Advertisement

Ground water: ಅಂತರ್ಜಲ ಮಟ್ಟ ಪಾತಾಳಕ್ಕೆ

12:55 AM Sep 06, 2023 | Team Udayavani |

ಕುಂದಾಪುರ: ಜೂನ್‌ ಹಾಗೂ ಆಗಸ್ಟ್‌ ತಿಂಗಳು ಗಳಲ್ಲಿ ಬರಬೇಕಿದ್ದ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಇದರಿಂದ ಅತೀ ಹೆಚ್ಚು ಮಳೆ ಬೀಳುವ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಆಗಸ್ಟ್‌ಗಿಂತ ಈ ಬಾರಿ 0.74 ಮೀ. ಕುಸಿದಿದ್ದರೆ, ಈ ವರ್ಷದ ಜುಲೈಗಿಂತ ಆಗಸ್ಟ್‌ನಲ್ಲಿ ಬರೋಬ್ಬರಿ 1.58 ಮೀ. ಅಂತರ್ಜಲ ಮಟ್ಟ ಇಳಿಕೆಯಾಗಿದೆ.

Advertisement

ಮಳೆಗಾಲದಲ್ಲೂ ಅಂತರ್ಜಲ ಮಟ್ಟ ಕುಸಿತ ರೈತರ ಸಹಿತ ಎಲ್ಲರಲ್ಲೂ ಆತಂಕ ಮೂಡಿಸಿದೆ. ಇದರ ಜತೆಗೆ ತಾಪಮಾನದಲ್ಲೂ ಭಾರೀ ಪ್ರಮಾಣದ ಏರಿಕೆಯಾಗಿದೆ.

ಒಂದೇ ತಿಂಗಳಿನಲ್ಲಿ 1.58 ಮೀ. ಕುಸಿತ
ಉಡುಪಿ ಜಿಲ್ಲೆಯಲ್ಲಿ ಜೂನ್‌ ಕೊನೆಯಲ್ಲಿ ಮಳೆ ಬಿರುಸಾಗಿದ್ದು, ಜುಲೈಯಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಜೂನ್‌ನ ಕೊರತೆ ಜುಲೈಯಲ್ಲಿ ನೀಗಿತ್ತು. ಆದರೆ ಆಗಸ್ಟ್‌ನಲ್ಲಿ ಮಳೆ ಸಂಪೂರ್ಣ ಕಡಿಮೆಯಾಗಿದ್ದರಿಂದ ಮಳೆಗಾಲದಲ್ಲಿಯೇ ಬರದ ಛಾಯೆ ಆವರಿಸಿ ದಂತಿದೆ. ಜುಲೈಯಲ್ಲಿ 3.25 ಮೀ.ನಷ್ಟಿದ್ದ ಅಂತರ್ಜಲ ಮಟ್ಟ ಆಗಸ್ಟ್‌ ಅಂತ್ಯಕ್ಕೆ 4.83ಕ್ಕೆ ಇಳಿದಿದೆ. ಕಳೆದ ಆಗಸ್ಟ್‌ನಲ್ಲಿ 4.09 ಮೀ.ನಷ್ಟಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ 0.74 ಮೀ. ಕುಸಿದಿದೆ.

ಕೃಷಿಗೆ ಸಂಕಷ್ಟ
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಎರಡೂ ಹಂಗಾಮಿನಲ್ಲಿ ಅಂದಾಜು 45 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಭತ್ತದ ಬೇಸಾಯ ಮಾಡುತ್ತಾರೆ. ಹಿಂಗಾರಿನಲ್ಲಿ ಹೆಚ್ಚಿನವರು ನೆಲಗಡಲೆ, ಕಲ್ಲಂಗಡಿ, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಇದಲ್ಲದೆ ಅಡಿಕೆ, ತೆಂಗು ಬೆಳೆಯೂ ಸಾಕಷ್ಟಿದೆ. ಆದರೆ ಈ ಬಾರಿ ಮುಂಗಾರಿನಲ್ಲಿಯೇ ಭತ್ತ ಬೇಸಾಯಕ್ಕೆ ನೀರಿನ ಕೊರತೆ ಉಂಟಾಗಿದ್ದು, ಈಗಗಾಲೇ ಕೆಲವೆಡೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಇನ್ನು ಹಿಂಗಾರಿನಲ್ಲಿ ಭತ್ತದ ಬೆಳೆಯೇ ಕಷ್ಟ ಅನ್ನುವ ಪರಿಸ್ಥಿತಿ ರೈತರದ್ದಾಗಿದೆ. ಅಡಿಕೆ, ತೆಂಗಿನ ಬೆಳೆಗಾರರಿಗೂ ಈ ಆತಂಕ ಇದ್ದೇ ಇದೆ. ಇನ್ನಾದರೂ ನಿರೀಕ್ಷಿತ ಮಳೆ ಬಾರದಿದ್ದರೆ ಈ ಬಾರಿ ಡಿಸೆಂಬರ್‌, ಜನವರಿಯಲ್ಲಿಯೇ ಕುಡಿಯುವ ನೀರಿನ ಸಮಸ್ಯೆಯೂ ಉದ್ಭವಿಸಬಹುದು.

ಈ ಬಾರಿ ವಾಡಿಕೆಯಷ್ಟು ಮಳೆ ಬಾರದೆ ಇರುವುದರಿಂದ ಜಿಲ್ಲೆಯ ಎಲ್ಲೆಡೆ ಅಂತರ್ಜಲ ಮಟ್ಟ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಳೆ ಬಾರದಿದ್ದರೆ ನೀರಿನ ಮಟ್ಟ ಇನ್ನಷ್ಟು ಇಳಿಕೆಯಾಗಬಹುದು. ಮಳೆ ಕೊçಲು, ಭೂಮಿಗೆ ಬೀಳುವ ಮಳೆ ನೀರನ್ನು ನಿರುಪಯುಕ್ತ ಬಾವಿ, ಬೋರ್‌ವೆಲ್‌ಗ‌ಳಿಗೆ ಬಿಡುವಂತಹ ಕಾರ್ಯ ಸಮರೋಪಾದಿಯಲ್ಲಿ ಆಗಬೇಕಾಗಿದೆ.
– ಡಾ| ದಿನಕರ ಶೆಟ್ಟಿ , ಹಿರಿಯ ಭೂವಿಜ್ಞಾನಿ, ಅಂತರ್ಜಲ ನಿರ್ದೇಶನಾಲಯ ಉಡುಪಿ

Advertisement

ಕುಂದಾಪುರದಲ್ಲಿ ಹೆಚ್ಚು
ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಕಳೆದ ಬಾರಿಗಿಂತ 0.04 ಮೀ.ನಷ್ಟು ಮಾತ್ರ ಕುಸಿದಿದ್ದರೆ, ಉಳಿದೆಲ್ಲ ತಾಲೂಕುಗಳಲ್ಲಿ ಅಂದಾಜು 1 ಮೀ.ನಷ್ಟು ಕುಸಿದಿದೆ. ಕುಂದಾಪುರ ತಾಲೂಕಿನಲ್ಲಂತೂ 1.39 ಮೀ., ಕಾರ್ಕಳದಲ್ಲಿ 1.38 ಮೀ., ಈ ವರ್ಷ ಕುಸಿತ ಕಂಡಿದೆ. ದ.ಕ.ದಲ್ಲೂ ಕಳೆದ ವರ್ಷಕ್ಕಿಂತ ಈ ವರ್ಷ 0.37 ಮೀ. ನಷ್ಟು ಅಂತರ್ಜಲ ಮಟ್ಟ ಇಳಿಕೆಯಾಗಿದೆ. ತಾಲೂಕುವಾರು ನೋಡಿದರೆ ಬಂಟ್ವಾಳ, ಕಡಬ, ಬೆಳ್ತಂಗಡಿ, ಮಂಗಳೂರು, ಉಳ್ಳಾಲದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷವೇ ಅಂತರ್ಜಲ ಮಟ್ಟ ಉತ್ತಮವಾಗಿದೆ. ಆದರೆ ಮೂಲ್ಕಿ   ಮೂಡುಬಿದಿರೆ, ಪುತ್ತೂರು, ಸುಳ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಇಳಿಕೆಯಾಗಿದೆ.

 ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next