ಚೀನಾ: ನೀವು ಧೂಮಪಾನ ಮಾಡುತ್ತಿದ್ದೀರಾ?, ಆಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಸಾಮಾನ್ಯವಾಗಿ ಮನುಷ್ಯನ ಶ್ವಾಸಕೋಶ ನಸುಗಂಪು ಬಣ್ಣವಿರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಯ (52) ಶ್ವಾಸಕೋಶವು ಸುಟ್ಟು ಕರಕಲಾಗಿರುವ ವಸ್ತುವಿನಂತೆ ಕಾಣುತ್ತಿದೆ. ಕಾರಣವಿಷ್ಟೇ, ಈತ ಕಳೆದ 30 ವರ್ಷಗಳಿಂದ ಚೈನ್ ಸ್ಮೋಕರ್ ಆಗಿದ್ದ.
ಚೀನಾದ ಈ ‘ಚೈನ್ ಸ್ಮೋಕರ್’ ನಿಧನ ಹೊಂದಿದ ಬಳಿಕ ತನ್ನ ಅಂಗಾಂಗಗಳನ್ನು ದಾನ ಮಾಡಿದ್ದ.
ವುಕ್ಸಿ ಪೀಪಲ್ಸ್ ಆಸ್ಪತ್ರೆಯ ಶಸ್ತ್ರತಜ್ಞರು, ಅಂಗಾಂಗಗಳನ್ನು ಹೊರತೆಗೆದಾಗ ಈತನ ಶಾಸ್ವಕೋಶ ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಕೂಡಿತ್ತು. ಸುಟ್ಟ ಟೈರ್‌ನಂತೆ ಕಾಣುತ್ತಿತ್ತು. ಇದನ್ನು ನೋಡಿದ ವೈದ್ಯರೇ ಬೆಚ್ಚಿ ಬಿದ್ದಿದ್ದು, ಇನ್ನು ಮುಂದೆ ಇಂತಹ ಅಂಗಾಂಗಗಳನ್ನು ಸ್ವೀಕರಿಸಬಾರದು ಎಂದು ನಿರ್ಧರಿಸಿದ್ದಾರೆ.
ಈ ಶ್ವಾಸಕೋಶದ ದೃಶ್ಯ ವೈರಲ್ ಆಗಿದ್ದು, 2.5 ಕೋಟಿಗೂ ಅಧಿಕ ಮಂದಿ ಇದನ್ನು ವೀಕ್ಷಿಸಿ, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಧೂಮಪಾನಿಗಳು, ನಾವಿನ್ನು ತಂಬಾಕು ಮುಟ್ಟುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಧೂಮಪಾನ ತ್ಯಜಿಸಲು ಈ ದೃಶ್ಯವು ಅತ್ಯುತ್ತಮ ಜಾಹೀರಾತು ಆಗಿದೆ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವರ್ಷಕ್ಕೆ 80 ಲಕ್ಷಕ್ಕೂ ಅಧಿಕ ಮಂದಿ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ.