ಗಂಗಾವತಿ: ಹನುಮ ಜನಿಸಿದ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಹನುಮಮಾಲೆ ಧರಿಸಿದ್ದ ಭಕ್ತರು ಶನಿವಾರ ಮಾಲೆ ವಿಸರ್ಜನೆ ಮಾಡಿ ಪುನೀತರಾದರು. ಹನುಮಮಾಲಾ ಧಾರಿಗಳು ಹಾಗೂ ಖಾವಿ ಧಾರಿಗಳು ಹಾಗೂ ಹನುಮ ಭಕ್ತರ ದಂಡೇ ನೆರೆದಿದ್ದರಿಂದ ಬೆಟ್ಟಕ್ಕೆ ಕಳೆ ಬಂದಿತ್ತು.
ಒಂದು ತಿಂಗಳಿಂದ ತಾಲೂಕಾಡಳಿತ ಮತ್ತು ಅಂಜನಾದ್ರಿ ದೇಗುಲ ಕಮಿಟಿ ಅಧಿ ಕಾರಿಗಳು ನಡೆಸಿದ ಪೂರ್ವ ತಯಾರಿಯಿಂದ ಹನುಮ ಮಾಲಾಧಾರಿಗಳ ಮಾಲಾ ವಿಸರ್ಜನೆಯಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ವಾಹನ ನಿಲುಗಡೆ, ಅನ್ನ ಪ್ರಸಾದ, ದೇವರ ದರ್ಶನಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.
ಶನಿವಾರ ಬೆಳಗ್ಗೆ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ಉತ್ತರ ಭಾರತದ 108 ಸಾಧು-ಸಂತರು ಶ್ರೀ ಆಂಜನೇಯಸ್ವಾಮಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಪುಷ್ಪಾಲಂಕಾರ ಮಾಡಿದರು. ಪವಮಾನ ಹೋಮ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಈ ಬಾರಿ ಹನುಮ ಜಯಂತಿ ನಿಮಿತ್ತ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಬಸವರಾಜ ದಢೇಸುಗೂರು, ಮಾಜಿ ಸಚಿವ ಶಿವರಾಜ್ ಎಸ್. ತಂಗಡಗಿ ಸೇರಿ ಕಾಂಗ್ರೆಸ್-ಬಿಜೆಪಿಯ ನೂರಾರು ಕಾರ್ಯಕರ್ತರು ಹನುಮಮಾಲೆ ಧರಿಸಿದ್ದು ವಿಶೇಷವಾಗಿತ್ತು.
ಕಿಷ್ಕಿಂದಾ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ್ದು, ಬಜೆಟ್‌ನಲ್ಲಿರಿಸಿರುವ 100 ಕೋಟಿ ಬಜೆಟ್ ಅನ್ವಯ ಭೂ ಸ್ವಾಧೀನ ಮಾಡಿಕೊಂಡು ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಸ್ಥಳೀಯ ಜನರಿಗೆ ತೊಂದರೆಯಾಗದಂತೆ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತದೆ. ಹನುಮ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. –
ಪರಣ್ಣ ಮುನವಳ್ಳಿ