ಎಚ್.ಡಿ.ಕೋಟೆ: ಕನ್ನಡಕ್ಕೆ ತನ್ನದೇ ಇತಿಹಾಸ ಇದ್ದು, 10ನೇ ಶತಮಾನದಲ್ಲಿಯೇ ಕನ್ನಡ ಭಾಷೆ ಬಳಕೆಯಲ್ಲಿತ್ತು ಅನ್ನುವುದಕ್ಕೆ ಪಂಪ, ರನ್ನ, ಜನ್ನರ ಇತಿಹಾಸ ಇದೆ. 15ನೇ ಶತಮಾನದ ತನಕ ಅರಿವೇ ಇಲ್ಲದ ಆಂಗ್ಲಭಾಷೆಗೆ ಜನ ಮುಗಿಬೀಳುವುದು ಎಷ್ಟು ಸರಿ ಎಂದು ನಿವೃತ್ತ ಶಿಕ್ಷಕ ರಾಜಶೆಟ್ಟಿ ಪ್ರಶ್ನಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, 3ನೇ ಶತನಮಾನದಲ್ಲಿಯೂ ಕನ್ನಡ ಭಾಷೆ ಇತ್ತು ಎನ್ನುವುದಕ್ಕೆ ಹಲ್ಮಿಡಿ ಶಾಸನ ಸಾರಿ ಹೇಳುತ್ತಿದ್ದೆ. ಕನ್ನಡ ಭಾಷೆಯನ್ನು ಮತ್ತಷ್ಟು ಬೆಳೆಸಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಎಚ್.ಡಿ.ಕೋಟೆ ತಾಲೂಕು ಕೇರಳ ಮತ್ತು ತಮಿಳುನಾಡುಗಳ ಗಡಿಭಾಗ ಹೊಂದಿದ್ದು, ಭಾಷೆ ಉಳಿವಿಗೆ ಕನ್ನಡಗರು ಒಂದಾಗಬೇಕು ಎಂದು ಮನವಿ ಮಾಡಿದರು. ಜಿಪಂ ಅಧ್ಯಕ್ಷೆ ಪರಿಮಳಾ, ತಹಶೀಲ್ದಾರ್ ಆರ್.ಮಂಜುನಾಥ್ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಮಂದಿಯನ್ನು ಸನ್ಮಾನಿಸಲಾಯಿತು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ತಂಡ ವೇದಿಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೂ ಮುನ್ನ ಪಟ್ಟಣದ ಲಕ್ಷ್ಮೀವರದರಾಜಸ್ವಾಮಿ ದೇವಸ್ಥಾನ ಬಳಿ ಮೆರವಣಿಗೆಗೆ ಶಾಸಕರು ಚಾಲನೆ ನೀಡಿದರು. ನಾಡು ನುಡಿ ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು, ನಂದಿಧ್ವಜ ಕುಣಿತ, ಮಂಗಳ ವಾದ್ಯ, ವೀರಗಾಸೆ ಕುಣಿತ, ಶಾಲಾ ಮಕ್ಕಳ ಬ್ಯಾಂಡ್ ಪಥ ಸಂಚಲನ ಗಮನ ಸೆಳೆದವು.
ಈ ವೇಳೆ ತಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಂಜುಳಾ, ಜಿಪಂ ಸದಸ್ಯ ವೆಂಕಟಸ್ವಾಮಿ, ನುಮಾ ಸುಲ್ತಾನ, ಪುರಸಭಾ ಸದಸ್ಯರಾದ ಶಾಂತಮ್ಮ, ಸುಹಾಸಿನಿ, ಗೀತಾ, ಮಧು, ನಾಗೇಶ, ತಾಪಂ ಸದಸ್ಯರಾದ ಸ್ಟಾನಿಬ್ರಿಟೋ, ರಾಜು, ಮಂಜುಳಾ, ಕನ್ನಡ ಪ್ರಮೋದ, ಸುರೇಶ, ಸೋಮಾಚಾರ್, ಮಲ್ಲೇಶ, ಕ್ಷೇತ್ರಶಿಕ್ಷಣಾಧಿಕಾರಿ ರೇವಣ್ಣ ಇತರರಿದ್ದರು.