ಬಾಗೇಪಲ್ಲಿ: ಬ್ರಾಹ್ಮಣರಲ್ಲಿ ಬಡವರು ಮತ್ತು ಕಡುಬಡವರು ಇದ್ದಾರೆ ಎಂದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತಿಳಿದು ಬಂದಿದೆ. ಸಮುದಾಯದ ಪುರೋಹಿತರ, ಅಡುಗೆ ಭಟ್ಟರ ಪಟ್ಟಿ ತಯಾರಿಸಿ ಸುಮಾರು 40 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡಲಾಯಿತು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ತಿಳಿಸಿದರು.
ಪಟ್ಟಣದ ಹೊರ ವಲಯದ ಗಡಿದಂ ಶ್ರೀ ಗಾಯತ್ರಿ ದೇವಾಲಯದ ಸಭಾಂಗಣದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ದಿಂದ ಆಯೋಜನೆ ಮಾಡಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಉತ್ತಮ ವ್ಯಾಸಂಗ ಮಾಡಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದರು.
ಬ್ರಾಹ್ಮಣ ಸಂಘದ ತಾಲೂಕು ಅಧ್ಯಕ್ಷ ಎಸ್.ಮುನಿರಾಮಯ್ಯ ಮಾತನಾಡಿ, ಬ್ರಾಹ್ಮಣರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಲ್ಲಾ ಸಮುದಾಯಗಳಂತೆ ಬ್ರಾಹ್ಮಣ ಸಮುದಾಯಕ್ಕೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡುವಂತೆ ಆದೇಶ ಮಾಡಿದ್ದಾರೆ. ವಿಪ್ರಸಮುದಾಯದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಶೇ.1.5 ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿಪಥದಲ್ಲಿ ಸಾಗಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 10% ಮೀಸಲಾತಿ ನೀಡಿರುವುದು ಸ್ವಾಗತಾರ್ಹ ಎಂದರು. ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಅಬ್ಬೂರು ವೆಂಕಟೇಶಯ್ಯ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಪಾರಿತೋಷಕ, ಪಠ್ಯಪುಸ್ತಕ, ಬ್ಯಾಗ್, ಲೇಖನಿ ಸಾಮಗ್ರಿಗಳನ್ನು ನೀಡಿ ಪುರಸ್ಕರಿಸಿದರು.
ಸಂಘದ ತಾ.ಅಧ್ಯಕ್ಷ ಎಸ್.ಮುನಿರಾಮಯ್ಯ, ಉಪಾಧ್ಯಕ್ಷಡಿ.ಎಸ್.ಹನುಮೇಶ್, ಪ್ರ.ಕಾರ್ಯದರ್ಶಿ ಸಿ.ವೆಂಕಟರಾವ್, ಖಜಾಂಚಿ ಎನ್.ನಾಗರಾಜ್, ಸಹ ಕಾರ್ಯದರ್ಶಿ ಎಸ್.ವೇಣು,ಸಂಚಾಲಕ ಎಸ್. ನಾರಾಯಣರಾವ್, ಸಂಘಟನಾ ಕಾರ್ಯದರ್ಶಿ ಜಿ.ಲಕ್ಷ್ಮಿನಾರಾಯಣ, ಬಿ.ಎಸ್.ಕೃಷ್ಣ, ಪಿ.ಎಲ್.ನಾಗರಾಜರಾವ್, ವ್ಯವಸ್ಥಾಪಕ ಬಿ.ಎಸ್.ಸೀತಾರಾಮಯ್ಯ, ಜಂಟಿ ಸಂಘಟನಾಕಾರ ಎಸ್.ಎನ್.ನಂಜುಂಡರಾವ್, ಸಹ ಸಂಚಾಲಕ ಎಂ.ಆರ್. ನರಸಿಂಗರಾವ್ ಇದ್ದರು.