Advertisement
ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿಯವರೆಗೆ ಮನೆಯಲ್ಲಿದ್ದುಕೊಂಡೇ ಶಾಲೆಗೆ ಹೋದವನು ನಾನು. ನಂತರ ಪಿಯುಸಿಯಿಂದ ಆರಂಭವಾದ ಹಾಸ್ಟೆಲ್ ಜೀವನ ಕಟ್ಟಿಕೊಟ್ಟ ನೆನಪುಗಳ ಬುತ್ತಿ ತುಂಬಾ ರುಚಿ ರುಚಿಯಾದದ್ದು. ಮನೆಯಲ್ಲಿದ್ದಾಗ ಹಾಲು ಅನ್ನ, ಮೊಸರನ್ನ, ಜೋಳದ ಮುದ್ದೆಗೆ ಬೆಲ್ಲ ಕಲಸಿಕೊಂಡು, ಪಲ್ಯದಲ್ಲಿ ತುಪ್ಪಹಾಕಿಕೊಂಡು ಉಣ್ಣುತ್ತಿದ್ದ ನನಗೆ ಖಾರದ ರುಚಿಯೇ ಗೊತ್ತಿರಲಿಲ್ಲ. ಹಾಸ್ಟೆಲ್‌ನ ಸಾರು ಅಂದರೆ ಬಿಸಿ ನೀರಿಗೆ ಖಾರದ ಪುಡಿ ಮಿಕ್ಸ್ ಮಾಡಿಟ್ಟಂತಿರುತ್ತಿತ್ತು. ಅನ್ನಕ್ಕೆ ಕಲಸಿಕೊಂಡು ಉಣ್ಣುವಾಗ ನಾಲಿಗೆಯೊಂದಿಗೆ ಕಣ್ಣು ಕೆಂಪಾಗಿ ಉರಿಯುತ್ತಿತ್ತು. ಬಿಟ್ಟು ಹೋಗಬೇಕೆಂದುಕೊಂಡರೆ ಓದಿಗೆ ಹಾಸ್ಟೆಲ್ ವಾಸ ಅನುಕೂಲಕರವಾಗಿದ್ದರಿಂದ ಅನಿವಾರ್ಯವಾಗಿ ಉಳಿದುಕೊಳ್ಳಲು ಗಟ್ಟಿ ಮನಸು ಮಾಡಿದೆ. ವಾರಕ್ಕೊಂದು ಮೊಟ್ಟೆ ಕೊಡುವುದು ಹಾಸ್ಟೆಲ್‌ನ ನಿಯಮ. ನಾನು ಮೊಟ್ಟೆ ತಿನ್ನುತ್ತಿರಲಿಲ್ಲ. ಆ ದಿನ ಮೊಟ್ಟೆ ತಿನ್ನುವ ಗೆಳೆಯ ನನ್ನ ಜೊತೆ ಕೂತಿರುತ್ತಿದ್ದ. ಅವನು ಮೊಟ್ಟೆ ತೆಗೆದುಕೊಂಡು ಅದರ ಬದಲಾಗಿ ನನಗೊಂದು ಚಪಾತಿ ಕೊಡುತ್ತಿದ್ದ. ಈ ನಿಯಮ ಭಾವನೆಗಳಿಗೆ ತಿರುಗಿ ಇಬ್ಬರೂ ಉತ್ತಮ ಸ್ನೇಹಿತರಾದೆವು. ನಂತರ ನನಗೆ ಮೊಟ್ಟೆ ತಿನ್ನುವುದನ್ನು ಕಲಿಸಿದ.
Related Articles
Advertisement
ಹಾಸ್ಟೆಲ್ ವಿದ್ಯಾರ್ಥಿಗಳಾಗಿದ್ದ ನಮ್ಮಲ್ಲಿ ಓದಿನಲ್ಲೊಂದು ಅರೋಗ್ಯಕರ ಸ್ಪರ್ಧೆ ಇರುತ್ತಿತ್ತು. ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿದ್ದರೂ ವಿಷಯ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಗುಂಪು ಅಧ್ಯಯನದ ಲಾಭ ಎಲ್ಲರಿಗೂ ದಕ್ಕುತ್ತಿತ್ತು. ಹಾಸ್ಟೆಲ್‌ನಿಂದ ಸ್ವಲ್ಪ$ದೂರವಿದ್ದ ಮಠ ಮತ್ತು ತೋಟಕ್ಕೆ ಓದಲು ಹೋಗುತ್ತಿದ್ದೆವು. ಈ ರೀತಿಯ ಅಭ್ಯಾಸದಿಂದ ಸಹಜವಾಗಿಯೇ ಉತ್ತಮ ಫಲಿತಾಂಶ ಬರುತ್ತಿತ್ತು. ಕೆಲವು ಸ್ನೇಹಿತರು ಕಾಂಪಿಟೇಶನ್‌ನಿಂದಾಗಿ ಯಾರಿಗೂ ಕಾಣದಂತೆ ಕದ್ದು ಓದುವ ರೂಢಿಯಿಟ್ಟುಕೊಂಡಿದ್ದರು. ಎಲ್ಲರೆದುರಿಗೆ ಬೇಗ ಮಲಗಿ, ಎಲ್ಲರೂ ಮಲಗಿದ ಮೇಲೆ ಎದ್ದು ಓದುತ್ತಿದ್ದರು! ಒಬ್ಬ ಸ್ನೇಹಿತನಿದ್ದ. ಆತ ಯಾರೊಂದಿಗೂ ಓದಿನ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ತಾನು ಓದುವವವನೇ ಇಲ್ಲ ಎಂಬಂತಿರುತ್ತಿದ್ದ ಆತನ ದಿಂಬಿನ ಕೆಳಗೆ ಸದಾ ಪುಸ್ತಕವಿರುತ್ತಿತ್ತು. ಎಲ್ಲರೂ ಮಲಗಿದಾಗ ಓದುತ್ತಿದ್ದ. ಯಾರಾದರೂ ನೋಡಿದೊಡನೆ ಪುಸ್ತಕವನ್ನು ದಿಂಬಿನ ಕೆಳಗೆ ಅಡಗಿಸಿಟ್ಟು ಮಲಗಿದಂತೆ ನಟಿಸುತ್ತಿದ್ದ. ಇದರ ಮಜಾ ತೆಗೆದುಕೊಳ್ಳುತ್ತಿದ್ದ ನಾವು ಬೇಕಂತಲೇ ಅವನನ್ನು ಆಟ ಆಡಿಸುತ್ತಿದ್ದುದು ಆತನಿಗೆ ಗೊತ್ತೇ ಆಗಿರಲಿಲ್ಲ.
ಇನ್ನೊಬ್ಬ ಪಿಯುಸಿ ಸೈನ್ಸ್ ವಿಭಾಗದ ಒಬ್ಬ ಸ್ನೇಹಿತನಿದ್ದ ನಮ್ಮ ಜೊತೆ. ಆತ ಲೋಟದಲ್ಲಿ ಮರಳು ತುಂಬಿ ಅದರಲ್ಲೊಂದು ಧ್ವಜ ಸಿಕ್ಕಿಸಿ ಕುಳಿತನೆಂದರೆ ಓದಲು ಆರಂಭಿಸಿದನೆಂದರ್ಥ. ಮತ್ತೆ ಎದ್ದಾಗ ಧ್ವಜ ತೆಗೆಯುತ್ತಿದ್ದ. ರಾತ್ರಿಯೆಲ್ಲಾ ಓದಿ ಕಾಲೇಜಿನಲ್ಲಿ ನಿದ್ದೆ ಮಾಡಿ ಲೆಕ್ಚರರ್‌ರಿಂದ ಬೈಸಿಕೊಳ್ಳುತ್ತಿದ್ದ ಮತ್ತು ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆ ಬಂದಾಗ ಮಾತ್ರ ಓದುತ್ತಿದ್ದ ಸ್ನೇಹಿತರಿಗೇನೂ ಕೊರತೆಯಿರಲಿಲ್ಲ.
ಸಂತಸದ ಸಂಗತಿಯೇನೆಂದರೆ ಇವತ್ತು ಬಹುಪಾಲು ಸ್ನೇಹಿತರು ಉತ್ತಮ ಉದ್ಯೋಗದಲ್ಲಿದ್ದಾರೆ. ಹಾಸ್ಟೆಲ್‌ನ ಋಣ ತುಂಬಾ ದೊಡ್ಡದು. ಹಾಸ್ಟೆಲ್‌ನಿಂದ ಪ್ರವಾಸಕ್ಕೆ ಹೋದಾಗ ವಿದೇಶಿಯರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹೋಗಿ ಅವರು ಹೊಡೆಯಲು ಅಟ್ಟಿಸಿಕೊಂಡು ಬಂದಿದ್ದು ತಂಪು ತಂಪಾದ ನೆನಪು. ಟ್ರಂಕ್‌ಗಳ ಬೀಗ ಮುರಿದು ಊರಿನಿಂದ ತಂದಿದ್ದ ತಿಂಡಿಗಳನ್ನು ತಿನ್ನುವುದೆಂದರೆ ಎಲ್ಲಿಲ್ಲದ ಖುಷಿ. ಯಾರ ಪ್ಯಾಂಟ್ ಶರ್ಟ್‌ಗಳನ್ನು ಯಾರ್ಯಾರು ಹಾಕಿಕೊಳ್ಳುತ್ತಿದ್ದರೋ… ಅದು ಆ ಬಟ್ಟೆಗಳಿಗಷ್ಟೇ ಗೊತ್ತಿರುತ್ತಿತ್ತು. ಎಲ್ಲರ ಮೈಮೇಲೆ ಓಡಾಡುತ್ತಿದ್ದ ಸೋಪು ಸವೆದು ಹೋಗಿದೆ, ಆದರೆ ನೆನಪಿನ ಘಮಘಮ ಇನ್ನೂ ಇದೆ. ಪೇಸ್ಟುಗಳ ಬಾಯಿಗೆ ಒಡ್ಡುತ್ತಿದ್ದ ಬ್ರಶ್‌ಗಳದೆಷ್ಟೋ… ಕ್ರಿಕೆಟ್ ಮತ್ತು ಕೇರಂ ಆಡುವಾಗ ಹುಟ್ಟುತ್ತಿದ್ದ ದ್ವೇಷ- ವೈಷಮ್ಯಗಳು ಬೆಳಗಾಗುವ ಹೊತ್ತಿಗೆ ಮುಗಿದೇ ಹೋಗಿರುತ್ತಿದ್ದವು. ವರ್ಷದ ಕೊನೆಗೆ ತೆಗೆಸಿಕೊಂಡಿದ್ದ ಗ್ರೂಫ್ ಫೋಟೋ ಈಗ ಕಳೆದು ಹೋಗಿದೆ. ಆದರೆ ನೆನಪು ಹಾಗೆಯೇ ಉಳಿದಿದೆ.
ಸೋಮು ಕುದರಿಹಾಳ, ಗಂಗಾವತಿ