Advertisement

ಗ್ರೂಪು ಸೈಲೆಂಟ್‌

06:39 PM Sep 30, 2019 | mahesh |

ಗ್ರೂಪ್‌ ಹೆಸರು- ಊರಿನ ಹೆಸರು ಮತ್ತು ದಾರಿ
ಸದಸ್ಯರು- ಅಂಜನಾ ಗಾಂವ್ಕರ್‌ ಇತರರು

Advertisement

ಎಷ್ಟೋ ಜನ ವಾಟ್ಸ್‌ ಆ್ಯಪ್‌ ಗ್ರೂಪಿಗೆ ನಮ್ಮ ಹೆಸರನ್ನು ಹೇಳದೇ ಕೇಳದೆ ಸೇರಿಸಿ ಬಿಡುತ್ತಾರೆ. ಹೀಗೆ ಸೇರಿದ ಗ್ರೂಪೊಂದು ಇಲ್ಲಿದೆ. ಅದರ ಹೆಸರು  ಆ ಊರಿನ ಹೆಸರು ಮತ್ತು ದಾರಿ.

ನಮ್ಮ ಊರಿನರಸ್ತೆಯ ಗುಂಡಿಗಳಿಂದ ತುಂಬಿ ವಿಕಾರ ರೂಪು ತಳೆದಿದ್ದರಿಂದ, ವಾಹನ ಸವಾರರು ಪಡುವ ಪಾಡು ಹೇಳ ತೀರದು. ಈ ಕುಂದು ಕೊರತೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲೆಂದೇ ಈ ವಾಟ್ಸ್‌ ಆ್ಯಪ್‌ ಗ್ರೂಪ್‌ ಹುಟ್ಟಿಕೊಂಡಿದ್ದು. ಹೀಗಾಗಿ, ನಮ್ಮ ಭಾಗದ ಎಂಎಲ್ಎ ತನಕ ತಕರಾರುಗಳನ್ನು ಕಳಿಸುವ ಕಳಕಳಿಯಿಂದ ಊರಿನವರು, ಊರಿಂದ ಹೊರಗುಳಿದವರು ಎಲ್ಲರನ್ನೂ ಇದರಲ್ಲಿ ಸೇರಿಸಲಾಗಿತ್ತು. ಒಂದಿಷ್ಟು ರಸ್ತೆಯ ಫೋಟೋ ತೆಗೆದು, ವೀಡಿಯೊ ಮಾಡಿ ಹಾಕಲಾಗುತ್ತಿತ್ತು. ಆಗ, ರಾಜಕೀಯ ವ್ಯಕ್ತಿಗಳ ಪರ ಇದ್ದವರು ಅಬ್ಬರಿಸಿ ಬೊಬ್ಬಿರಿಯುತ್ತಿದ್ದರು. ಆನಂತರ, ಗ್ರೂಪ್‌ನಲ್ಲಿ ಸದಸ್ಯರ ಸಂಖ್ಯೆ ಏರುತ್ತಲೇ ಹೋಯಿತು.

ಇತ್ತ ಕಡೆ, ರಸ್ತೆಗಳ ಸ್ಥಿತಿ ಮಾತ್ರ ಚಿಂತಾಜನಕವಾಗಿಯೇ ಮುಂದುವರಿಯಿತು. ಎಂಎಲ್ಎ,ಎಂಪಿ ಜೊತೆಗೆ ಛಾಯಾ ಚಿತ್ರ ತೆಗೆಸಿಕೊಂಡು ಗ್ರೂಪ್‌ನಲ್ಲಿ ಹಾಕುತ್ತಿದ್ದವರಲ್ಲಿ ಯಾವ ಸದಸ್ಯರೂ ರಸ್ತೆಗೆ ಮಾತ್ರ ಇಳಿಯುತ್ತಿರಲಿಲ್ಲ. ಈ ಮಧ್ಯೆ ಒಂದಷ್ಟು ಫಾರ್ವಡ್‌ ಮೆಸೇಜ್‌ಗಳು ಬೀಳುತ್ತಿದ್ದವು. ಗುಡ್‌ಮಾರ್ನಿಂಗ್‌, ಗುಡ್‌ ಈವನಿಂಗ್‌, ಗುಡ್‌ನೈಟ್‌ ಮೆಸೇಜ್‌ಗಳು ಬೀಳುತ್ತಿದ್ದವು. ಈ ಮೆಸೇಜ್‌ಗಳನ್ನು ಹಾಕುವವರು ಗ್ರಾಮದ ಯಾವ ಸಾಮಾಜಿಕ ಸಮಸ್ಯೆಗಳಿಗೂ ಕೂಡ ಸ್ಪಂದಿಸುತ್ತಿರಲಿಲ್ಲ. ಪರಿಣಾಮ, ಊರಿನದಾರಿ ಮಾತ್ರ ಬಂದವರ ಮುಗಿಸಲು ಬಾಯ್ದೆರೆದು ಮಲಗೇ ಇತ್ತು. ಇವೆಲ್ಲದರ ಜೊತೆಗೆ ಈ ಗುಂಪಿನಲ್ಲಿರುವ ಸದಸ್ಯರನ್ನು, ಅವರವರ ವೈಯುಕ್ತಿಕ ಗುಂಪಿಗೆ ಸೇರಿಸುವ ಪರಿಪಾಠ ಶುರುವಾಯಿತು. ಹೀಗಾಗಿ, ಅಲ್ಲಿಂದಲೂ ಕೂಡ ಓಡಿ ಬಂದೆ.

ಅದರಲ್ಲಂತೂ ಮನೆಯಲ್ಲಿ ಮಾಡಿದ ಲೋಕಲ್‌ ತಿಂಡಿಗಳನ್ನು ಗ್ರೂಪ್‌ನಲ್ಲಿ ಹಾಕೋರು. ಎಲ್ಲರೂ ತಿಂದವರಂತೆಯೇ ಕಾಮೆಂಟ್‌ ಮಾಡುತ್ತಿದ್ದರು. 75 ಜನರಿದ್ದ ಗುಂಪಿನಲ್ಲಿ ಆಗಾಗ ನಾನು ಬರೆದ ಲೇಖನ ಹಾಕಿದರೆ, ಅಭಿಪ್ರಾಯ ಹೇಳುತ್ತಿದ್ದವರು ನಾಲ್ಕೋ, ಐದೋ ಜನ ಮಾತ್ರ. ಒಂಥರಾ ಸ್ಟೇಟಸ್‌ಗಳನ್ನು ತೋರಿಸಲು ಮಾತ್ರ ಬಳಸಲು ಹೋಗಿ, ಗ್ರೂಪ್‌ನ ಮೂಲ ಉದ್ದೇಶ ಹಳಿ ತಪ್ಪಿಹೋಯಿತು. ಹೀಗಾಗಿ, ಒಂದು ವರ್ಷದಿಂದ ಯಾರೂ ಕೂಡ ಮೆಸೇಜ್‌ ಹಾಕುತ್ತಿಲ್ಲ. ಇಷ್ಟಾದರೂ, ದಿನಕ್ಕೆ ಒಂದು ಬಾರಿ ಆದರೂ ಅದನ್ನು ತೆರೆದು ನೋಡುತ್ತಿರುತ್ತೇನೆ.

Advertisement

ಏಕೆಂದರೆ, ಎಕ್ಸಿಟ್‌ ಆದರೆ ಮತ್ತೆಲ್ಲಿ ನನ್ನ ಸೇರಿಸಿಬಿಡುತ್ತಾರೋ ಅನ್ನೋ ಭಯದಿಂದ.

ಅಂಜನಾ ಗಾಂವ್ಕರ್‌, ದಬ್ಬೆಸಾಲ್

Advertisement

Udayavani is now on Telegram. Click here to join our channel and stay updated with the latest news.

Next