ಹಾವೇರಿ: ಜಲಾನಯನ ಯೋಜನೆಯಡಿ ಬದು ನಿರ್ಮಾಣದಿಂದ ಮಣ್ಣಿನ ಸವಕಳಿ ತಡೆಗಟ್ಟುವುದರ ಜತೆಗೆ, ಅಂತರ್ಜಲಮಟ್ಟ ಹೆಚ್ಚಳವಾಗಿ ನೀರಾವರಿ ಕ್ಷೇತ್ರ ವಿಸ್ತಾರವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಹೇಳಿದರು.
ತಾಲೂಕಿನ ನೆಗಳೂರ ಗ್ರಾಮದಲ್ಲಿ ರವಿವಾರ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ತೋಟಗಾರಿಕೆ ಹಾಗೂ ಕೃಷಿ ಅರಣ್ಯ ಗಿಡಗಳನ್ನು ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಜಮೀನಿನಲ್ಲಿ ತೋಟಗಾರಿಕೆ ಗಿಡಗಳನ್ನು ನೆಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಮತ್ತು ಸುಸ್ಥಿರ, ನಿರಂತರ ಆದಾಯ ಕೂಡ ಪಡೆಯಬಹುದು. ಆತ್ಮನಿರ್ಭರ ಯೋಜನೆಯಡಿ ಎಲ್ಲ ರೈತರು ಸುಸ್ಥಿರ ಮತ್ತು ನಿರಂತರ ಆದಾಯ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಈ ಯೋಜನೆ ಸಹಕಾರಿಯಾಗಿದೆ ಎಂದರು.
ಹಾವೇರಿ ಉಪವಿಭಾಗ-1ರ ಉಪಕೃಷಿ ನಿರ್ದೇಶಕ ಎಚ್.ಹುಲಿರಾಜ ಮಾತನಾಡಿ, ಬದುವಿನಲ್ಲಿ ಅರಣ್ಯ ಮತ್ತು ತೋಟಗಾರಿಕೆ ಗಿಡಗಳನ್ನು ನೆಡುವುದರಿಂದ ದೀರ್ಘ ಕಾಲದವರೆಗೂ ಶುದ್ಧ ಗಾಳಿ ಮತ್ತು ಬೆಳಕು ಪಡೆಯಬಹುದು. ಕೃಷಿ ಇಲಾಖೆಯಲ್ಲಿ ರೈತರಿಗೆ ಅನೇಕ ಯೋಜನೆಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ವಿವಿಧ ತಳಿಯ ತೋಟಗಾರಿಕೆ ಸಸಿಗಳನ್ನು ನೆಟ್ಟರೆ ಮಣ್ಣಿನ ಸವಕಳಿ ತಡೆಗಟ್ಟುವುದರ ಮೂಲಕ ಅದರಲ್ಲಿನ ಪೋಷಕಾಂಶಗಳನ್ನು ಕಾಯ್ದಿರಿಸಿ ರೈತರ ಮುಂದಿನ ಭವಿಷ್ಯಕ್ಕೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಮುಂದಿನ ಪೀಳಿಗೆಗೆ ಪರಿಸರವನ್ನು ಶುದ್ಧವಾಗಿರಿಸಲು ಬಹು ಉಪಯೋಗಕಾರಿಯಾಗುತ್ತದೆ ಎಂದರು.
ಕೃಷಿ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಾನಂದ ಸಿ.ಟಿ. ಹಾಗೂ ರೈತ ಅಶೋಕ ವಿಭೂತಿ ಮಾತನಾಡಿ, ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಿಡಗಳನ್ನು ನೆಡುವುದರ ಮೂಲಕ ಶುದ್ಧ ಪರಿಸರ ನಿರ್ಮಾಣ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಹಾವೇರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಡಿ.ಎಂ., ಗುತ್ತಲ ಹೋಬಳಿ ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರು, ವಲಯ ಅರಣ್ಯ ಅಧಿಕಾರಿ ಕೆ.ಆರ್. ಕುಲಕರ್ಣಿ, ಉಪವಲಯ ಅರಣ್ಯ ಅಧಿಕಾರಿ ಜೆ.ಎಸ್.ಮಹಾರಾಜಪೇಟ್, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮದ ಪ್ರಗತಿ ಪರ ರೈತ ಮುಖಂಡರು ಹಾಜರಿದ್ದರು.