Advertisement
ರಾಜ್ಯದಲ್ಲಿ ಅಂತರ್ಜಲ ಮಾಪನ ಇನ್ನು ಮುಂದೆ ಆಟೋಮ್ಯಾಟಿಕ್ ಆಗಲಿದೆ. ಇದಕ್ಕಾಗಿ ಟೆಲಿಮೆಟ್ರಿಕ್ಪಿಝೋಮೀಟರ್ (piezometer)ಗಳನ್ನು ಅಳವಡಿಸಲು ಅಂತರ್ಜಲ ನಿರ್ದೇಶನಾಲಯ ನಿರ್ಧರಿಸಿದ್ದು, ಈ ಸಂಬಂಧ ಟೆಂಡರ್‌ಗೆ ಸಿದ್ಧತೆ ನಡೆದಿದೆ. ಈ ವಿನೂತನ ವ್ಯವಸ್ಥೆಯಿಂದ ಪ್ರತಿ ಗಂಟೆಗೊಮ್ಮೆ ಅಂತರ್ಜಲ ಮಟ್ಟದ ಮಾಹಿತಿ
ನೇರವಾಗಿ ಮೊಬೈಲ್‌ಗೇ ಬರಲಿದೆ. ಆಂಧ್ರಪ್ರದೇಶ ಮಾದರಿಯಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಎಂಟು ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ ಮೂರೂವರೆ ಕೋಟಿ ರೂ. ಅನುದಾನ ದೊರೆಯುತ್ತಿದೆ.
ರಾಜ್ಯದ ಯಾವ್ಯಾವ ಭಾಗದಲ್ಲಿ ಅಂತರ್ಜಲ ಮಟ್ಟ ಎಷ್ಟೆಷ್ಟಿದೆ ಎಂಬುದನ್ನು ತಿಳಿಯಬಹುದು. 50 ಚದರ ಕಿ.ಮೀ.ಗೊಂದು ಬಾವಿ: ಇದಲ್ಲದೆ, ಸದ್ಯ 100 ಚದರ ಕಿ.ಮೀ.ಗೊಂದು ಅಂತರ್ಜಲ ಮಟ್ಟ ನಿರ್ಧರಿಸುವ ನಿರೀಕ್ಷಣಾ ಬಾವಿಗಳಿವೆ. 50 ಚದರ ಕಿ.ಮೀ.ಗೊಂದು ಬಾವಿ ನಿರ್ಮಿಸಲು ನಿರ್ಧರಿಸಲಾಗಿದೆ. ಇದರಿಂದ ಅಂತರ್ಜಲದ ಬಗ್ಗೆ ಮತ್ತಷ್ಟು ನಿಖರತೆ ಸಿಗಲಿದೆ. ಒಂದೊಂದು ಪ್ರದೇಶಕ್ಕೂ ಮಣ್ಣಿನ ಗುಣಧರ್ಮ ಬೇರೆಯಾಗಿರುತ್ತದೆ. ಇದರಿಂದ ಅಂತರ್ಜಲದಲ್ಲೂ ಸಾಕಷ್ಟು ಏರುಪೇರುಗಳಾಗಿರುತ್ತವೆ. ಆದ್ದರಿಂದ ನಿರೀಕ್ಷಣಾ ಬಾವಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ದುಪ್ಪಟ್ಟಾಗಲಿದೆ. ಆದರೆ, ಈ ಬಾವಿಗಳು ಕೇವಲ ಅಂತರ್ಜಲ ಮಟ್ಟ ಅಳೆಯಲು ಮಾತ್ರ ಸೀಮಿತವಾಗಿರುತ್ತವೆ ಎಂದು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಎಸ್.ಬಿ. ಶೆಟ್ಟೆಣ್ಣವರ ಮಾಹಿತಿ ನೀಡಿದರು.
Related Articles
ಪ್ರಸ್ತುತ ಅಂತರ್ಜಲ ಎಷ್ಟು ಆಳದಲ್ಲಿದೆ ಎಂಬ ಸ್ಪಷ್ಟ ಮಾಹಿತಿ ಕೂಡ ರೈತರಿಗೆ ಇಲ್ಲ. ಹಾಗಾಗಿ, ಸಾಧ್ಯವಾದಷ್ಟು ಹೆಚ್ಚು ಸಾಮರ್ಥ್ಯದ ಪಂಪ್‌ಸೆಟ್ ಗಳಿಂದ ನೀರೆತ್ತಲಾಗುತ್ತದೆ.
Advertisement
ಅಂತರ್ಜಲ ಮತ್ತು ಭೂಮಿಯ ಮೇಲೆ ಇರುವ ನೀರಿನ ಪ್ರಮಾಣವನ್ನೂ ಲೆಕ್ಕಹಾಕದೆ ನೀರು ಹರಿಸಲಾಗುತ್ತದೆ. ಇದೆಲ್ಲವೂ ಅವೈಜ್ಞಾನಿಕವಾಗಿದೆ. ಆದರೆ, ನೂತನ ವ್ಯವಸ್ಥೆ ಅಡಿ ಆಯಾ ಪ್ರದೇಶಗಳ ಅಂತರ್ಜಲ ಮತ್ತು ಅದರ ಗುಣಮಟ್ಟ, ಲಕ್ಷಣ, ಪ್ರಮಾಣ ಇದೆಲ್ಲವೂ ನಿಯಮಿತವಾಗಿ ತಿಳಿಯಲಿದೆ. ಅಷ್ಟೇ ಅಲ್ಲ, ಆಸಕ್ತ ರೈತರಿಗೂ ಈ ಮಾಹಿತಿಯನ್ನು ಮೊಬೈಲ್ ಸಂದೇಶದ ಮೂಲಕ ಕಳುಹಿಸಲಾಗುವುದು. ಅದನ್ನು ಆಧರಿಸಿ ರೈತರು ಬೆಳೆಗಳಿಗೆ ನೀರು ಹರಿಸಬಹುದು. ಹಾಗೂ ಅಗತ್ಯಕ್ಕೆ ತಕ್ಕಷ್ಟು ಪಂಪ್‌ಸೆಟ್ ಬಳಕೆ ಮಾಡಬಹುದು ಎಂದು ತಿಳಿಸುತ್ತಾರೆ. ಇದಲ್ಲದೆ ರೈತರು ಮಾಹಿತಿ ಕೊರತೆಯಿಂದ ಬೇಕಾಬಿಟ್ಟಿ ಕೊಳವೆ ಬಾವಿ ಕೊರೆದು ಲಕ್ಷಾಂತರ ರೂ. ನಷ್ಟಕ್ಕೀಡಾಗುವುದು ತಪ್ಪಲಿದೆ ಎಂದು ತಜ್ಞರು ತಿಳಿಸುತ್ತಾರೆ. ಪ್ರಸ್ತುತ ವ್ಯವಸ್ಥೆಯಲ್ಲಿ ತಿಂಗಳಿಗೊಮ್ಮೆ ಸ್ವತಃ ಭೂವಿಜ್ಞಾನಿ ಸ್ಥಳಕ್ಕೆ ತೆರಳಿ,ಮ್ಯಾನ್ಯುವಲ್ ಆಗಿ ಅಂತರ್ಜಲ ಮಟ್ಟ ಅಳತೆ ಮಾಡಿ ವರದಿ ನೀಡುತ್ತಾರೆ. ಆದರೆ, ಇದು ಹಳೆಯ ಪದ್ಧತಿಯಾಗಿದ್ದು, ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಮುಂದುವರಿದ ತಂತ್ರಜ್ಞಾನ ಅಳವಡಿಕೆಯಿಂದ ನಿಖರ ಮಾಹಿತಿ ನಿಯಮಿತವಾಗಿ ದೊರೆಯಲಿದೆ ಎಂದರು. ಮಳೆ ಮಾದರಿಯಲ್ಲೇ ಕಾರ್ಯ: ಸದ್ಯ ರಾಜ್ಯದಲ್ಲಿ ಮಳೆಗೆ ಸಂಬಂಧಿಸಿದಂತೆ ಪ್ರತಿ 15 ನಿಮಿಷಕ್ಕೊಮ್ಮೆ
ಡ್ಯಾಶ್‌ಬೋರ್ಡ್‌ನಲ್ಲಿ ಹಾಗೂ ಮೊಬೈಲ್ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇದರ ಮುಂದುವರಿದ ಭಾಗವೇ ಟೆಲಿಮೆಟ್ರಿಕ್ ಪಿಝೋಮೀಟರ್ ಆಗಿದೆ ಎಂದು ಈ ಯೋಜನೆಗೆ ಕೈಜೋಡಿಸಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ. ವೈರ್ ಅಥವಾ ಟೇಪ್ ಅನ್ನು ನಿರೀಕ್ಷಣಾ ಬಾವಿಗಳಲ್ಲಿ ಬಿಟ್ಟು, ಅದು ಎಷ್ಟು ಆಳದಲ್ಲಿದೆ ಎಂಬುದನ್ನು ಲೆಕ್ಕಹಾಕಿ ಅಂತರ್ಜಲಮಟ್ಟ ನಿರ್ಧರಿಸಲಾಗುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಟೋಮೆಟಿಕ್ ಆಗಿ ದಾಖಲಾಗುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಮಳೆ ಮಾಪನದಂತೆಯೇ ಇಲ್ಲಿಯೂ ಅಂತರ್ಜಲ ಮಾಪಕ ಟೆಲಿಮೆಟ್ರಿಕ್ ಪಿಝಿಯೋಮಿಟರ್‌ಗಳಿರುತ್ತವೆ. ಅದರ ಮೇಲೆ ಜಿಪಿಆರ್‌ಎಸ್ ಆಧಾರಿತ ಸಿಮ್ ಮಾದರಿಯ ಚಿಪ್ ಇರುತ್ತದೆ. ಅದರಲ್ಲಿ ದತ್ತಾಂಶಗಳು ದಾಖಲಾಗುತ್ತವೆ. ನಂತರ ಅದು ಇಂಟರ್‌ನೆಟ್ ಅಥವಾ ಮೊಬೈಲ್ ನೆಟ್‌ವರ್ಕ್ ಮೂಲಕ ರವಾನೆಯಾಗುತ್ತದೆ ಎಂದು ಮಾಹಿತಿ ನೀಡಿದರು. ಒಂದೇ ಸೂರಿನಡಿ ಸಮಗ್ರ ಮಾಹಿತಿ?
ಕೃಷಿ, ಮಳೆ, ಅಂತರ್ಜಲಮಟ್ಟ ಸೇರಿದಂತೆ ಪೂರಕ ಎಲ್ಲ ಮಾಹಿತಿಯೂ ಮುಂದಿನ ದಿನಗಳಲ್ಲಿ ಒಂದೇ ಸೂರಿನಡಿ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ರೈತರ ಸಹಾಯವಾಣಿ ಮಾದರಿಯಲ್ಲಿ ಬಿತ್ತನೆ, ಗೊಬ್ಬರ ಪೂರೈಕೆ, ಬೆಳೆಗಳಲ್ಲಿ ಕಂಡುಬರುವ ರೋಗ ನಿಯಂತ್ರಣ ಕುರಿತ ಸಲಹೆ, ಮಳೆ ಮಾಹಿತಿ, ಅಂತರ್ಜಲಮಟ್ಟ ಒಳಗೊಂಡಂತೆ ಸಮಗ್ರ ಮಾಹಿತಿ ರೈತರಿಗೆ ಒದಗಿಸಲು ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಜಯಕುಮಾರ್ ಚಂದರಗಿ