ಚಿಕ್ಕಬಳ್ಳಾಪುರ: ಹಿಪ್ಪುನೇರಳೆ ಗಿಡದ ಬೇರಿನಲ್ಲಿ ಬೀಡುಬಿಟ್ಟು ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸಿ ಸೊಪ್ಪಿನ ಇಳುವರಿ ಕಡಿಮೆ ಮಾಡುವ ಬೇರುಗಂಟು ಜಂತುಗಳನ್ನು ನಾಶ ಮಾಡಲು ತೋಟದಲ್ಲಿ ಚೆಂಡು ಹೂ, ಸಾಸಿವೆಯಂತಹ ಸಸ್ಯಗಳನ್ನು ಬೆಳೆಯುವುದರಿಂದ ಜಂತುಹುಳು ಸಮಸ್ಯೆಯನ್ನು ನಿಯಂತ್ರಿಸುವುದರ ಜೊತೆಗೆ ಮಣ್ಣಿನ ಆರೋಗ್ಯ ಸಂರಕ್ಷಣೆ ಸುಲಭ ಎಂದು ರೇಷ್ಮೆ ಕೃಷಿ ವಿಜ್ಞಾನಿ ಡಾ.ವಿನೋದಾ ತಿಳಿಸಿದರು.
ಜಿಲ್ಲೆಯ ಕುರುಬೂರು ಗ್ರಾಮದ ಮಂಜುನಾಥ್‌ರವರ ಹಿಪ್ಪುನೇರಳೆ ತೋಟದಲ್ಲಿ ಭಾರತೀಯ ಕೃಷಿ ಅನುದಾನ ಸಂಧಾನ ಪರಿಷತ್ ಹಾಗೂ ಕೃಷಿ ವಿಜ್ಞಾನ ಕೇಂದ್ರ ಏರ್ಪಡಿಸಲಾಗಿದ್ದ ಹಿಪ್ಪುನೇರಳೆ ತೋಟದಲ್ಲಿ ಬೇರುಗಂಟು ರೋಗದ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಕ್ರಮಗಳ ಕುರಿತು ಹೊರಾಂಗಣ ತರಬೇತಿ ಕಾರ್ಯಕ್ರಮ ಹಾಗೂ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚೆಂಡು ಹೂ, ಸಾಸಿವೆ ಸಸ್ಯ ಬೆಳೆಯಿರಿ: ಸಾಮಾನ್ಯವಾಗಿ ರೈತರು ಹಿಪ್ಪುನೇರಳೆ ತೋಟದಲ್ಲಿ ಜಂತುಹುಳು ಸಮಸ್ಯೆಗೆ ಫುರಡಾನ್ ಬಳಸುತ್ತಾರೆ. ಆದರೆ ರೇಷ್ಮೆಹುಳುವೂ ಸಹ ಒಂದು ಕೀಟವಾಗಿರುವುದರಿಂದ ಜಂತುವಿನ ಪರಿಣಾಮಕಾರಿ ಹತೋಟಿಗೆ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಜಿಕೆವಿಕೆಯಲ್ಲಿ ದೊರೆಯುವ ಸೂಕ್ಷ್ಮಾಣುಜೀವಿಗಳ ಮಿಶ್ರಣ, ಬೇವಿನ ಹಿಂಡಿ ಮತ್ತು ಬೇವಿನ ಹಿಂಡಿಯ ಜೊತೆಗೆ ನಿಮಾಹಾರಿ ಬಳಕೆ ಹಾಗೂ ಚೆಂಡು ಹೂ ಹಾಗೂ ಸಾಸಿವೆ ಸಸ್ಯಗಳನ್ನು ಬೆಳೆಯಬೇಕೆಂದರು.
ರೈತರಿಗೆ ತಿಳವಳಿಕೆ: ರೇಷ್ಮೆ ಕೃಷಿಕರಾದ ಮಂಜುನಾಥ್ ಮಾತನಾಡಿ, ರೇಷ್ಮೆ ವಿಜ್ಞಾನಿ ಡಾ. ವಿನೋದಾ ಸಲಹೆಯ ಮೇರೆಗೆ ತಮ್ಮ ತೋಟದಲ್ಲಿ ಕೈಗೊಂಡ ಕ್ಷೇತ್ರ ಪ್ರಯೋಗದ ಫಲವಾಗಿ ತಮ್ಮ ತೋಟದಲ್ಲಿ ಸೊಪ್ಪಿನ ಇಳುವರಿ ಹೆಚ್ಚಾಗಿರುವುದಲ್ಲದೇ ಜಂತುವಿನ ಬಾಧೆಯಿಂದ ಗಿಡಗಳು ಸಾಯುವುದು ಸಹ ಕಡಿಮೆಯಾಗಿದೆ. ಆದ್ದರಿಂದ ಮುಂದೆಯೂ ವಿಜ್ಞಾನಿಗಳ ಸಲಹೆಯ ಮೇರೆಗೆ ಜಂತುವಿನ ಸಮಗ್ರ ನಿರ್ವಹಣೆ ಮಾಡುವುದಾಗಿಯೂ, ಈ ಕುರಿತು ಇತರ ರೈತರಿಗೂ ತಿಳುವಳಿಕೆ ನೀಡುವುದಾಗಿಯೂ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ವಿಜ್ಞಾನಿ ಡಾ.ತನ್ವೀರ್ ಅಹಮದ್ ಹಾಗೂ ಹಿರಿಯ ಸಂಶೋಧಕ ಆನಂದ್ ಸೇರಿದಂತೆ ಸುತ್ತಮತ್ತಲಿನ ಗ್ರಾಮಗಳಾದ ಕುರುಬೂರು, ಮೈಲಾಂಡ್ಲಹಳ್ಳಿ ರೈತರು ಹಿಪ್ಪುನೇರಳೆ ಬೆಳೆ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.