Advertisement
ಗುರುವಾರ ನಗರದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ‘ಕಾವೇರಿ ಕೂಗು’ ಅಭಿಯಾನದಲ್ಲಿ ಮಾತನಾಡಿದ ಅವರು, ಮರಗಳಿಲ್ಲದಿದ್ದರೆ ಮಳೆಯಿಲ್ಲ. ರೈತರಿಗೆ ಆದಾಯವಾಗುವ ರೀತಿಯಲ್ಲಿ ಯೋಜನೆ ರೂಪಿಸಿದರೆ ಮಾತ್ರ ದೇಶದ ಹಸಿರು ಹೊದಿಕೆ ಹೆಚ್ಚಿಸಬಹುದು.
Related Articles
Advertisement
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಮಾತನಾಡಿ, ರೈತರು ಅರಣ್ಯ ಕೃಷಿ ಮಾಡುವುದರಿಂದ ಆದಾಯದೊಂದಿಗೆ ನದಿಗಳನ್ನು ರಕ್ಷಿಸ ಬಹುದಾಗಿದೆ. ಹಾಗಾಗಿ, ನದಿಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಇದೇ ಸಂದರ್ಭದಲ್ಲಿ ‘ಉದಯವಾಣಿ’ ಜತೆ ಮಾತನಾಡಿದ ಸದ್ಗುರು, ಸಸಿಗಳನ್ನು ಬೆಳೆಸಿ ರೈತರಿಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳುವುದರ ಜತೆಗೆ ಪರಿಸರ ಮತ್ತು ನದಿಗಳ ಸಂರಕ್ಷಣೆ ಅಭಿಯಾನದ ಉದ್ದೇಶವಾಗಿದೆ. ರೈತರು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಸೆ.4ರಂದು 3.5 ಲಕ್ಷ ಮತ್ತು ಸೆ.5ರಂದು 2.5 ಲಕ್ಷ ಸಸಿಗಳು ದೇಣಿಗೆ ಸಿಕ್ಕಿವೆ. ಈ ಪ್ರಗತಿಯನ್ನು ಗಮನಿಸಿದರೆ ಅಭಿವೃದ್ಧಿ ಖಂಡಿತ. ಇದು ಒಂದು ದಿನದ ಕೆಲಸವಲ್ಲ, 12 ವರ್ಷಗಳ ಕಾಲ ನಡೆಯಲಿರುವ ಸುದೀರ್ಘ ಕೆಲಸವಾಗಿದೆ ಎಂದರು.
32 ನರ್ಸರಿಗಳು ನಮ್ಮ ಬಳಿ ಈಗಾಗಲೇ ಇವೆ. ಇನ್ನುಳಿದಂತೆ 5ರಿಂದ 10 ಸಾವಿರ ರೈತರನ್ನು ನರ್ಸರಿ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಿದ್ದೇವೆ. ರೈತ ತನ್ನ ನರ್ಸರಿಯಲ್ಲಿ ಬೆಳೆಸಿದ ಸಸಿಗಳನ್ನು ಕೊಳ್ಳದಿದ್ದರೆ ಅವರಿಗೆ ನಷ್ಟವಾಗುವ ಸಾಧ್ಯತೆಯಿದ್ದು, ಮೊದಲಿಗೆ ಹಣ ಸಂಗ್ರಹದ ಕೆಲಸ ಮಾಡುತ್ತಿದ್ದೇವೆ. ನಮ್ಮ ಬಳಿ ಸಂಗ್ರಹವಾಗಿರುವಷ್ಟು ಹಣಕ್ಕೆ ಅನುಗುಣವಾಗಿ ನರ್ಸರಿಗಳ ಅಭಿವೃದ್ಧಿ ಕೆಲಸ ಮಾಡಲಿದ್ದೇವೆ ಎಂದು ಸದ್ಗುರು ಹೇಳಿದರು.
ಸಣ್ಣ ರೈತರಿಗೆ ಟಿಂಬರ್ ಬೋರ್ಡ್‌ನಿಂದ ಸಾಕಷ್ಟು ಅನುಕೂಲವಾಗಲಿದೆ. ದೊಡ್ಡ ರೈತರು ಬೆಳೆದ ಮರಗಳನ್ನು ಬೃಹತ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಶಕ್ತಿ ಇರುತ್ತದೆ. ಸಣ್ಣ ರೈತರಿಗೆ ಇದು ಕಷ್ಟ. ಈ ಕಾರಣದಿಂದ ಟಿಂಬರ್ ಬೋರ್ಡ್ ನಿಂದ ಮಾರಾಟ ಮಾಡಲು ಅವಕಾಶ ಸಿಗಲಿದೆ. ಟಿಂಬರ್ ಬೋರ್ಡ್, ಅರಣ್ಯ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮಾರಾಟ, ಸಾಗಾಟ, ಬೆಲೆ ನಿಯಂತ್ರಣ ಸೇರಿದಂತೆ ರೈತಪರ ಕೆಲಸವನ್ನು ಮಾಡಲಿದೆ ಎಂದು ವಿವರಿಸಿದರು.
-ಲೋಕೇಶ್ ರಾಮ್