Advertisement

ನಾಗರಹಳ್ಳಿಯಲ್ಲಿ ಗುಂಪು ಘರ್ಷಣೆ: ಹಲವರಿಗೆ ಗಾಯ

04:03 PM May 28, 2019 | Suhan S |

ಕಲಬುರಗಿ: ಮದುವೆ ಮೆರವಣಿಗೆ ವೇಳೆ ಬಾಲಕನೊಬ್ಬನಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದ್ದರಿಂದ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ ನಡೆದ ಘಟನೆ ಯಡ್ರಾಮಿ ತಾಲೂಕು ನಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ರವಿವಾರ ರಾತ್ರಿ ನಾಗರಹಳ್ಳಿ ಗ್ರಾಮದ ಮದುವೆ ಮೆರವಣಿಗೆ ಗ್ರಾಮದ ಹನುಮಾನ ಮಂದಿರವರೆಗೂ ನಡೆಯುತ್ತಿತ್ತು. ಈ ವೇಳೆ ಬೈಕ್‌ವೊಂದು ಗ್ರಾಮದ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬಾಲಕನ ತಂದೆ ಬಂದ ಬಳಿಕ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಕಲ್ಲೂ ತೂರಾಟ ನಡೆದಿದೆ. ಘಟನೆ ಅರಿತು ನಾಗರಹಳ್ಳಿ ಗ್ರಾಮಕ್ಕೆ ಬಂದ ಯಡ್ರಾಮಿ ಪೊಲೀಸ್‌ ಠಾಣೆ ಪಿಎಸ್‌ಐ ವಾಹನದ ಮೇಲೂ ಕಲ್ಲು ತೂರಾಟ ನಡೆದಿದೆ. ಘಟನೆಯಿಂದ ಇಡೀ ಗ್ರಾಮವೇ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಪರಸ್ಪರ ಕಲ್ಲೂ ತೂರಾಟದಲ್ಲಿ ಎರಡೂ ಗುಂಪುಗಳ ಸುಮಾರು 14ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಗಾಯಗೊಂಡವರನ್ನು ಜೇವರ್ಗಿ ಹಾಗೂ ಕಲಬುರಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಕಲ್ಲು ತೂರಾಟ ಹಿಂದೆ ರಾಜಕೀಯ ಕಾರಣವೂ ಇದೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ವಿಜೇತರು ಪಟಾಕಿ ಹಾರಿಸುವ ಸಂದರ್ಭದಲ್ಲೂ ಸಣ್ಣದಾದ ಮಾತಿನ ಚಕಮಕಿ ನಡೆದಿತ್ತು. ಈಗ ಮದುವೆ ಮೆರವಣಿಗೆ ಮಾಡಿಕೊಂಡು ಗಲಾಟೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಮದುವೆ ಮೆರವಣಿಗೆ ಗ್ರಾಮದ ಅಗಸಿ ಕಡೆ ಬಂದಾಗ ಕೆಲವರು ಆಕ್ಷೇಪಿಸಿದ್ದಾರೆ. ಮೊನ್ನೆ ನಾವು ಪಟಾಕಿ ಹಾರಿಸಿಲು ಹೋದಾಗ ಆಕ್ಷೇಪಿಸಿದಿರಿ. ಈಗ ಏಕೆ ಇಲ್ಲಿ ಮೆರವಣಿಗೆ ತಂದಿದ್ದೀರಿ ಎಂದು ವಾಗ್ವಾದ ನಡೆದಿದೆ. ಇದೇ ಪರಸ್ಪರ ಘರ್ಷಣೆಗೆ ಕಾರಣವಾಯಿತು. ಇದೇ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಎಸ್‌ಪಿ ಭೇಟಿ: ಘಟನೆ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾಗೃತಾ ಕ್ರಮವಾಗಿ ಎರಡು ಕಡೆ 28ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಅವರಿಗೆ ನಿರ್ದೇಶನ ನೀಡಿದ್ದಾರೆ.

Advertisement

ಬೂದಿ ಮುಚ್ಚಿದ ಕೆಂಡ: ನಾಗರಹಳ್ಳಿ ಗ್ರಾಮದಲ್ಲಿ ನಡೆದ ಘಟನೆಯಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಎರಡು ಕೆಎಸ್‌ಆರ್‌ಪಿ, ನಾಲ್ಕು ಡಿಎಆರ್‌ ತುಕಡಿ ಅಲ್ಲದೇ ಇಬ್ಬರು ಡಿವೈಎಸ್‌ಪಿ, 6 ಸಿಪಿಐ, 8 ಜನ ಪಿಎಸ್‌ಐ ಸೇರಿ 50 ಸಿವಿಲ್ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next