Advertisement

ಶಾಲಾವರಣದಲ್ಲಿ ಸಸಿ ಬೆಳೆಸಿ

02:14 PM Jun 01, 2018 | |

ಹುಣಸೂರು: ಅರಣ್ಯ ಇಲಾಖೆ ವಿವಿಧ ಯೋಜನೆಯಡಿ ರೈತರು ಮತ್ತು ಶಾಲೆಗಳಿಗೆ ಸಸಿ ವಿತರಿಸಲು ಹುಣಸೂರು ನರ್ಸರಿಯಲ್ಲಿ ವಿವಿಧ ಜಾತಿಯ 4.14 ಲಕ್ಷ ಸಸಿ ಬೆಳೆಸಲಾಗಿದೆ. ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಕಚೇರಿ ಆವರಣದಲ್ಲಿರುವ ವಿಶಾಲ ನರ್ಸರಿಯಲ್ಲಿ ಅಗತ್ಯ ಸಸಿಗಳನ್ನು  ಬೆಳೆಸಲಾಗಿದೆ.

Advertisement

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 3 ಲಕ್ಷ ಸಸಿ ಬೆಳೆಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೋಂದಾಯಿಸಿಕೊಂಡಿರುವ ತಾಲೂಕಿನ 980 ಮಂದಿ ರೈತರಿಗೆ 6*9 ಅಳತೆಯ ಪಾಲಿಥಿನ್‌ ಚೀಲದಲ್ಲಿ ಬೆಳೆಸಿರುವ 2.25 ಲಕ್ಷ ಸಿಲ್ವರ್‌ ಹಾಗೂ 8*12 ಅಳತೆಯ 75 ಸಾವಿರ ಹೆಬ್ಬೇವಿನ ಸಸಿ ಬೆಳೆಸಲಾಗಿದೆ.

ಶಾಲೆಗಳಿಗೆ 2 ಸಾವಿರ ಸಸಿ: ಮಗುವಿಗೊಂದು ಮರ-ಶಾಲೆಗೊಂದು ವನ ಯೋಜನೆಯಡಿ ಪಪ್ಪಾಯಿ, ಸೀಬೆ, ಹಲಸು, ನುಗ್ಗೆ ಹಾಗೂ ಸಂಪಿಗೆ ಹೂವಿನ ಸಸಿ ಸೇರಿದಂತೆ ಒಟ್ಟು 2 ಸಾವಿರ ಸಸಿಗಳನ್ನು ಬೆಳೆಸಲಾಗಿದೆ. ತಾಲೂಕಿನ ವಿವಿಧ ಶಾಲೆಗಳಿಗೆ ವಿತರಿಸಲಾಗುವುದು.

ಕೆಎಫ್ಡಿಎಫ್ 1 ಲಕ್ಷ ಸಸಿ: ಯೋಜನೆಯಡಿ ಸಮರ್ಥ ಭಾರತ ಫೌಂಡೇಷನ್‌ ಸ್ವಯಂಸೇವಾ ಸಂಸ್ಥೆ ವಿವಿಧೆಡೆ ಸಸಿ ವಿತರಿಸಲು ಅರಣ್ಯ ಇಲಾಖೆ ಮೂಲಕ ಶ್ರೀಗಂಧ, ನೇರಳೆ, ಮಾವು, ಹಲಸು, ಬಿಲ್ವಾರ, ನೆಲ್ಲಿ, ರಕ್ತಚಂದನ, ಹೊನ್ನೆ, ತಬಸಿ, ಬಿದಿರು ಸೇರಿದಂತೆ ವಿವಿಧ ಜಾತಿಯ ಒಂದು ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.

ರಸ್ತೆ ಬದಿಗೆ 5 ಸಾವಿರ ಸಸಿ: ರಸ್ತೆ ಬದಿ ನೆಡಲು 16*20 ಅಳತೆಯ ದೊಡ್ಡ ಚೀಲಗಳಲ್ಲಿ ಆಲ, ಅರಳಿ, ಅತ್ತಿ, ಮಾವು, ಹಲಸು, ಬಿಲ್ವಾರ, ಕಹಿಬೇವು, ಮಹಾಗನಿ, ಕಾಡು ಬಾದಾಮಿ, ಬುಗುರಿ, ಗೋಣಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ, ಈಗಾಗಲೆ 3,600 ಸಸಿಗಳನ್ನು ಬೀಜಗನಹಳ್ಳಿ- ನಾಡಪ್ಪನಹಳ್ಳಿಯ 3 ಕಿಲೋ ಮೀಟರ್‌ ಧರ್ಮಾಪುರದಿಂದ ನಾಡಪ್ಪನಹಳ್ಳಿ ಗೇಟ್‌ವರೆಗೆ 3 ಕಿಲೋ ಮೀಟರ್‌ ಹಾಗೂ ಚಲ್ಲಹಳ್ಳಿ-ಅಸ್ವಾಳು 3 ಕಿಮೀ ಸೇರಿದಂತೆ ಒಟ್ಟು 9 ಕಿಲೋ ಮೀಟರ್‌ ರಸ್ತೆಬದಿ ಸಸಿ ನೆಡಲಾಗಿದೆ.

Advertisement

ಸಿರಿಚಂದನವನ-20 ಸಾವಿರ ಶ್ರೀಗಂಧ: ಸಿರಿ ಚಂದನವನ ಯೋಜನೆಯಡಿ ಪಿರಿಯಾಪಟ್ಟಣ ಹಾಗೂ ಕೆ.ಆರ್‌.ನಗರ ತಾಲೂಕಿನಲ್ಲಿ ನೂರು ಹೆಕ್ಟೇರ್‌ ಪ್ರದೇಶದಲ್ಲಿ ಶ್ರೀಗಂಧದ ಸಸಿ ನೆಡಲು 20 ಸಾವಿರ ಸಸಿಯನ್ನು ಬೆಳೆಸಲಾಗಿದೆ. ಅಲ್ಲದೆ ರೆತರ ವಿತರಣೆಗೆ 4 ಸಾವಿರ ಶ್ರೀಗಂಧದ ಸಸಿ ಬೆಳೆಸಲಾಗಿದೆ.

ಹುಣಸೂರು ವಲಯದಲ್ಲಿ 2013-14 ರಿಂದ 2017-18ನೇ ಸಾಲಿನ ಐದು ವರ್ಷಗಳ ಅವಧಿಯಲ್ಲಿ ಕೃಷಿ ಪ್ರೋತ್ಸಾಹ ಯೋಜನೆಯಡಿ 4,162 ರೈತರಿಗೆ 14.60 ಲಕ್ಷ ಸಸಿಗಳನ್ನು ವಿತರಿಸುವ ಗುರಿ ಹೊಂದಿದ್ದು, ಈ ಬಾರಿ ಜೂನ್‌ ಮೊದಲ ವಾರದಲ್ಲೇ ರೆತರಿಗೆ ಸಸಿ ವಿತರಿಸಲಾಗುವುದು ಎಂದು ಡಿಸಿಎಫ್ ವಿಜಯಕುಮಾರ್‌ ಹೇಳಿದರು.

ಕೃಷಿ ಪ್ರೋತ್ಸಾಹ ಯೋಜನೆಯಡಿ ರೈತರು ಪಡೆಯುವ ಶ್ರೀಗಂಧ ಹಾಗೂ ಹೆಬ್ಬೇವು ಸಸಿಗೆ ತಲಾ 3 ರೂ. ಹಾಗೂ ಸಿಲ್ವರ್‌ ಸಸಿಗೆ ಒಂದು ರೂ. ಪಾವತಿಸಬೇಕು. ಈ ಯೋಜನೆಯಡಿ ಒಬ್ಬ ರೈತನಿಗೆ 500 ಸಸಿ ವಿತರಿಸಿದರೆ, ಬದುಕುಳಿದ 400 ಸಸಿಗಳಿಗೆ ಮಾತ್ರ ಪ್ರೋತ್ಸಾಹ ಧನ ಸಿಗಲಿದೆ. 
-ಶಾಂತಕುಮಾರಸ್ವಾಮಿ, ಆರ್‌ಎಫ್ಒ 

Advertisement

Udayavani is now on Telegram. Click here to join our channel and stay updated with the latest news.

Next