ಹಾವೇರಿ: ಸತತ ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೇ ಜಿಲ್ಲೆಯ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದ್ದು ಕಳೆದ ಒಂದೂವರೆ ದಶಕದ ಅಂತರ್ಜಲಮಟ್ಟ ಗಮನಿಸಿದರೆ ಈ ವರ್ಷ ಅಂತರ್ಜಲ ಅತಿಹೆಚ್ಚು ಕುಸಿದಿದೆ.
ಸಮರ್ಪಕ ಮಳೆ ಇಲ್ಲದೇ ತುಂಗಭದ್ರಾ, ವರದಾ ನದಿಗಳು ಸಂಪೂರ್ಣ ಬತ್ತಿದ್ದು ಅಂತರ್ಜಲ ಭಾರಿ ಕುಸಿತ ಕಂಡಿದೆ. ಕೆರೆ, ಹಳ್ಳ, ನದಿ, ನಾಲೆಗಳೆಲ್ಲ ಈ ಬಾರಿ ಬತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಪ್ರತಿದಿನವೂ ಒಂದಡಿಯಷ್ಟು ಆಳಕ್ಕೆ ಹೋಗುತ್ತಿರುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಿಲ್ಲೆಯಲ್ಲಿ ಕೈಗೊಂಡ ಸಮೀಕ್ಷೆಯಿಂದ ಖಚಿತ ಪಟ್ಟಿದೆ.
ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸರಾಸರಿ 200-250 ಅಡಿ ಆಳ ಕೊರೆದರೆ ನೀರು ಸಿಗುತ್ತಿತ್ತು. ಆದರೆ, ಸದ್ಯ 500 ಅಡಿಕೊರೆದರೂ ನೀರು ಸಿಗುತ್ತಿಲ್ಲ. ವಿಫಲಗೊಂಡ ಕೊಳವೆಬಾವಿಗಳೇ ಅಧಿಕವಾಗುತ್ತಿವೆ. ಸರ್ಕಾರದಿಂದ ಕೊರೆಸಿರುವ ಕೊಳವೆಬಾವಿಗಳನ್ನು ಮರು ಡ್ರಿಲ್ಲಿಂಗ್ ಮಾಡಿಸಲಾಗಿದ್ದು ಅಂಥ ಕೊಳವೆಬಾವಿಗಳೂ ಈ ಬಾರಿ ಬತ್ತಿವೆ.
ಅಂತರ್ಜಲ ಕುಸಿತ ಪ್ರಮಾಣ: 2004-05ರಿಂದ ಪ್ರಸಕ್ತ ಜನವರಿ ತಿಂಗಳವರೆಗಿನ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಈ ಸಲ ಅಂತರ್ಜಲ ಅತಿ ಕೆಳಗೆ ಹೋಗಿದೆ. ಜಿಲ್ಲೆಯಲ್ಲಿ 2004ರ ಈ ವೇಳೆಗೆ ಜಿಲ್ಲೆಯ ಸರಾಸರಿ ಅಂತರ್ಜಲಮಟ್ಟ 25.26 ಮೀಟರ್ ಇತ್ತು. 2005ರಲ್ಲಿ 22.35 ಮೀಟರ್ ಸರಾಸರಿ ಇತ್ತು. ಜನವರಿ ತಿಂಗಳಲ್ಲಿ ಸರಾಸರಿ ಸ್ಥಿರ ಜಲಮಟ್ಟವು 14 ಮೀಟರ್‌ಗೆ ಇರುತ್ತಿತ್ತು. ಆದರೆ, ಈ ವರ್ಷ ಜನವರಿಯಲ್ಲಿ ಅದು 17.71 ಮೀಟರ್ ಆಗಿದ್ದು, ಸುಮಾರು ಎರಡು ಅಡಿಯಷ್ಟು ನೀರು ಕೆಳಗೆ ಹೋಗಿದೆ. ಮೇ ತಿಂಗಳಲ್ಲಿ ಇದು 20 ಮೀ. ದಾಟಿದೆ.
2006ರಲ್ಲಿ 20.84 ಮೀಟರ್‌ಗೆ ಕುಸಿತ ಕಂಡಿದ್ದರೆ, 2007ರಲ್ಲಿ 17.06, 2008ರಲ್ಲಿ 16.52, 2009ರಲ್ಲಿ 18.50 ಮೀಟರ್ ಆಗಿತ್ತು. ಹೀಗೆ ನಿರಂತರವಾಗಿ ನೀರಿನ ಮಟ್ಟ ಏರಿದ್ದನ್ನು ಅಂಕಿಸಂಖ್ಯೆಗಳಿಂದ ಕಂಡುಬರುತ್ತದೆ. 20015ರಲ್ಲಿ 15.82 ಮೀಟರ್ ಇದ್ದ ಅಂತರ್ಜಲ ಮಟ್ಟವು ಈ ಬಾರಿ ಡಿಸೆಂಬರ್ ಅಂತ್ಯದಲ್ಲೇ 20.96 ಮೀಟರ್‌ಗೆ ಕುಸಿದಿದೆ. ಅಂದರೆ ಕಳೆದ ವರ್ಷಕ್ಕಿಂತ ಸುಮಾರು 5 ಮೀಟರ್‌ನಷ್ಟು ಕುಸಿದಿದೆ. ಮಾರ್ಚ್ ಹಾಗೂ ಏಪ್ರಿಲ್, ಮೇ ಈ ಮೂರು ತಿಂಗಳಲ್ಲಂತೂ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಎಲ್ಲ ಕೊಳವೆಬಾವಿಗಳಲ್ಲಿ ಸದ್ಯ ಸರಾಸರಿ ಐದು ಮೀಟರ್ ನೀರು ಇಳಿಕೆಯಾಗಿದೆ. ಇನ್ನು ಕೆಲವು ಕೊಳವೆಬಾವಿಗಳಲ್ಲಿ ದಿನವೂ ಅರ್ಧ ಅಡಿಯಷ್ಟು ನೀರು ತಳಕ್ಕೆ ಹೋಗುತ್ತಿದೆ.
ಖಾಲಿಯಾಗುವ ಆತಂಕ: ಮಳೆ ಈ ವಾರದಲ್ಲಿಯೂ ಬರದೇ ಇದ್ದರೆ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು ಬಹುತೇಕ ಎಲ್ಲ ಕೊಳವೆ ಬಾವಿಗಳು ನೀರಿಲ್ಲದೇ ಒಣಗುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಕೊಳವೆಬಾವಿಗಳಲ್ಲಿ ನೀರು ಪಾತಾಳ ಕಂಡಿದ್ದು, ಅಲ್ಪಸ್ವಲ್ಪ ಸವಳು ನೀರು ಬರುತ್ತಿದೆ. ಆದ್ದರಿಂದ ತೀರಾ ಪಾತಾಳ ಕಂಡ ಕೊಳವೆಬಾವಿ ನೀರು ಕುಡಿಯಲು ಆಗದ ಪರಿಸ್ಥಿತಿ ಇದೆ.
ಒಟ್ಟಾರೆ ಈ ಬಾರಿ ಬರದಿಂದಾಗಿ ಅಂತರ್ಜಲಮಟ್ಟ ಭಾರೀ ಪ್ರಮಣದಲ್ಲಿ ಕುಸಿದಿದ್ದು, ಜೂನ್ ತಿಂಗಳಲ್ಲಿಯೂ ಬವಣೆ ಎದುರಿಸುವ ಮೊದಲು ಸಾಕಷ್ಟು ಮಳೆಯಾಗಿ ಭೂಮಿ ತಂಪಾದರೆ ಸಾಕು ಎಂಬ ಅಪೇಕ್ಷೆ ಎಲ್ಲರದ್ದಾಗಿದೆ.
•ಎಚ್.ಕೆ. ನಟರಾಜ