Advertisement

ಕಾಸರಗೋಡು ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ

09:58 AM May 10, 2019 | Suhan S |

ಕಾಸರಗೋಡು, ಮೇ 9: ವರ್ಷದಿಂದ ವರ್ಷಕ್ಕೆ ಬಿಸಿಲ ಬೇಗೆ ಅಧಿಕವಾಗುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಈ ಕಾರಣದಿಂದ ಕಾಸರಗೋಡು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಜಿಲ್ಲೆಯ ಕೆಲವೆಡೆಗಳಲ್ಲಿ ನೀರಿನ ಬರದಿಂದಾಗಿ ಕೆಲವು ಕಿ.ಮೀ. ದೂರಕ್ಕೆ ಸಾಗಿ ನೀರು ತರಬೇಕಾದ ಪರಿಸ್ಥಿತಿ ಇದೆ.

Advertisement

ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಅಧಿಕವಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಸಂಬಂಧಪಟ್ಟ ಇಲಾಖೆಯ ವರದಿಯಲ್ಲಿ ಬಹಿರಂಗಗೊಳಿಸಿದೆ. ಕಾಸರಗೋಡು ಅಂತರ್ಜಲ ಇಲಾಖೆ ಕಳೆದ 10 ವರ್ಷಗಳಿಂದ ಸಂಗ್ರಹಿಸಿದ ಅಂಕಿಅಂಶದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ವಲಯಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ.

ಅಜಾನೂರು, ನೀಲೇಶ್ವರ, ಬದಿಯಡ್ಕ, ಕುಂಬ್ಡಾಜೆ, ಪೈವಳಿಕೆ, ಎಣ್ಮಕಜೆ, ವರ್ಕಾಡಿ, ಕಳ್ಳಾರು, ಪನತ್ತಡಿ ಮೊದಲಾದ ವಲಯಗಳಲ್ಲಿ ನಿರಂತರವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆಯೆಂದು ಕಂಡುಕೊಳ್ಳಲಾಗಿದೆ. 2008 ರಿಂದ ದಾಖಲಿಸಿಕೊಂಡ ಅಂಕಿ ಅಂಶಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿದೆ. ಆದರೆ ಕಾರಡ್ಕ, ಬೇಡಗ, ಕೊಳತ್ತೂರು, ಕುಟ್ಟಿಕ್ಕೋಲ್, ಮುಳಿಯಾರು, ಚೆಮ್ನಾಡ್‌, ಉಪ್ಪಳ, ವೆಸ್ಟ್‌ ಎಳೇರಿ, ಈಸ್ಟ್‌ ಎಳೇರಿ ಮೊದಲಾದೆಡೆ ಸಂಗ್ರಹಿಸಿದ ಅಂಕಿಅಂಶದಂತೆ ಅಂತರ್ಜಲ ಜಲ ಪ್ರಮಾಣ ಸ್ವಲ್ಪ ಮಟ್ಟಿಗೆ ಹೆಚ್ಚಳವಿದೆ ಎಂದು ತಿಳಿಯಲಾಗಿದೆ. ಆದರೆ ಈ ಜಲ ಮಟ್ಟ ದೊಡ್ಡ ಮಟ್ಟದ ಹೆಚ್ಚಳವಲ್ಲ. ಒಟ್ಟು ಅಂಕಿಅಂಶ ಸೂಚಿಸುವುದೆಂದರೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂತರ್ಜಲ ಮಟ್ಟ ಮೈನಸ್‌ ಆರು ಮೀಟರ್‌ ವರೆಗೆ ಕುಸಿದ ಸ್ಥಳವೂ ಇದೆ. ಆದರೆ ಅಂತರ್ಜಲ ಹೆಚ್ಚಳ ಕಂಡು ಬಂದಲ್ಲಿ ಒಂದು ಮೀಟರ್‌ಗಿಂತ ಅಧಿಕ ಏರಿಲ್ಲ ಎಂದು ಅಂತರ್ಜಲ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯಲ್ಲಿ ಅಂತರ್ಜಲ ಇಲಾಖೆಗೆ ಕೊಳವೆ ಬಾವಿ ಸಹಿತ 70 ಬಾವಿಗಳು ವೀಕ್ಷಿಸಲು ಇವೆ. ಈ ಬಾವಿಗಳಿಂದ ನೀರಿನ ಪ್ರಮಾಣ ಕಂಡುಕೊಳ್ಳಲಿರುವುದರಿಂದ ನೀರನ್ನು ಪಂಪ್‌ ಮಾಡುವುದಿಲ್ಲ. ಡೀಪ್‌ ಮೀಟರ್‌ ಬಳಸಿ ಜಲ ಮಟ್ಟವನ್ನು ಅಳೆಯಲಾಗುತ್ತಿದೆ. ಪ್ರತೀ ತಿಂಗಳೂ ಅಂತರ್ಜಲ ಇಲಾಖೆ ನೀರಿನ ಮಟ್ಟವನ್ನು ಅಳೆಯುತ್ತದೆ.

ವರ್ಷದಿಂದ ವರ್ಷಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಕಟ್ಟಡಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅರಣ್ಯ ಪ್ರದೇಶ ಮತ್ತು ಜಲಾಶಯಗಳು ಕಡಿಮೆಯಾಗುತ್ತಿದೆ. ಇದರಿಂದಾಗಿ ಭೂಮಿಯೊಳಗೆ ಸಹಜವಾಗಿ (ನ್ಯಾಚುರಲ್ ರೀ ಚಾರ್ಜಿಂಗ್‌) ನೀರು ಸಾಗುವುದಿಲ್ಲ. ಆದರೆ ಅದೇ ವೇಳೆ ನೀರಿನ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇದರಿಂದಾಗಿ ಅಂತರ್ಜಲ ಸಂಪತ್ತು ಕುಸಿಯುತ್ತಲೇ ಸಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಂಗು ಗುಂಡಿಗಳು, ಚೆಕ್‌ ಡ್ಯಾಂಗಳು, ತಡೆಗೋಡೆ, ಬಾವಿ ರೀಚಾರ್ಜಿಂಗ್‌ ನಿರ್ಮಿಸುವ ಮೂಲಕ ನೀರು ಸಂಗ್ರಹಿಸಲು ಸಾಧ್ಯವಾಗುವುದು ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ.

Advertisement

2006 ರಲ್ಲಿ ಜಾರಿಗೆ ಬಂದ ಅಂತರ್ಜಲ ಕಾಯ್ದೆ ಪ್ರಕಾರ ಅಂತರ್ಜಲ ಕುಸಿಯುತ್ತಿರುವ ಸ್ಥಳಗಳ ಯಾದಿಯಲ್ಲಿ ಕಾಸರಗೋಡೂ ಸೇರ್ಪಡೆಗೊಂಡಿದೆ. ಇದರಂತೆ ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ಪುತ್ತೂರು, ಚೆಂಗಳ, ಚೆಮ್ನಾಡ್‌, ಬೇಡಗ, ಕಾರಡ್ಕ, ಮುಳಿಯಾರು, ಕುಟ್ಟಿಕ್ಕೋಲ್, ದೇಲಂಪಾಡಿ ಮೊದಲಾದ ಸ್ಥಳಗಳು ಈ ಕಾಯ್ದೆಯಲ್ಲಿ ಒಳಗೊಂಡಿದೆ. ಈ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆಯಲು ಅಂತರ್ಜಲ ಇಲಾಖೆಯ ಅನುಮತಿ ಬೇಕು. ಆದರೆ ಯಾವುದೇ ಅನುಮತಿ ಪಡೆಯದೆ ಜಿಲ್ಲೆಯ ವಿವಿದೆಡೆಗಳಲ್ಲಿ ಕೊಳವೆ ಬಾವಿ ಕೊರೆಯಲಾಗುತ್ತಿದೆ.

418 ಕಿರು ಕೆರೆಗಳ ನಿರ್ಮಾಣ : ನದಿ ಜಲವನ್ನು ನೈಸರ್ಗಿಕವಾಗಿ ಸಂಗ್ರಹಿಸಿ ಜಿಲ್ಲೆಯ ನೀರಿನ ಬರಕ್ಕೆ ಶಾಶ್ವತ ಪರಿಹಾರ ಒದಗಿಸಲು ಶಾಸ್ತ್ರೀಯ ಯೋಜನೆ ಸಿದ್ಧವಾಗಿದ್ದು, ಮಂಜೇಶ್ವರ ತಾಲೂಕಿನಲ್ಲಿ 418 ಕಿರು ಕೆರೆಗಳನ್ನು ನಿರ್ಮಿಸಲಾಗುವುದು. ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೊಳಿಸುವ ನದಿತಟ ಅಭಿವೃದ್ಧಿ ಯೋಜನೆ ಅಂಗವಾಗಿ ಈ ಪ್ರಕ್ರಿಯೆ ಸಾಗುತ್ತಿದೆ. ಇದರ ಮೊದಲ ಹಂತವಾಗಿ ಮಂಜೇಶ್ವರ ತಾಲೂಕಿನ 5 ನದಿ ತಟಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಮಂಜೇಶ್ವರ, ಉಪ್ಪಳ, ಶಿರಿಯ, ಕುಂಬಳೆ, ಮೊಗ್ರಾಲ್ ನದಿಗಳ ಬದಿಯ ವಿವಿಧ ಪ್ರದೇಶಗಳಲ್ಲಿ ಕಿರು ಕೆರೆಗಳ ಸಹಿತ ಜಲಾಶಯಗಳ ನಿರ್ಮಾಣ ನಡೆಯಲಿದೆ. ಖಾಸಗಿ, ಸರಕಾರಿ ಜಾಗಗಳ ಸಹಿತ 418 ಪ್ರದೇಶಗಳನ್ನು ಈ ನಿಟ್ಟಿನಲ್ಲಿ ಪತ್ತೆಮಾಡಲಾಗಿದೆ.

ಮೇ 15ರ ಮುಂಚಿತವಾಗಿ ನಿರ್ಮಾಣ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ.

ಅಭಿವೃದ್ಧಿ ಪ್ಯಾಕೇಜ್‌ ನಿಧಿ : ಲ್ಯಾಟರೈಟ್ ಮಣ್ಣಿರುವ ಪ್ರದೇಶವಾಗಿರುವ ಮಂಜೇಶ್ವರ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅವರ ಪ್ರತ್ಯೇಕ ಆಸಕ್ತಿ ಪ್ರಕಾರ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಿರು ಕೆರೆಗಳ ನಿರ್ಮಾಣ ಯೋಜನೆ ಜಾರಿಗೊಳ್ಳಲಿದೆ. ಮುಂದನ ವರ್ಷಗಳಲ್ಲಿ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಈ ನಿಟ್ಟಿನಲ್ಲಿ 5ಸಾವಿರ ಕೆರೆಗಳನ್ನು ನಿರ್ಮಿಸುವ ಉದ್ದೇಶಗಳಿವೆ. ಯೋಜನೆಗೆ ಅಗತ್ಯವಿರುವ ನಿಧಿ ಕಾಸರಗೋಡು ಅಭಿವೃದ್ಧಿ ಪ್ಯಾಕೆಜ್‌ನಿಂದ ಬಳಸಲಾಗುವುದು.

ಪ್ರದೀಪ್‌ ಬೇಕಲ್

Advertisement

Udayavani is now on Telegram. Click here to join our channel and stay updated with the latest news.

Next