Advertisement

ನೀರಾವರಿ ಯೋಜನೆ ಅನುಷ್ಠಾನದಿಂದ ಅಂತರ್ಜಲ ವೃದ್ಧಿ

09:16 PM Feb 29, 2020 | Lakshmi GovindaRaj |

ಅರಸೀಕೆರೆ: ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆ ಅನುಷ್ಠಾನದಿಂದ ತಾಲೂಕಿನ ಬರಡು ಭೂಮಿಯ ಅಂತರ್ಜಲವೃದ್ಧಿಗೊಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಅಟಲ್‌ ಭೂಜಲ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗ ಅನುಷ್ಠಾನಗೊಳಿಸಲಾಗುತ್ತಿದ್ದು, ರೈತ ಬಾಂಧವರು ಹೆಚ್ಚಿನ ಸಹಕಾರ ನೀಡಬೇಕೆಂದು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Advertisement

ನಗರದ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಅಂತರ್ಜಲ ನಿರ್ದೇಶನಾಲಯ, ಸಂಯುಕ್ತ ಆಶ್ರಯದಲ್ಲಿ ಅಂತರ್ಜಲ ಜನಜಾಗೃತಿ ಅಭಿಯಾನ, ತಾಲೂಕು ಅಟಲ್‌ ಭೂಜಲ ಯೋಜನೆ ಅನುಷ್ಠಾನ ಕುರಿತು ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡಲು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ 14 ಜಿಲ್ಲೆಗಳಲ್ಲಿ 41 ತಾಲೂಕುಗಳಲ್ಲಿನ 1,199 ಗ್ರಾಮ ಪಂಚಾಯಿತಿಗಳ ಸುಮಾರು 40 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಈ ಕಾರ್ಯಕ್ರಮದಲ್ಲಿ ಗುರುತಿಸಲಾಗಿದ್ದು, ಅಂದಾಜು ವೆಚ್ಚ 6 ಸಾವಿರ ಕೋಟಿ ರೂ.ಗಳಾಗಿದ್ದು, 3 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಹಾಗೂ 3 ಸಾವಿರ ಕೋಟಿ ರೂ. ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ. ಅಟಲ್‌ ಭೂಜಲ ಯೋಜನೆಯಡಿ ಜಲಸಂರಕ್ಷಣೆ, ಅಂತರ್ಜಲ ಅಭಿವೃದ್ಧಿ ಮಳೆ ನೀರು ಕೊಯ್ಲು ನೀರಿನ ಬಳಕೆಯಿಂದ ಅಂತರ್ಜಲ ಸಂಪನ್ಮೂಲ ಅಭಿವೃದ್ಧಿ ಪಡಿಸಿ ನಿರ್ದಿಷ್ಠ ಗುರಿ ಸಾಧಿಸಲಾಗುತ್ತದೆ ಎಂದು ಹೇಳಿದರು.

ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶ: ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಮನುಷ್ಯನ ದುರಾಸೆ ಫ‌ಲವಾಗಿ ಪ್ರಾಕೃತಿಕ ಅಸಮತೋಲನ ಸೃಷ್ಟಿಯಾಗಿ ಕಾಲ ಕಾಲಕ್ಕೆ ಮಳೆಯಾಗದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಕೊಳವೆ ಬಾವಿಗಳನ್ನು ಹೆಚ್ಚು ಜನರು ಕೊರೆಸುತ್ತಿದ್ದು, ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ. ಈ ಕೊಳವೆಬಾವಿಗಳಲ್ಲಿ ಲಭ್ಯವಾಗುವ ನೀರು ಫ್ಲೋರೈಡ್‌ ಯುಕ್ತವಾದ ಕಾರಣ ಜನರು ಕುಡಿಯಲು ಯೋಗ್ಯವಲ್ಲದ ದುಸ್ಥಿತಿ ಎದುರಾಗಿದೆ ಎಂದರು.

ಎತ್ತಿನ ಹೊಳೆಯಿಂದ ಅಂತರ್ಜಲ ವೃದ್ಧಿ: ನೀರಿನ ಗಂಭೀರ ಸಮಸ್ಯೆಗೆ ಸೂಕ್ತ ಪರಿಹಾರ ಮಾರ್ಗವಾಗಿ ನಾವು ಏನು ಮಾಡಿದರು ಸಾಧ್ಯವಿಲ್ಲದ ಕಾರಣ ಎತ್ತಿನಹೊಳೆ ಏತನೀರಾವರಿ ಯೋಜನೆಯ ಅನುಷ್ಠಾನದಿಂದ ಮಾತ್ರ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಮಳೆಯ ನೀರಿನಲ್ಲಿ 1 ಟಿ.ಎಂ.ಸಿ. ನೀರು ನಮಗೆ ಹಾಯಿಸಿದರೆ ಸಾಕು ತಾಲೂಕಿನ ಎಲ್ಲಾ ಕೆರೆಕಟ್ಟೆಗಳು ತುಂಬಿ ತುಳುಕುತ್ತವೆ, ಇದರಿಂದ ಅಂತರ್ಜಲ ವೃದ್ಧಿಯಾಗುವ ಜೊತಗೆ ಉತ್ತಮ ಮಳೆ ಬೆಳೆಯಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರ 34 ಕೆರೆಗಳಿಗೆ ಪುನಚ್ಚೇತನ ನೀಡುವ ನಿಟ್ಟಿನಲ್ಲಿ ಏತ್ತಿನಹೊಳೆ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.

Advertisement

ನದಿ ಜೋಡಣೆ: ಅಟಲ್‌ ಜೀ ಅವರ ಗಂಗಾ ಮತ್ತು ಕೃಷ್ಣ ನದಿಗಳ ಜೋಡಣೆಯಿಂದ ಮಾತ್ರ ಅತಿವೃಷಿ ಮತ್ತು ಅನಾವೃಷ್ಟಿ ಮಳೆಯನ್ನು ನಿಲ್ಲಿಸಿ ಬರಡು ಭೂಮಿಗಳಿಗೆ ನೀರು ಹರಿಸುವ ಕನಸು ನನಸು ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

ಮಳೆ ನೀರು ಸಂಗ್ರಹಿಸಿ: ಜಿ.ಪಂ.ಅಧ್ಯಕ್ಷೆ ಶ್ವೇತಾ ಮಾತನಾಡಿ, ಉತ್ತಮ ಮಳೆ ಬಾರದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಆದ ಕಾರಣ ಹರಿವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ ಎನ್ನುವ ಘೋಷ ವಾಕ್ಯದಲ್ಲಿ ಮಳೆ ನೀರು ಸಂಗ್ರಹಣೆ ಮೂಲಕ ಅಂತರ್ಜಲ ವೃದ್ಧಿಗಾಗಿ ಕೇಂದ್ರ ಸರ್ಕಾರ ಅಟಲ್‌ ಭೂಜಲ ಯೋಜನೆ ರೂಪಿಸಿದ್ದು, ನೀರಿನ ಸದ್ಬಳಕೆ, ಹಾಗೂ ನಿಯಂತ್ರಣದಿಂದ ಅಂತರ್ಜಲ ವೃದ್ಧಿಗಾಗಿ ಇಸ್ರೇಲ್‌ ಮಾದರಿಯ ಕೃಷಿಗೆ ಉತ್ತೇಜನ ನೀಡಲುಸರ್ಕಾರಗಳು ಯೋಜನೆಯನ್ನು ರೂಪಿಸಬೇಕೆಂದರು.

ಕಾರ್ಯಕ್ರಮದಲ್ಲಿ ಬೇಲೂರು ಶಾಸಕ ಕೆ.ಎಸ್‌.ಲಿಂಗೇಶ್‌ ಮಾತನಾಡಿ, ತಮ್ಮ ಕ್ಷೇತ್ರದ ಹಳೇಬೀಡು ಜಾವಗಲ್‌ ಹೋಬಳಿಯ ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿ ಮನವಿ ಮಾಡಿದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ದಕ್ಷಿಣ ವಲಯ ಪ್ರಧಾನ ಇಂಜೀನೀಯರು ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಸಭೆಯಲ್ಲಿ ಮಾತನಾಡಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಪಟೇಲ್‌ ಶಿವಪ್ಪ, ಮಾಡಾಳು ಸ್ವಾಮಿ, ಲೀಲಾ, ಲೋಲಾಕ್ಷಮ್ಮ, ವತ್ಸಲಾ, ತಾಪಂ ಅಧ್ಯಕ್ಷ ರೂಪಾ, ಉಪಾಧ್ಯಕ್ಷೆ ಪ್ರೇಮ, ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರಾದ ಬಿ.ಟಿ.ಕಾಂತರಾಜು, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್‌, ತಾಪಂ ಇಒ ನಟರಾಜ್‌, ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಮೊದಲಾದವರಿದ್ದರು.

ಜೀವ ಜಲ ಸಂರಕ್ಷಣೆಗೆ ಶ್ರಮಿಸಿ: ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿರುವ ರೈತರ ಬದುಕು ಹಸನು ಮಾಡುವ ಜೊತೆಗೆ ಜೀವಸಂಕುಲಕ್ಕೆ ಅವಶ್ಯಕವಾದ ಜೀವಜಲದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಅವೈಜ್ಞಾನಿಕವಾಗಿ ಅಂತರ್ಜಲ ಬಳಕೆ ಮಾಡುತ್ತಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಸವಾಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ 2019 ರ ಡಿ.25 ರಂದು ಅಟಲ್‌ ಭೂಜಲ ಯೋಜನೆ ಜಾರಿಗೆ ತಂದು ಕೇಂದ್ರ ಮತ್ತು ರಾಜ್ಯ ಸರ್ಕರದ ಸಂಸ್ಥೆಗಳು, ಪಂಚಾಯತ್‌ ರಾಜ್‌ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ರೈತರ ಪ್ರತಿಭಟನೆ: ಕಾರ್ಯಕ್ರಮದ ಮಧ್ಯೆ ಪ್ರವೇಶಿಸಿದ ರೈತಸಂಘದ ಮುಖಂಡರು ರೈತರ ಪಂಪ್‌ ಸೇಟ್‌ಗಳಿಗೆ ಆಕ್ರಮ ಸಕ್ರಮ ವಿದ್ಯುತ್‌ ಪೊರೈಕೆಗೆ ಸರ್ಕಾರ ನಿಗದಿ ಮಾಡಿರುವ ಹಣವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಮನವಿ ನೀಡಲು ಮುಂದಾದ ಸಂದರ್ಭದಲ್ಲಿ ಸಭೆ ಮುಗಿದ ನಂತರ ಪರಿಶೀಲಿಸುವುದಾಗಿ ಸಚಿವರು ಹೇಳಿದರು. ಇದರಿಂದ ಕುಪಿತರಾದ ರೈತಸಂಘದ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next