ಹಗರಿಬೊಮ್ಮನಹಳ್ಳಿ: ಕ್ರೀಡಾಕೂಟದಲ್ಲಿ ಪ್ರತಿ ಬಾರಿಯೂ ತಾಲೂಕಿನ ಕೇವಲ ಬೆರಳೆಣಿಕೆಯಷ್ಟು ಗ್ರಾಮೀಣ ಶಾಲೆಗಳು ಉತ್ತಮ ಪ್ರದರ್ಶನ ತೋರುತ್ತಿವೆ. ಮತ್ತೊಂದೆಡೆ ಬಹುತೇಕ ಶಾಲೆಗಳು ಇಂದಿಗೂ ಕ್ರೀಡೆಯಲ್ಲಿ ನಿದ್ದೆಯ ಮಂಪರಿನಿಂದ
ಹೊರ ಬಂದಿಲ್ಲ.
ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಈ ಹಿಂದೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಗ್ರಾಮೀಣ ಶಾಲೆಗಳು ಈ ಬಾರಿಯೂ ಜಯಭೇರಿ ಮುಂದುವರಿಸಿವೆ. ಖೋ-ಖೋ ಪಂದ್ಯಾಟದಲ್ಲಿ
ತೆಲುಗೋಳಿ ಪ್ರೌಢಶಾಲೆ ಇತರೆ ಶಾಲೆಗಳು ನಾಚಿಕೆ ಪಟ್ಟುಕೊಳ್ಳುವಂತೆ ಸತತ 7ಬಾರಿ ಜಿಲ್ಲಾ ಮಟ್ಟ ಪ್ರವೇಶಿಸಿದೆ. ಹಳ್ಳಿ ಮಕ್ಕಳ ಈ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾದರೆ, ಇತರೆ ಶಾಲೆಗಳ ಕಳಪೆ ಸಾಧನೆಗೆ ವಿದ್ಯಾರ್ಥಿಗಳ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದುರಂತವೆಂದರೆ ಕಳೆದ ಹಲವು ವರ್ಷದಿಂದಲೂ ವಿವಿಧ ಶಾಲೆಯ ಮುಖ್ಯಗುರುಗಳು ಮತ್ತು ದೈಹಿಕ ಶಿಕ್ಷಕರು ತಮ್ಮ ಶಾಲೆಯ ಕಳಪೆ ಪ್ರದರ್ಶನಕ್ಕೆ ಕಾರಣ ಮತ್ತು ಪರಿಹಾರಗಳನ್ನ ಕಂಡುಕೊಳ್ಳುವ ಕನಿಷ್ಠ ಯತ್ನ ನಡೆಸಿಲ್ಲ.
ಗ್ರಾಮೀಣ ಶಾಲೆಗಳ ಮೇಲುಗೈ: ಕಬಡ್ಡಿಯಲ್ಲೂ ಹಂಪಾಪಟ್ಟಣ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಜಯದ ಅಭಿಯಾನವನ್ನು 7ನೇ ವರ್ಷಕ್ಕೆ ಮುಂದುವರಿಸಿದ್ದಾರೆ. ಇದೇ ಶಾಲೆಯ ವಿದ್ಯಾರ್ಥಿನಿಯರು ಕಳೆದ ಬಾರಿ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಬನ್ನಿಗೋಳ, ಬ್ಯಾಸಿಗಿದೇರಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜಯ ಗಳಿಸಿದ್ದಾರೆ. ಅದರಂತೆ ಕಿತ್ನೂರ್ ಪ್ರಾಥಮಿಕ ಶಾಲೆಯ ಮಕ್ಕಳು ಮೈದಾನ, ದೈಹಿಕ ಶಿಕ್ಷಕರು ಇಲ್ಲದಿದ್ದರೂ ಪ್ರತಿ ಬಾರಿ ಖೋ-ಖೋದಲ್ಲಿ ಜಯದ ಓಟ ಮುಂದುವರಿಸಿದ್ದಾರೆ. ಉಳಿದ ಶಾಲೆಗಳು ಕ್ರೀಡೆಯಲ್ಲಿ ನೀರಸ ಪ್ರದರ್ಶನ ನೀಡುತ್ತಿರುವುದು ಏಕೆ ಎಂಬುವ ಜಿಜ್ಞಾಸೆ ಹುಟ್ಟು ಹಾಕಿದೆ. ಪಟ್ಟಣದ ಶಾಲೆಗಳು ಕೇವಲ ಮಕ್ಕಳನ್ನ ಅಂಕ ಗಳಿಕೆಯ ಯಂತ್ರವನ್ನಾಗಿ ಪರಿಗಣಿಸುತ್ತಿರುವುದು ಹಿನ್ನಡೆಗೆ ಪ್ರಮುಖ್ಯ ಕಾರಣವಾಗಿದೆ.
ಷಟಲ್ ಪಂದ್ಯಾಟಕ್ಕೆ ಸೂಕ್ತ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆ ಇಲ್ಲವೆಂಬ ಏಕೈಕ ಕಾರಣದಿಂದ ಪಟ್ಟಣದ ವಿದ್ಯಾರ್ಥಿಗಳು ಸ್ಥಾನ ಪಡೆಯುತ್ತಿದ್ದಾರೆ. ವಾಲಿಬಾಲ್ ಪಂದ್ಯಾಟದಲ್ಲಿ ತಂಬ್ರಹಳ್ಳಿ ಪ್ರೌಢಶಾಲೆಯ ಮಕ್ಕಳು ಅಗ್ರಸ್ಥಾನಿಗಳಾದರೆ, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಬನ್ನಿಗೋಳ ಶಾಲೆಯ ಮಕ್ಕಳು ಪಾರುಪತ್ಯ ಸಾಧಿಸುತ್ತಾರೆ. ಇನ್ನೊಂದೆಡೆ ಪಟ್ಟಣದಲ್ಲಿ ಅತ್ಯಧಿಕ ಮಕ್ಕಳನ್ನು ಹೊಂದಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ದೈಹಿಕ ಶಿಕ್ಷಕರನ್ನು ಹೊಂದಿದ್ದರೂ ಯಾವೊಂದು ಗುಂಪು ಆಟದಲ್ಲಿ ವಿಜೇತರಾಗದೆ ಮೂಲೆ ಗುಂಪಾಗಿದ್ದಾರೆ. ದೈಹಿಕವಾಗಿ ಪಟ್ಟಣ ಶಾಲೆಯ ಮಕ್ಕಳು ಸದೃಢವಾಗಿದ್ದರೂ ದೈಹಿಕ ಶಿಕ್ಷಕರು ಇವರನ್ನು ಸರಿಯಾಗಿ ತರಬೇತಿ ನೀಡಿ ಸಜ್ಜುಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಳೆದ ಬಾರಿ ಕಿತ್ನೂರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಭಾಗೀಯ ಮಟ್ಟದಲ್ಲಿ ಖೋ-ಖೋ ಪಂದ್ಯಾಟದಲ್ಲಿ ವಿಜೇತರಾದಾಗ ಇಡೀ ಗ್ರಾಮಸ್ಥರೇ ಮಕ್ಕಳನ್ನು ಬಂಡಿಯಲ್ಲಿ ಮೆರವಣಿಗೆ ಮಾಡಿದ್ದು ಕಣ್ಣು ಕುಕ್ಕುವಂತಿತ್ತು. ಕಿತ್ನೂರ್ ಗ್ರಾಮಸ್ಥರ ಸಂತೋಷ ಮುಗಿಲು ಮುಟ್ಟುವಂತಿತ್ತು. ವಿಪರ್ಯಾಸವೆಂದರೆ ಇಂತಹ ಶಾಲೆಯಲ್ಲಿ ಇಂದಿಗೂ ದೈಹಿಕ ಶಿಕ್ಷಕರಿಲ್ಲದಿರುವುದು ತಾಲೂಕಿನ ಶಿಕ್ಷಣ ಇಲಾಖೆಯ ಘೋರ ದುರಂತವೇ ಸರಿ.
ಸರ್ಕಾರಿ ಜಾಗ ಗುರುತಿಸಲು ಸೂಚನೆ
ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟ ಪ್ರತಿನಿಧಿಸುವಂತೆ ಸೂಕ್ತ ತರಬೇತಿ ನೀಡಲಾಗುವುದು. ಮೈದಾನದ ಕೊರತೆ ನಿವಾರಣೆ ಹಿನ್ನೆಲೆಯಲ್ಲಿ ಆಯಾ ಶಾಲೆಯ ಸಮೀಪದ ಸರ್ಕಾರಿ ಜಮೀನುಗಳನ್ನು ಪತ್ತೆ ಹಚ್ಚಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ದೈಹಿಕ ಶಿಕ್ಷಕರ ಕೊರತೆ ಕುರಿತಂತೆ ಸಚಿವರ ಗಮನ ಸೆಳೆಯಲಾಗುವುದು.
ಎಸ್.ಭೀಮಾನಾಯ್ಕ, ಶಾಸಕರು.
ಶಿಕ್ಷಕ, ಮೈದಾನದ ಕೊರತೆ
ತಾಲೂಕಿನಲ್ಲಿ 52 ಪ್ರೌಢಶಾಲೆಗಳಿದ್ದು, ಕೇವಲ ಎರಡು ಶಾಲೆ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿದ್ದಾರೆ. ಪ್ರತಿ ಪ್ರೌಢಶಾಲೆಗಳಲ್ಲಿ ಮೈದಾನದ ವ್ಯವಸ್ಥೆಯಿದ್ದು ಬಳಸಿಕೊಳ್ಳುವಲ್ಲಿ ದೈಹಿಕ ಶಿಕ್ಷಕರು ಹಿಂದೆ
ಬಿದ್ದಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ದೈಹಿಕ ಶಿಕ್ಷಕರ ಕೊರತೆ ಇದ್ದು ಮಕ್ಕಳ ಕ್ರೀಡಾಸಕ್ತಿಗೆ ತಣ್ಣಿರೆರಚಿದಂತಾಗಿದೆ. ತಾಲೂಕಿನಲ್ಲಿ ಕೇವಲ 31 ದೈಹಿಕ ಶಿಕ್ಷಕರಿದ್ದು, 43 ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದೆ. ತಾಲೂಕಿನ ರಾಯ್‌ರಾಳ ತಾಂಡಾ, ಕಿತ್ನೂರ್, ಬನ್ನಿಕಲ್ಲು, ಕೆವಿಆರ್ ಕಾಲೋನಿ, ನಾರಾಯಣ ದೇವರಕೆರೆ, ಹಂಪಾಪಟ್ಟಣ ಸೇರಿದಂತೆ ಬಹುತೇಕ ಶಾಲೆಗಳಲ್ಲಿ ಕ್ರೀಡಾ ಮೈದಾನದ ಕೊರತೆಯಿದೆ.
ಪಾರಿ ಬಸವರಾಜ, ಬಿಇಒ.
ಸುರೇಶ ಯಳಕಪ್ಪನವರ