Advertisement

ಹೊಸ ಕಟ್ಟಡಗಳಿಗೆ ಅಂತರ್ಜಲ ಮರುಪೂರಣ ವಿನ್ಯಾಸ ಕಡ್ಡಾಯ

10:39 PM Jul 21, 2019 | Team Udayavani |

ಉಡುಪಿ: ಗ್ರಾ.ಪಂ., ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಎಲ್ಲ ಕಟ್ಟಡಗಳಿಗೆ ಅಂತರ್ಜಲ ಮರುಪೂರಣ ವಿನ್ಯಾಸವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

Advertisement

ಜಿಲ್ಲೆಯ ಅಂತರ್ಜಲ ಮಟ್ಟವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿನ ಜಲಮೂಲಗಳು ಬತ್ತಿಹೋಗುತ್ತಿವೆ. ಜನವತಿ ಪ್ರದೇಶ ಗಳಲ್ಲಿರುವ ಮನೆಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳು ಕುಡಿಯುವ ನೀರಿಗಾಗಿ ಗ್ರಾ.ಪಂ., ನಗರಸಭೆಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಬೇಸಗೆಯಲ್ಲಿ ತುರ್ತು ನೆಲೆಯಲ್ಲಿ ಟ್ಯಾಂಕರ್‌ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಮಾತ್ರವಲ್ಲದೆ ವೆಚ್ಚ ಕೂಡ ಅಧಿಕವಾಗಿರುವುದರಿಂದ ಇದಕ್ಕೆ ಪರ್ಯಾಯ ಕ್ರಮ ತೆಗೆದು ಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಅಧಿಕಾರಿಗಳಿಂದ ಪರಿಶೀಲನೆ
ನಗರ ಪ್ರದೇಶದಲ್ಲೂ ಹೊಸ ಕಟ್ಟಡ ನಿರ್ಮಾಣ ಮಾಡುವವರಿಗೆ ಅಂತರ್ಜಲ ಮರುಪೂರಣ ವಿನ್ಯಾಸ ವನ್ನು ಕಡ್ಡಾಯಗೊಳಿಸಲಾಗಿದೆ. ಹಳೆಯ ಕಟ್ಟಡಗಳನ್ನು ಹೊಂದಿರುವವ ರಿಗೆ, ಬಿಲ್ಡರ್ಗಳಿಗೆ ಈ ಬಗ್ಗೆ ನಗರ ಸಭೆಯಿಂದ ಮಾಹಿತಿ ನೀಡುವ ಕೆಲಸವೂ ಆಗುತ್ತಿದೆ. ಆಯುಕ್ತರು, ನಗರಸಭೆಯ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕವೇ ಕಂಪ್ಲೀಶನ್‌ ಸರ್ಟಿಫಿಕೇಟ್‌ ನೀಡ ಲಾಗುತ್ತದೆ. 35 ಕಟ್ಟಡಗಳಿಗೆ ಕಂಪ್ಲೀಷನ್‌ಗೆ ಅರ್ಜಿ ಬಂದಿವೆ. ಪರಿಶೀಲನೆ ನಡೆಸಿದ ಬಳಿಕ ಸರ್ಟಿಫಿಕೆಟ್‌ ನೀಡಲಾಗುತ್ತದೆ. ಸಾರ್ವಜನಿಕರೂ ಈ ಬಗ್ಗೆ ಜಾಗೃತರಾಗಿ ಇದನ್ನು ಅನುಷ್ಠಾನಗೊಳಿಸಬೇಕು.

ದೃಢೀಕರಣ ಕಡ್ಡಾಯ
ಪ್ರಸಕ್ತ ಸಾಲಿನಿಂದ ಗ್ರಾ.ಪಂ. ವತಿಯಿಂದ ನೀಡಲಾಗುವ ಕಟ್ಟಡ ಪರವಾನಿಗೆಯಲ್ಲಿ ಅಂತರ್ಜಲ ಮರುಪೂರಣ ವಿನ್ಯಾಸ ಅಳವಡಿಸಿಕೊಳ್ಳುವ ಶರ್ತ ಸಹ ಕಡ್ಡಾಯ ನಮೂದಿಸುವ ಬಗ್ಗೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿ ನಿಯಮ 1993 ಪ್ರಕರಣ 78ರಂತೆ ಗ್ರಾ.ಪಂ.ನ ಉಪವಿಧಿಯಲ್ಲಿ ಅಳವಡಿಸಿ ಕೊಂಡು ಕ್ರಮಕ್ಕೆ ಸೂಚಿಸಲಾಗಿದೆ.ಕಟ್ಟಡಗಳಿಗೆ ಡೋರ್‌ ನಂಬರ್‌ ನೀಡುವ ಪೂರ್ವದಲ್ಲಿ ಈ ವಿನ್ಯಾಸ ಅಳವಡಿಸಿಕೊಂಡಿರುವುದನ್ನು ದೃಢೀಕರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಅನಿವಾರ್ಯವೂ ಹೌದು
2019ರಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದು, ಇದನ್ನು ನಿವಾರಿಸುವುದು ಸವಾಲಿನ ಕೆಲಸವಾಗಿತ್ತು. ಆದರೂ ಜಿಲ್ಲಾಡಳಿತ ಅದನ್ನು ಯಶಸ್ವಿಯಾಗಿ ನಿಭಾಯಿಸಿತು. ಭವಿಷ್ಯತ್ತಿನ ದೃಷ್ಟಿಯಿಂದ ಎಲ್ಲ ಕಟ್ಟಡಗಳಿಗೆ ಅಂತರ್ಜಲ ಮರು ಪೂರಣ ವಿನ್ಯಾಸವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿರುವ ಜಿಲ್ಲಾಡಳಿತದ ನಿರ್ಧಾರ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಿದೆ. ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಲು ವಿಶೇಷವಾದ ವೆಚ್ಚವೇನೂ ಇಲ್ಲ. ಜನರು ಇದರ ಕುರಿತಾಗಿ ಮನಸು ಮಾಡಬೇಕಷ್ಟೆ. ಬದ್ಧತೆ ಇದ್ದಲ್ಲಿ ಅಂತರ್ಜಲ ಮರುಪೂರಣ ವಿನ್ಯಾಸವನ್ನು ಅಳವಡಿಸುವುದು ಹೊರೆಯಾಗದು. ಮುಂದಿನ ದಿನಗಳಲ್ಲಿ ಇದರ ಉಪಯೋಗವೂ ಅಪಾರವಾಗಲಿದೆ.

Advertisement

ಉದಯವಾಣಿ ಅಭಿಯಾನಕ್ಕೆ ಶ್ಲಾಘನೆ
ಉದಯವಾಣಿಯು ಉಡುಪಿ ಜಿ.ಪಂ., ನಿರ್ಮಿತಿ ಕೇಂದ್ರ ಮತ್ತು ಎಂಜಿಎಂ ಕಾಲೇಜು ಸಹಯೋಗದಲ್ಲಿ ಶನಿವಾರ ನಡೆಸಿದ ಜಲ ಸಾಕ್ಷರ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಹಲವಾರು ಮಂದಿ ಮೆಚ್ಚುಗೆ ಸೂಚಿಸಿ ತಾವೂ ಮಳೆ ಕೊಯ್ಲು ಅಳವಡಿಸುವುದಾಗಿ ತಿಳಿಸಿದ್ದಾರೆ. ಹಲವಾರು ಓದುಗರು ಪತ್ರಿಕೆಯಲ್ಲಿ ನೀಡಿದ ವಾಟ್ಸಪ್‌ ನಂಬರ್‌ಗೆ ಸಂದೇಶ ಕಳುಹಿಸಿ ತಮಗೆ ಈ ಕುರಿತಾಗಿ ಹೆಚ್ಚಿನ ಮಾಹಿತಿ ಅಗತ್ಯ ಎಂದಿದ್ದಾರೆ. ಕೆಲವರು ವೆಚ್ಚದ ಬಗ್ಗೆ ವಿಚಾರಿಸಿದ್ದಾರೆ. ಇನ್ನು ಕೆಲವರು ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಯಾವ ರೀತಿ ಅಳವಡಿಸಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಳೆ ಕೊಯ್ಲು ಅಳವಡಿಸಿಕೊಂಡು ಭವಿಷ್ಯದಲ್ಲಿ ಜಲಕ್ಷಾಮ ನಿವಾರಿಸಲು ಪತ್ರಿಕೆಯ ಜತೆ ಕೈ ಜೋಡಿಸುವುದಾಗಿ ಹಲವಾರು ಓದುಗರು ಭರವಸೆ ನೀಡಿದ್ದಾರೆ.

ಅನುಷ್ಠಾನ ಕಡ್ಡಾಯ
ನೀರಿನ ಅಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಕಟ್ಟಡಗಳಿಗೆ ಅಂತರ್ಜಲ ಮರುಪೂರಣ ವಿನ್ಯಾಸವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಿದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದು ಅತೀ ಅಗತ್ಯವಾಗಿದೆ.
-ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ

ಮಾಹಿತಿ ನೀಡುವ ಕೆಲಸ
ನಗರಸಭೆ ವ್ಯಾಪ್ತಿಯ ಎಲ್ಲ ಕಟ್ಟಡಗಳಿಗೂ ಅಂತರ್ಜಲ ಮರುಪೂರಣ ವಿನ್ಯಾಸವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಗಿದೆ. ಕಟ್ಟಡದ ಮಾಲಕರು, ಸಾರ್ವಜನಕರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದ್ದೇವೆ.
-ಆನಂದ್‌ ಕಲ್ಲೋಳಿಕರ್‌,ಪೌರಾಯುಕ್ತರು,ಉಡುಪಿ ನಗರಸಭೆ

ನೀವೂ ಅಳವಡಿಸಿ,ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿ ಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವ ರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

Advertisement

Udayavani is now on Telegram. Click here to join our channel and stay updated with the latest news.

Next