Advertisement

ಜಿಲ್ಲೆಯಲ್ಲಿ ಬತ್ತಿಹೋಗುವ ಭೀತಿಯಲ್ಲಿ ಭೂಗರ್ಭ ಜಲ

10:23 AM Jul 05, 2019 | sudhir |

ಕಾಸರಗೋಡು: ಅವೈಜ್ಞಾನಿಕತೆ ಮತ್ತು ಮುಂಜಾಗರೂಕತೆಯಿಲ್ಲದೆ ಜಲ ದುರುಪಯೋಗ ಪಡಿಸಿರುವ ಪರಿಣಾಮ ಜಿಲ್ಲೆಯಲ್ಲಿ ಭೂಗರ್ಭ ಜಲ ಬತ್ತಿಹೋಗುವ ಭೀತಿ ಎದುರಿಸುತ್ತಿದೆ.

Advertisement

ರಾಜ್ಯದಲ್ಲೇ ನೀರಿಲ್ಲದೆ ಇರುವ ಅತ್ಯಧಿಕ ಕೊಳವೆ ಬಾವಿಗಳಿರುವ ಜಿಲ್ಲೆ ಎಂಬ ಕುಖ್ಯಾತಿಯನ್ನೂ ಕಾಸರಗೋಡು ಹೊಂದಿದೆ. ಪರಿಣಾಮ ಶೀಘ್ರದಲ್ಲೇ ಬೃಹತ್‌ ದುರಂತಕ್ಕೆ ನಾಡು ಸಾಕ್ಷಿಯಾಗಲಿದೆ.

ಅನಿಯಂತ್ರಿತವಾಗಿ, ಅವೈಜ್ಞಾನಿಕವಾಗಿ ಜಿಲ್ಲೆ ಯಲ್ಲಿ ಕೊಳವೆ ಬಾವಿ ಕೊರೆದ ಪರಿಣಾಮ ಪ್ರಕೃತಿಯ ಮೇಲೆ ಭಾರೀ ಅಡ್ಡ ಪರಿಣಾಮ ಬೀರಿದೆ. ಮಳೆಯ ನೀರು ಯಾವ ಕಾರಣಕ್ಕೂ ಭೂಮಿ ಸೇರುವ ಸಾಧ್ಯತೆಯೇ ಇಲ್ಲದಂತಾದುದೂ ಭೂಗರ್ಭ ಜಲ ರೀಚಾರ್ಜ್‌ ನಡೆಯದಂತೆ ತಡೆದಿದೆ. ರಾಜ್ಯದಲ್ಲಿ ಮೊದಲ ಸಾಲಿನಲ್ಲಿ ಕಾಸರಗೋಡು ಜಿಲ್ಲೆ ಮತ್ತು ಎರಡನೇ ಸ್ಥಾನದಲ್ಲಿ ಪಾಲ್ಗಾಟ್ ಜಿಲ್ಲೆ ಅತಿ ಭೀಕರ ರೂಪದಲ್ಲಿ ನೀರಿನ ಕೊರತೆ ಅನುಭವಿಸುತ್ತಿವೆ.

ಕೇಂದ್ರ ಜಲಶಕ್ತಿ ಸಚಿವಾಲಯ ವ್ಯಾಪ್ತಿಯಲ್ಲಿ ಗ್ರೌಂಡ್‌ ವಾಟರ್‌ ಎಸ್ಟಿಮೇಷನ್‌ ಕಮಿಟಿ (ಜಿ.ಇ.ಸಿ.) 2017ನೇ ವರದಿ ಪ್ರಕಾರ ಕಾಸರಗೋಡು ಬ್ಲಾಕ್‌ನ ಶೇ. 97.68 ಭೂಗರ್ಭ ಜಲ ಬಳಕೆಯಿಂದ ಮುಗಿದುಹೋಗಿದೆ. 2013ರಲ್ಲಿ ಇದು ಶೇ. 90.52 ಆಗಿತ್ತು. ರಾಜ್ಯದಲ್ಲೇ ಇದು ಅತೀವ ಗಂಭೀರ ಸ್ಥಿತಿ ಎಂದು ಗುರುತಿಸಲಾಗಿದೆ. 2005ರಲ್ಲಿ ಕಾಸರಗೊಡು, ಕಲ್ಲಿಕೋಟೆ, ಚಿಟ್ಟೂರು (ಪಾಲ್ಗಾಟ್ ಜಿಲ್ಲೆ), ಕೊಡಂಙಲ್ಲೂರು (ತೃಶ್ಶೂರು), ಅತಿಯ್ನೂರು (ತಿರುವನಂತಪುರ) ಎಂಬ ಬ್ಲಾಕ್‌ಗಳನ್ನು ಓವರ್‌ ಎಕ್ಸ್‌ ಪ್ಲಾಯಿಟೆಡ್‌ ವಲಯಗಳಾಗಿ ನಿಗದಿಪಡಿಸಲಾಗಿತ್ತು. 2017ನೇ ಇಸವಿಗೆ ತಲಪು ತ್ತಿದ್ದಂತೆ ಕಾಸರಗೋಡು ಮತ್ತು ಚಿಟ್ಟೂರು ಉಳಿದು ಇತರ ಎಲ್ಲ ಬ್ಲಾಕ್‌ಗಳು ನೀರಿನ ಬಳಕೆಯಲ್ಲಿ ಸುರಕ್ಷಿತ (ಸೇಫ್‌) ಸ್ಥಾನಕ್ಕೆ ತಲಪಿದ್ದುವು.

ದುರಾದೃಷ್ಟವಶಾತ್‌ ಕಾಸರಗೋಡು ಜಿಲ್ಲೆಯಲ್ಲಿ 2017ರ ಪರಿಸ್ಥಿತಿಯ ಗಣನೆ ಪ್ರಕಾರ ಮಂಜೇಶ್ವರ, ಕಾರಡ್ಕ, ಕಾಂಞಂಗಾಡ್‌ ಬ್ಲಾಕ್‌ಗಳು ಸೆಮಿ ಕ್ರಿಟಿಕಲ್ ಹಂತದಲ್ಲಿವೆ. ಯಥಾಪ್ರಕಾರ ಶೇ. 83.96, ಶೇ. 82.03, ಶೇ. 77.67ಗಳಂತೆ ಈ ಬ್ಲಾಕ್‌ಗಳ ಭೂಗರ್ಭ ಜಲ ಬಳಕೆ ನಡೆದಿದೆ. ಜಿಲ್ಲೆಯ ನೀಲೇಶ್ವರ, ಪರಪ್ಪ ಬ್ಲಾಕ್‌ಗಳು ಮಾತ್ರ ಸುರಕ್ಷಿತ ಸ್ಥಾನದಲ್ಲಿದ್ದುವು. 2005ರಲ್ಲಿ ಶೇ.57.57, ಶೇ. 55.34 ರಂತೆ ಇದ್ದ ಭೂಗರ್ಭ ಜಲ ಬಳಕೆ, 2017ರ ವೇಳೆಗೆ ಶೇ. 69.52, ಶೇ. 66.97 ಆಗಿ ಹೆಚ್ಚಳಗೊಂಡಿತ್ತು. ಈ ವಲಯಗಳೂ ಈ ವರ್ಷದಲ್ಲಿ ಸೆಮಿ ಕ್ರಿಟಿಕಲ್ ಹಂತಕ್ಕೆ ತಲಪಿವೆ ಎಂದು ಹೈಡ್ರಾಲಜಿಸ್ಟ್‌ ಬಿ.ಷಾಬಿ ಅವರು ಕಳಕಳಿ ವ್ಯಕ್ತಪಡಿಸುತ್ತಾರೆ.

Advertisement

ಉದ್ದಿಮೆಗಳು ಕಡಿಮೆಯಿರುವ ಕಾಸರಗೋಡು ಜಿಲ್ಲೆಯಲ್ಲಿ ಜಲ ಕ್ಷಾಮಕ್ಕೆ ಅವೈಜ್ಞಾನಿಕತೆ ಮತ್ತು ಕೃಷಿಗಾಗಿ ಅನಿಯಂತ್ರಿತ ನೀರಿನ ಬಳಕೆ ಪ್ರಧಾನ ಕಾರಣ ಎಂದು ಅವರು ಆರೋಪಿಸು ತ್ತಾರೆ. ಕಾರಡ್ಕ ಬ್ಲಾಕ್‌ನಲ್ಲಿ ಭೂಗರ್ಭ ಜಲದ ಉದ್ದಿಮೆ ಸಂಬಂಧ ಬಳಕೆ 3.479 ಹೆಕ್ಟೇರ್‌ ಮೀಟರ್‌, ಗೃಹ ಬಳಕೆ 690.713 ಆಗಿದ್ದು, ಕೃಷಿ ನೀರಾವರಿಗೆ 3,585.89 ಹೆಕ್ಟೇರ್‌ ಮೀಟರ್‌ ಆಗಿದೆ. ಮಂಜೇಶ್ವರದಲ್ಲಿ ಗೃಹ ಬಳಕೆ ಶೇ 1,174.18 ಮಾತ್ರವಿದ್ದು, ನೀರಾವರಿಗೆ 5,769.94 ಹೆಕ್ಟೇರ್‌ ಮೀ. ಭೂಗರ್ಭ ಜಲ ಬಳಕೆಯಾಗಿದೆ. ಕಾಂಞಂಗಾಡ್‌ನ‌ಲ್ಲಿ ಗೃಹ ಬಳಕೆ 1,199.029, ಕೃಷಿ ನೀರಾವರಿಗೆ 3,970.95 ಹೆಕ್ಟೇರ್‌ ಮೀ.ಆಗಿದೆ.

ಪ್ರಧಾನವಾಗಿ ಅಡಿಕೆ ತೋಟಗಳಲ್ಲಿ ನೀರಾವರಿ ಅನಿಯಂತ್ರಿತ ರೂಪದಲ್ಲಿ ನಡೆದಿದೆ. ಕೊಳವೆ ಬಾವಿಗಳು ಮತ್ತು ನದಿಜಲ ವ್ಯಾಪಕವಾಗಿ ದುರುಪಯೋಗಕ್ಕೆ ಈಡಾಗಿವೆ. ಭೂಗರ್ಭ ಜಲ ರೀಚಾಜಿಂರ್ಗ್‌ ವಿಧಾನ ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಕೃತಕ ರೀಚಾಜಿಂರ್ಗ್‌ ರೀತಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ ಎಂದು ಷಾಬಿ ತಿಳಿಸುತ್ತಾರೆ.

ಇನ್ನಾದರೂ ಮಳೆ ನೀರನ್ನು ಭೂಮಿಗಿಳಿಯು ವಂತೆ ಮಾಡುವ ಯತ್ನಕ್ಕೆ ತೊಡಗದೇ ಇದ್ದರೆ ಜಿಲ್ಲೆ ತಡವಿಲ್ಲದೆ ಭಾರೀ ದುರಂತಕ್ಕೆ ವೇದಿಕೆಯಾಗಲಿದೆ ಎಂದು ಅವರು ಮುನ್ನೆಚ್ಚರಿಕೆ ನೀಡುತ್ತಾರೆ.

ಅಧ್ಯಯನಕ್ಕೆ ಕೇಂದ್ರ ತಂಡ

ಅಧ್ಯಯನ ನಡೆಸಲು ಈ ತಿಂಗಳಲ್ಲಿ ಕೇಂದ್ರ ಸರಕಾರದ ಪರಿಣತರ ತಂಡ ಜಿಲ್ಲೆಗೆ ಆಗಮಿಸಲಿದೆ. ಇದರೊಂದಿಗೆ ಕೇಂದ್ರ ಸರಕಾರಿ ಯೋಜನೆಯಾಗಿರುವ ಜಲಶಕ್ತಿ ಅಭಿಯಾನ್‌ ಪ್ರಕಾರ ಜಿಲ್ಲೆಯಲ್ಲಿ ಜಲಮಟ್ಟ ಹೆಚ್ಚಳಕ್ಕೆ ಚಟುವಟಿಕೆ ಏಕೀಕರಣಗೊಳಿಸಲು ಯೋಜನೆ ರಚಿಸಲಾಗುವುದು. ಇದಕ್ಕಾಗಿ ಜಿಲ್ಲಾ ಮಣ್ಣು ಸಂರಕ್ಷಣೆ ಇಲಾಖೆ ಅಧಿಕಾರಿ, ಬಡತನ ನಿವಾರಣೆ ವಿಭಾಗ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಜತೆಗೆ ಜಲವಿನಿಯೋಗ ನಿಯಮ ಜಾರಿಗೆ ರಚಿಸಲಾಗುವುದು.
– ಡಾ| ಡಿ. ಸಜಿತ್‌ ಬಾಬು ಕಾಸರಗೋಡು ಜಿಲ್ಲಾಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next