ಮೈಸೂರು: ಕಾವೇರಿ ನದಿಪಾತ್ರದಲ್ಲಿ ಪರಿಸರ ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ಸದ್ಗುರು ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಚಾರ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಇಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಕೈಗೊಂಡಿರುವ ರ್ಯಾಲಿಗೆ ಶುಕ್ರವಾರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ವರ್ಷದಲ್ಲಿ ಅರಣ್ಯ ಪ್ರದೇಶ ದೊಡ್ಡ ಮಟ್ಟದಲ್ಲಿ ನಾಶವಾಗುತ್ತಿದೆ. ಅರಣ್ಯ ನಾಶ ತಡೆಗಟ್ಟಲು ಪ್ರತಿಯೊಬ್ಬರು ಶ್ರಮಿಸುವ ಅವಶ್ಯಕತೆ ಇದೆ. ನಮ್ಮಲ್ಲಿ ಅರಣ್ಯ ಪ್ರದೇಶ ಉತ್ತಮವಾಗಿದ್ದರೆ ಮಳೆ, ಬೆಳೆ ಕೂಡ ಉತ್ತಮವಾಗಿ ಆಗುತ್ತದೆ. ಈ ನಿಟ್ಟಿನಲ್ಲಿ ಮರಗಿಡಗಳನ್ನು ಬೆಳೆಸಲು ಹೊರಟಿರುವ ಸದ್ಗುರು ಅವರಿಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ರ್ಯಾಲಿಗೆ ಚಾಲನೆ ದೊರೆಯುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸದ್ಗುರು, ಕಾವೇರಿ ನದಿ ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಸಾಕಷ್ಟು ಜಾಗೃತಿ ಇದೆ. ಆದರೆ, ಅದು ಕಾರ್ಯರೂಪಕ್ಕೆ ಬರಬೇಕು. ಈ ಕಾರ್ಯವನ್ನು ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಬೆಳೆಸಿದ ಮರವನ್ನು ಬಳಸಿಕೊಳ್ಳುವ ಅಧಿಕಾರ ರೈತರಿಗೆ ಇಲ್ಲ. ಹೀಗಾಗಿ ರೈತರು ಗಿಡಗಳನ್ನು ನೆಟ್ಟು ಬೆಳೆಸಲು ಆಸಕ್ತಿ ತೋರುತ್ತಿಲ್ಲ. ಗಿಡಗಳನ್ನು ನೆಟ್ಟು ಬೆಳೆಸಲು ಸರ್ಕಾರ ಪ್ರೋತ್ಸಾಹ ಧನ ನೀಡುವ ಜತೆಗೆ ಬೆಳೆದ ಮರಗಳನ್ನು ಮಾರಾಟ ಮಾಡುವ ಅಧಿಕಾರ ವನ್ನು ಸಹ ರೈತರಿಗೆ ನೀಡಬೇಕು ಎಂದರು. ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರದ ಜತೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲಿಯೇ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ನಾನು ಮುಖ್ಯಮಂತ್ರಿ ಅಲ್ಲ. ಎಲ್ಲಾ ಸಮಸ್ಯೆಗಳಿಗೆ ನನ್ನಲ್ಲಿ ಪರಿಹಾರ ಇಲ್ಲ. ಆದರೆ, ಪ್ರವಾಹ ಹಾಗೂ ಬರಗಾಲಕ್ಕೆ ದೀರ್ಘಕಾಲದ ಪರಿಹಾರ ಅವಶ್ಯಕತೆ ಇದೆ. ಪ್ರವಾಹ ಮತ್ತು ಬರಗಾಲ ಭಿನ್ನವಲ್ಲ. ಇವೆರಡಕ್ಕೂ ಪ್ರಕೃತಿ ನಾಶವೇ ಕಾರಣ. ಹೀಗಾಗಿ ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯ ಆಗಬೇಕೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರ್ಯಾಲಿಯು ಹಾರ್ಡಿಂಜ್ ವೃತ್ತ, ಗನ್‌ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ರೈಲ್ವೆ ನಿಲ್ದಾಣ, ಇರ್ವಿನ್ ರಸ್ತೆ, ದೊಡ್ಡಗಡಿಯಾರ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಅಂತ್ಯಗೊಂಡಿತು.
ನಂತರ ಚಾಮುಂಡಿಬೆಟ್ಟಕ್ಕೆ ತೆರಳಿದ ಸದ್ಗುರುು ಬೆಟ್ಟದ ನಂದಿ ಆವರಣದಲ್ಲಿ ಸತ್ಸಂಗದಲ್ಲಿ ಭಾಗವಹಿಸಿ ನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಜೆಪಿ ನಗರದಲ್ಲಿ ಹಮ್ಮಿಕೊಂಡ ಲಕ್ಷ-ವೃಕ್ಷ ಆಂದೋಲನದಲ್ಲಿ ಪಾಲ್ಗೊಂಡು ಮಂಡ್ಯಕ್ಕೆ ತೆರಳಿದರು.