ಜೈಪುರ: ಮದುವೆ ಸಂಭ್ರಮದಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಜಗಳ ಉಂಟಾಗಿ ತಾರಕಕ್ಕೇರಿದ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿರುವುದು ವರದಿಯಾಗಿದೆ.
ವರನ ಕಡೆಯ ಮದುವೆ ದಿಬ್ಬಣ ವಧುವಿನ ಗ್ರಾಮಕ್ಕೆ ಬಂದಿದೆ. ಈ ವೇಳೆ ವಧುವಿನ ಕಡೆಯವರು ಮದುವೆ ನಡೆಯುತ್ತಿರುವ ಸ್ಥಳದಲ್ಲಿ ಸಂಭ್ರಮದಿಂದ ಪಟಾಕಿ ಸಿಡಿಸಿದ್ದಾರೆ.
ವರನ ಕಡೆಯ ವ್ಯಕ್ತಿಯೊಬ್ಬ ತನ್ನ ಕಾರು ಪಾರ್ಕ್ ಮಾಡುವ ಜಾಗದಲ್ಲಿ ಪಟಾಕಿ ಸಿಡಿಸುತ್ತಿದ್ದ ವಧುವಿನ ಕಡೆಯವರ ಬಳಿ ವಾಗ್ವಾದಕ್ಕೆ ಇಳಿದಿದ್ದಾನೆ. ಮೊದಲಿಗೆ ಮಾತಿನಿಂದ ಆರಂಭವಾದ ಜಗಳ ಆ ಬಳಿಕ ದೈಹಿಕವಾಗಿ ಹಲ್ಲೆಯವರೆಗೂ ಹೋಗಿದೆ. ಪರಿಣಾಮ ವರನ ಕಡೆಯ ವ್ಯಕ್ತಿ ಸಿಟ್ಟಿನಲ್ಲಿ ಕಾರಿಗೆ ಹತ್ತಿ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಗಳ ಮೇಲೆ ಹರಿಸಿದ್ದಾನೆ. ತನ್ನ ಮುಂದೆ ನಿಂತಿದ್ದ ವ್ಯಕ್ತಿಗಳ ಮೇಲೆ ಕಾರು ಹರಿಸಿದ್ದ ಕಾರಣ 7 ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ಗಾಯಗೊಂಡು ನರಳಾಡುತ್ತಿರುವ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಯಗೊಂಡ ಏಳು ಜನರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದು, ಇತರರನ್ನು ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.