Advertisement

ಮನೆ ಬಾಗಿಲಿಗೆ ಬರಲಿದೆ ದಿನಸಿ-ತರಕಾರಿ-ಔಷಧಿ

06:13 PM Mar 29, 2020 | Suhan S |

ಭಟ್ಕಳ: ಪಟ್ಟಣದಲ್ಲಿ ವಿವಿಧ ಅಂಗಡಿಕಾರರು ಮನೆಮನೆಗೆ ದಿನಸಿ, ತರಕಾರಿ ಸೇರಿದಂತೆ ಔಷಧವನ್ನು ವಿತರಣೆ ಮಾಡಲಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಭರತ್‌ ಎಸ್‌. ತಿಳಿಸಿದ್ದಾರೆ.

Advertisement

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ಕಳದಲ್ಲಿ ಇನ್ನೂ ಹೆಚ್ಚಿನ ನಿಗಾ ವಹಿಸಲು ಹೆಲ್ತ್‌ ಎಮರ್ಜೆನ್ಸಿ ಘೋಷಿಸಲಾಗಿದೆ. ಜನರಿಗೆ ಅಗತ್ಯ ವಸ್ತು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಯಾರೂ ಕೂಡಾ ಭಯಪಡುವ ಅಗತ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗೃತಿ ವಹಿಸಬೇಕಾಗಿದೆ ಎಂದರು.

ಆಹಾರ ಪೂರೈಕೆಗೆ ಸಂಬಂಧಪಟ್ಟಂತೆ ಹಿಂದಿನ ಸಹಾಯಕ ಆಯುಕ್ತ ಹಾಗೂ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಸಾಜಿದ್‌ ಅಹಮ್ಮದ್‌ ಮುಲ್ಲಾ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಡಾ| ಶರದ್‌ ನಾಯಕ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ಡಿವೈಎಸ್‌ಪಿ ಗೌತಮ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದರು. ಯಾವುದೇ ರೀತಿಯ ಅವಶ್ಯಕತೆಗಾಗಿ ಜನತೆ ಸಂಬಂಧಪಟ್ಟವರನ್ನು ಸಂಪರ್ಕಿಸುವಂತೆ ತಿಳಿಸಿದ ಅವರು, ತೊಂದರೆಯಾದಲ್ಲಿ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸಬಹುದು, ಮನೆಯಿಂದ ಹೊರಕ್ಕೆ ಬಂದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ವಾಹನಗಳಲ್ಲಿ ಬಂದರೆ ಅವರ ವಾಹನ ಪರವಾನಗಿ ರದ್ದಾಗುವುದು. ಎರಡನೇ ಬಾರಿ ನಿಯಮ ಮೀರಿದರೆ ವಾಹನ ವಶಕ್ಕೆ ಪಡೆದು ಜಪ್ತಿ ಮಾಡಲಾಗುವುದು ಎಂದೂ ತಿಳಿಸಿದರು.

ಸಾಜಿದ್‌ ಅಹಮ್ಮದ್‌ ಮುಲ್ಲಾ ಮಾತನಾಡಿ, ಜನತೆ ತಮಗೆ ಅನುಕೂಲವಿದ್ದ ಅಂಗಡಿಯವರಿಗೆ ತಿಳಿಸಿ ದಿನಸಿ ಇತ್ಯಾದಿ ಸಾಮಾನುಗಳನ್ನು ತರಿಸಿಕೊಳ್ಳಬಹುದು ಎಂದರು. ಡಿವೈಎಸ್‌ಪಿ ಗೌತಮ್‌ ಮತನಾಡಿ, ಸಾರ್ವಜನಿಕರು ಮನೆಯಿಂದ ಹೊರಗೆ ಬರದೆ ಸಹಕರಿಸಬೇಕು. ಕೆಲವೊಂದು ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತದೆ. ಅಂತವರ ಮೇಲೆ ಇಲಾಖೆ ಸದಾ ನಿಗಾ ವಹಿಸಿದ್ದು, ತಪ್ಪು ಸಂದೇಶ ಹರಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಡಾ| ಶರದ್‌ ನಾಯಕ ಮಾತನಾಡಿ, ಯಾರ್ಯಾರು ಹೋಮ್‌ ಕ್ವಾರಂಟೈನ್‌ ನಲ್ಲಿದ್ದಾರೆ ಅವರು ಯಾವುದೇ ಕಾರಣಕ್ಕೂ ಹೊರಕ್ಕೆ ಬರಬಾರದು ಎಂದ ಅವರು, ಖಾಸಗಿ ವೈದ್ಯರು ಸೇವೆಗೆ ಮರುಳುವುದಾದರೆ ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ಭಟ್ಕಳ ತಾಲೂಕು ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯನ್ನಾಗಿ ಮಾಡಿದ್ದು, ಸಣ್ಣಪುಟ್ಟ ಚಿಕಿತ್ಸೆಗಾಗಿ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವಂತೆಯೂ ಸಲಹೆ ಮಾಡಿದರು. ಡಿಎಚ್‌ಒ ಡಾ| ಜಿ.ಎನ್‌. ಅಶೋಕ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next