ಮಂಗಳೂರು: ಸಂಪೂರ್ಣ ಬಂದ್ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಸಲು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಿನಸಿ ವಸ್ತುಗಳ ಸಂಗ್ರಹಣಾ ಕೇಂದ್ರವನ್ನು ತೆರೆಯಲಾಗಿದೆ.
ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯನ್ನು ಮೂರು ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ಪಾಲಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಈ ಸಂಗ್ರಹಣಾ ಕೇಂದ್ರಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಈ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ 1077 ಸಂಖ್ಯೆಗೆ ಕರೆ ಮಾಡಬಹುದು.
ದಿನಸಿ ಸಾಮಗ್ರಿಗಳನ್ನು ದಾನ ಮಾಡಲು ಬಯಸುವವರು ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ ಸಂಗ್ರಹಣಾ ಕೇಂದ್ರದಲ್ಲಿ ಅಕ್ಕಿ, ತೊಗರಿ ಬೇಳೆ, ದವಸ ಧಾನ್ಯಗಳು, ಸನ್ ಫ್ಲವರ್ ಆಯಿಲ್, ಸಾಂಬಾರ ಪದಾರ್ಥಗಳ ಪ್ಯಾಕ್, ಗರಂ ಮಸಾಲೆ, ಉಪ್ಪಿನಕಾಯಿ, ದೀರ್ಘಕಾಲ ಬಾಳಿಕೆ ಬರುವ ತರಕಾರಿಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಇಂದು ಮೊದಲ ದಾನವಾಗಿ 5 ಕ್ವಿಂಟಾಲ್ ಅಕ್ಕಿಯನ್ನು ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ನೀಡಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಹೆಗ್ಡೆಯವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.