರ ಬೇರೆ ಬಣ್ಣವಾಗಿ ಕಾಣಿಸುತ್ತದೆ. ಒಂದೊಂದೇ ಚಿಕ್ಕ ಚಿಕ್ಕ ಗೀಟನ್ನು ಎಳೆಯಬೇಕೇ ಹೊರತು ಹಿಂದೆ ಮುಂದೆ, ಆಚೆ ಈಚೆ, ಮೇಲೆ ಕೆಳಗೆ ಎಂದೆಲ್ಲಾ ಗೀಚಿದರೆ, ಕಣ್ಣಿನ ಮೇಲೆ ಕಂಬಳಿ ಹುಳ ಕುಳಿತಂತೆ ಕಾಣುತ್ತದೆ, ಹುಷಾರು! ಪೊಮೇಡ್ ಬಳಸಿ
ತಲೆ ಕೂದಲನ್ನು ಸೆಟ್ ಮಾಡಲು ಬಳಸುವ ಜೆಲ್‌ನಂಥ ವಸ್ತುವೇ ಪೊಮೇಡ್. ಬ್ರಷ್ ಬಳಸಿ ಈ ಅಂಟಿನಂಥ ವಸ್ತುವನ್ನು ಹುಬ್ಬಿನ ಮೇಲೆ ಬಿಡಿಸಿ ಅದು ನೀಟಾಗಿ ಕೂರುವಂತೆ ಮಾಡಬಹುದು. ಪೆನ್ಸಿಲ್ ನೀಡುವ ಲುಕ್‌ಗಿಂತಲೂ ಈ ಪೊಮೇಡ್ ಹುಬ್ಬುಗಳಿಗೆ ನೈಜವಾದ ಲುಕ್ ಇರುತ್ತದೆ. ಹಾಗಾಗಿ ರೂಪದರ್ಶಿಗಳು, ಮೇಕ್ ಅಪ್ ಆರ್ಟಿಸ್ಟ್ ಗಳು ಇದನ್ನೇ ಹೆಚ್ಚಾಗಿ ಬಳಸುತ್ತಾರೆ. ಹುಬ್ಬಿಗೂ ಪೌಡರ್ ಇದೆ
ಬ್ರೋ ಪೌಡರ್ ಕೂಡ ಪೆನ್ಸಿಲ್ ಮತ್ತು ಪೊಮೇಡ್‌ನ ಕೆಲಸ ಮಾಡುತ್ತದೆ. ಇದರಲ್ಲಿ ಸ್ವಲ್ಪ ಶಿಮರ್, ಗ್ಲಿಟರ್ ಅಥವಾ ಇನ್ನಿತರ ಹೊಳೆಯುವಂತ ವಸ್ತುಗಳನ್ನು ಬಳಸಿದರೆ ಹುಬ್ಬುಗಳ ಮೆರಗು ಹೆಚ್ಚುತ್ತದೆ. ಇದನ್ನು ಕೂಡ ಬ್ರಷ್ ಬಳಸಿ ಹಚ್ಚಲಾಗುತ್ತದೆ. ಮುಖಕ್ಕೆ ಬಳಸುವ ಕಾಂಪ್ಯಾಕr… ಪೌಡರ್‌ನಂತೆಯೇ ಇದು ಕೂಡ ಚಿಕ್ಕ ಡಬ್ಬದಲ್ಲಿ ಸಿಗುತ್ತದೆ. ಬ್ರೋ ಜೆಲ್
ಹುಬ್ಬುಗಳನ್ನು ಗಾಢವಾಗಿಸುವ ಇನ್ನೊಂದು ತಂತ್ರವೆಂದರೆ, ಅದು ಬ್ರೋ ಜೆಲ್. ಇದು, ಉಳಿದವಕ್ಕಿಂತ ಉತ್ತಮ ಫಲಿತಾಂಶ ನೀಡುತ್ತದೆ. ಆದರೆ, ಜೆಲ್ ಅನ್ನು ಬಳಸುವುದು ಸ್ವಲ್ಪ ಜಾಸ್ತಿ ಸಮಯ, ಶ್ರಮ ಬೇಕಾಗುತ್ತದೆ. ತಲೆ ಕೂದಲನ್ನು ಯಾವ ರೀತಿ ಹೇರ್ ಸ್ಪ್ರೆ ಬಳಸಿ, ಬೇಕಾದಂತೆ ವಿನ್ಯಾಸ ಮಾಡಲಾಗುತ್ತದೆಯೋ, ಅದೇ ರೀತಿ ಈ ಬ್ರೋ ಜೆಲ್ ಬಳಸಿ ಹುಬ್ಬುಗಳಿಗೆ ಒಂದು ಶೇಪ್ ನೀಡಲಾಗುತ್ತದೆ! ಮೊದಲು, ಸ್ಪೂಲಿ ಬ್ರಷ್ ಬಳಸಿ ಹುಬ್ಬುಗಳ ಕೂದಲನ್ನು ಬಾಚಲಾಗುತ್ತದೆ. ನಂತರ, ಈ ಬ್ರೋ ಜೆಲ್ ಅನ್ನು ಪ್ರತಿಯೊಂದು ಕೂದಲ ಎಳೆ ಎದ್ದು ಕಾಣುವಂತೆ ಹಚ್ಚಲಾಗುತ್ತದೆ. ಹುಬ್ಬಿನ ಕೂದಲು, ಒಂದಕ್ಕೊಂದು ಬಿಟ್ಟು ಕದಲದೆ ಇರಲು ಬ್ರೋ ವ್ಯಾಕ್ಯ ಬಳಸಲಾಗುತ್ತದೆ. ಇವುಗಳಲ್ಲಿ ಯಾವುದನ್ನು ಬೇಕಾದರೂ ಟ್ರೈ ಮಾಡಿ. ಆದರೆ, ನಿಮ್ಮ ಐ ಬ್ರೋಸ್, ನೋಡುವವರ ಹುಬ್ಬೇರಿಸುವಂತೆ ಇರಬೇಕು. ನೈಸರ್ಗಿಕ ಉಪಾಯ (ಬೇಕಿದ್ದರೆ ಬಳಸಿ)
ಕೆಲವರಿಗೆ ಹುಬ್ಬಿನ ಕೂದಲು ಉದುರುವ ಸಮಸ್ಯೆ ಇರುತ್ತದೆ. ಅಂಥವರ ಐ ಬ್ರೋಸ್ ತೆಳುವಾಗಿ, ಕಳಾಹೀನವಾಗಿರುತ್ತದೆ. ಅದನ್ನು ಮೇಕಪ್ ಮೂಲಕ ಸರಿಪಡಿಸುವುದು ಒಂದು ಬಗೆಯಾದರೆ, ನೈಸರ್ಗಿಕವಾಗಿ ಕೂದಲು ಹುಟ್ಟುವಂತೆ ಮಾಡುವುದು ಇನ್ನೊಂದು ಬಗೆ. ಮನೆ ಮದ್ದಿನ ಮೂಲಕ ಗಾಢವಾದ ಹುಬ್ಬಿನ ಕೂದಲನ್ನು ಪಡೆಯಲು ಹೀಗೆ ಮಾಡಿ.
-ಪ್ರತಿ ರಾತ್ರಿ ಮಲಗುವ ಮುನ್ನ, ಹರಳೆಣ್ಣೆ ಹಚ್ಚಿ ಹುಬ್ಬಿಗೆ ಮಸಾಜ್ ಮಾಡಿ.
– ಅರ್ಧ ಚಮಚ ಆಲಿವ್ ಎಣ್ಣೆಗೆ, ಎರಡು ಹನಿ ಜೇನುತುಪ್ಪ ಬೆರೆಸಿ, ಹುಬ್ಬಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತೊಳೆಯಿರಿ.
-ಕೊಬ್ಬರಿ ಎಣ್ಣೆಯನ್ನು ತುಸು ಬೆಚ್ಚಗೆ ಮಾಡಿ, ಹುಬ್ಬಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ.
-ಈರುಳ್ಳಿ ರಸವನ್ನು ಹಚ್ಚಿದರೆ, ಹುಬ್ಬಿನ ಕೂದಲು ದಟ್ಟವಾಗಿ ಬೆಳೆಯುತ್ತದೆ.
-ನೆನೆಸಿದ ಮೆಂತ್ಯೆಕಾಳನ್ನು ರುಬ್ಬಿ ಪೇಸ್ಟ್ ತಯಾರಿಸಿ, ಹುಬ್ಬಿಗೆ ಹಚ್ಚಿ.