Advertisement

ಉಸಿರಾಡಲು ಯೋಗ್ಯ ಗಾಳಿಗೆ ಹೆಚ್ಚು ಮರ ಬೆಳೆಸಿ

10:02 PM May 10, 2019 | Lakshmi GovindaRaj |

ಚಾಮರಾಜನಗರ: ಭೂಮಿಗೆ ಹಸಿರ ಹೊದಿಕೆಯಾಗಬೇಕಿದೆ ರಸ್ತೆಗಳು, ಕೆರೆ ದಂಡೆಗಳು, ವಸತಿ ಪ್ರದೇಶಗಳು, ವಸತಿ ಯೋಜನೆಗಳು, ಶಾಲೆಗಳು, ವಸತಿ ನಿಲಯಗಳು, ಆಸ್ಪತ್ರೆಗಳು, ಕಚೇರಿಗಳು ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಇದರಿಂದ ಉಸಿರಾಡಲು ಯೋಗ್ಯ ಗಾಳಿ ದೊರೆಯುತ್ತದೆ ಎಂದು ಬೆಂಗಳೂರು ರೋಟರಿ ಕೋಟಿ ನಾಟಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರನಾರಾಯಣ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಜಿಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಸಮಗ್ರ ಹಸಿರೀಕರಣ, ಜಲ ಮರುಪೂರಣದ ರೂಪುರೇಷೆಗಳು ಹಾಗೂ ಘನ, ದ್ರವ ತ್ಯಾಜ್ಯಗಳ ವೈಜ್ಞಾನಿಕ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಹಸಿರು ಉಳಿಸುವ ಕೆಲಸ ಮಾಡಿ: ಚಾಮರಾಜನಗರ ಜಿಲ್ಲೆಯು ಕೋಟಿ ನಾಟಿ ಕಾರ್ಯಕ್ರಮ ಅನುಷ್ಠಾನ ಮಾಡುವುದರಿಂದ ಹಸಿರೀಕರಣವಾಗಲಿದೆ. ಅಧಿಕಾರಿಗಳ ಜತೆ ಸ್ವಯಂಸೇವಾ ಸಂಸ್ಥೆಗಳು ಜನರ ಸ್ಪಂದನೆ ಸಹಕಾರದಿಂದ ಹಸಿರು ಉಳಿಸುವ ಕೆಲಸ ಸಾಧ್ಯವಾಗಲಿದೆ ಎಂದರು.

ಕೋಟಿ ನಾಟಿ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಗೆ 1 ಕೋಟಿ ಸಸಿಗಳನ್ನು ನೆಡುವುದರಿಂದ ಹಸಿರೀಕರಣ ಮಾಡುವುದು ನಮ್ಮ ಉದ್ದೇಶವಾಗಿದೆ. ಕೋಲಾರದಲ್ಲಿ ಈಗಾಗಲೇ 32 ಲಕ್ಷಕ್ಕೂ ಹೆಚ್ಚು ಸಸಿ ಗಿಡಗಳನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಪರಿಸರ ಮಾಲಿನ್ಯ ಕೆಲಸಕ್ಕೆ ಕಡಿವಾಣ ಹಾಕಿ: ಭಾರತ ವೈವಿದ್ಯಮಯದಿಂದ ಕೂಡಿರುವ ದೇಶ. ಪ್ರಸ್ತುತ ದಿನಗಳಲ್ಲಿ ಮಾನವನ ಸ್ವಯಂಕೃತ ಅಪರಾಧಗಳಿಂದ ಕಣಿವೆ ಪ್ರದೇಶಗಳು ಮಾಲಿನ್ಯವಾಗುತ್ತಿವೆ, ಸರೋವರ ವಿಷಪೂರಿತವಾಗಿ ಮಾರ್ಪಡುತ್ತಿವೆ, ಧ್ರುವಗಳು ಕರಗುತ್ತಿವೆ, ನದಿಗಳು ಮಾಲಿನ್ಯ ವಾಗುತ್ತಿವೆ ಇಂತಹ ಪರಿಸರ ಮಾಲಿನ್ಯ ಕೆಲಸಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.

Advertisement

ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾಡಿನ ಹಸಿರು ಪ್ರದೇಶವನ್ನು ಇನ್ನಷ್ಟು ಹಸುರೀಕರಣ ಗೊಳಿಸಿ, ಬಂಜರು ಭೂಮಿಯನ್ನು ಹಸಿರು ಮಾಡಲು ಮುಂದಾಗಬೇಕು. ಪ್ರಕೃತಿಯ ಮೂಲವಾದ ಮರ ಗಿಡಗಳನ್ನು ನಾಶ ಮಾಡದೆ ಉಳಿಸಿ ಬೆಳೆಸುವುದರಿಂದ ಮಳೆಯು, ಇಳೆಗೆ ಸರಿಯಾದ ಸಮಯಕ್ಕೆ ಬೀಳುತ್ತದೆ ಎಂದು ತಿಳಿಸಿದರು.

ಹಸಿರೀಕರಣ ಅತ್ಯಗತ್ಯ: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಮಾತನಾಡಿ, ಚಾಮರಾಜನಗರ ಜಿಲ್ಲೆಯು ಶೇ.52 ರಷ್ಟು ಕಾಡಿನ ಪ್ರದೇಶದಿಂದ ಕೂಡಿರುವುದು ವಿಶೇಷವಾಗಿದೆ. ಆದರೆ ಇನ್ನುಳಿದ ಭೂ ಪ್ರದೇಶಗಳಲ್ಲಿ ಅತಿ ಹೆಚ್ಚು ಬಂಜರು ಭೂಮಿ ಬಯಲು ಪದೇಶದಿಂದ ಕೂಡಿರುವುದರಿಂದ ಹಸಿರೀಕರಣ ಅತ್ಯಗತ್ಯವಾಗಿದೆ ಎಂದರು.

ನಾಗರಿಕರು ಶ್ರಮಿಸಿ: ಸ್ವಯಂ ಸೇವಾಸಂಸ್ಥೆಗಳು, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನತೆಯ ಸಹಭಾಗಿತ್ವದೊಂದಿಗೆ ನಮ್ಮ ನಾಡನ್ನು ಹಸಿರೀಕರಣ ಮಾಡಿ ಸುಂದರ ಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ರಕೃತಿ ಋಣ ಹಾಗೂ ತಾಯಿ ಋಣ ಎಂದೆಂದೂ ತೀರಿಸಲಾಗದು. ನಿಸರ್ಗದ ಉಳಿವಿಗೆ ಪ್ರತಿಯೊಬ್ಬ ನಾಗರಿಕ ಅದಷ್ಟೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸೂಕ್ತ ಯೋಜನೆ ರೂಪಿಸಿ: ಜಿಲ್ಲಾದ್ಯಂತ 13 ಸಾವಿರ ಕೊಳವೆ ಬಾವಿಗಳಿದ್ದು ಈ ಪೈಕಿ 8 ಸಾವಿರ ಕೊಳವೆ ಬಾವಿಗಳು ಬಳಕೆಯಲ್ಲಿವೆ ಇನ್ನುಳಿದ ಕೊಳವೆಬಾವಿಗಳು ಹಲವಾರು ಕಾರಣಗಳಿಂದ ಬಳಕೆಗೆ ಬಾರದಾಗಿದೆ. ಇದರ ಮರುಬಳಕೆ ಮಾಡುವ ನಿಟ್ಟಿನಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡು ನಾವು ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

ಅಂತರ್ಜಲ ಅಭಿವೃದ್ಧಿಗೊಳಿಸಿ: ಜಿಲ್ಲೆಯ ಅತಿ ಹೆಚ್ಚು ಭೂ ಪ್ರದೇಶವು ಕಾಡಿನಿಂದ ಕೂಡಿದ್ದರೂ ಸಹ ಪ್ರಕೃತಿ ವಿಕೋಪದಿಂದ ಮಳೆ ಸರಿಯಾದ ಸಮಯಕ್ಕೆ ಬಾರದ ಕಾರಣ ನೀರಿನ ಸಮಸ್ಯೆ ಮತ್ತು ಬರದ ಪರಿಸ್ಥಿತಿ ತಲೆದೋರುತ್ತದೆ. ಇಂತಹ ವಿಷಯದಲ್ಲಿ ಬಹಳಷ್ಟು ಎಚ್ಚರ ವಹಿಸಬೇಕು ಸಾಂಪ್ರದಾಯಿಕ ನೀರಿನ ಮೂಲಗಳ ವ್ಯವಸ್ಥೆಗಳನ್ನು ಉಳಿಸಿ ಅಂತರ್ಜಲ ಅಭಿವೃದ್ಧಿ ಪಡಿಸಬೇಕು ಎಂದು ಲತಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಉಪಕಾರ್ಯದರ್ಶಿ ಹನುಮನರಸಯ್ಯ, ಸುಸ್ಥಿರ ಅಭಿವೃದ್ದಿ ಸಂಸ್ಥೆ ರಮೇಶ್‌ ಕಿಕ್ಕೇರಿ, ರೋಟರಿ ಸಂಸ್ಥೆಯ ರವಿ ಶಂಕರ್‌, ನಾಗೇಶ್‌, ಅರಣ್ಯಾಧಿಕಾರಿ ಏಳು ಕೊಂಡಲು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next