ಹುಬ್ಬಳ್ಳಿ: ವಿಶ್ವೇಶ್ವರ ನಗರದ ಉಪ ಕಾರಾಗೃಹ ಆವರಣದಲ್ಲಿ ಬುಧವಾರ ಹಾಡಹಗಲೇ ನಡೆದ ಎರಡು ಗುಂಪುಗಳ ನಡುವಿನ ಗ್ಯಾಂಗ್‌ವಾರ್ ಪ್ರಕರಣಕ್ಕೆ ಸಂಬಂಧಿಸಿ ಅಶೋಕನಗರ ಪೊಲೀಸರು ಶ್ಯಾಮ ಜಾಧವ ಮಗ ಸೇರಿ ಐವರನ್ನು ಬಂಧಿಸಿದ್ದು, 11 ಜನರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿ ಸೆಟ್ಲಮೆಂಟ್‌ನ ಗಣೇಶ ಎಸ್. ಜಾಧವ, ಎಸ್.ಎಂ. ಕೃಷ್ಣ ನಗರದ ಅಶ್ವತ್ಥ ಬಿ. ಮಡಿವಾಳರ, ಈಶ್ವರ ನಗರದ ದೀಪಕ ಆರ್. ಚಲವಾದಿ, ವೀರೇಂದ್ರ ವಿ. ತಡಕಲ್, ಗಿರಣಿ ಚಾಳದ ಜಸ್ವಂತ್ ಜಿ. ಗಂದಲ್ (22) ಬಂಧಿತರಾಗಿದ್ದು, ಇವರಿಂದ ಒಂದು ಆಟೋ ರಿಕ್ಷಾ, ಎರಡು ಬೈಕ್, ತಲ್ವಾರ್, ಚಾಕು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಘಟನೆ ಹಿನ್ನೆಲೆ: ಜೂ. 7ರಂದು ನೇಕಾರ ನಗರದ ರಾಘವೇಂದ್ರ ಸರ್ಕಲ್ನಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಸೆಟ್ಲಮೆಂಟ್‌ನ ಶ್ಯಾಮ್ ಜಾಧವ ಗುಂಪಿನ ಹುಸೇನ್ ಬಿಜಾಪುರ ಎಂಬಾತನಿಗೆ ಚಾಕು ಇರಿದು ಗಾಯಗೊಳಿಸಲಾಗಿತ್ತು. ಈ ಕುರಿತು ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಿರೀಶ ಮಹಾಂತಶೆಟ್ಟರ, ಸೂರಿ ಸೇರಿ ಐವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.
ಉಪ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗಳಾದ ಗಿರಿ, ಸೂರಿ ಹಾಗೂ ಇತರರನ್ನು ಬುಧವಾರ ವಿಚಾರಣೆಗೆಂದು ಕೋರ್ಟ್‌ಗೆ ಕರೆದುಕೊಂಡು ಹೋಗಿ ವಾಪಸ್ ಕಾರಾಗೃಹಕ್ಕೆ ಕರೆತರಲಾಗಿತ್ತು. ಆಗ ಇವರನ್ನು ಭೇಟಿಯಾಗಲೆಂದು ಗಿರಿ ಸಹೋದರ ರವಿ ಸೇರಿದಂತೆ 8-10 ಸ್ನೇಹಿತರು ಉಪ ಕಾರಾಗೃಹಕ್ಕೆ ಬಂದಿದ್ದರು. ಇದನ್ನು ತಿಳಿದ ಗಣೇಶ ಜಾಧವ ತಂಡದ 25ಕ್ಕೂ ಅಧಿಕ ಜನರು ಇವರ ಮೇಲೆ ತಲ್ವಾರ್, ಮಚ್ಚು ಮತ್ತಿತರ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಕಾರಿನ ಗಾಜುಗಳನ್ನು ಒಡೆದು ಜಖಂಗೊಳಿಸಿದ್ದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ವೇಳೆ ರವಿ ಮತ್ತು ಜುನೇದ ಮುಲ್ಲಾ ಗಾಯಗೊಂಡಿದ್ದರು.