ಕೆಜಿಎಫ್: ಗೃಹಲಕ್ಷ್ಮೀ ಯೋಜನೆ ನೋಂದಣಿಯಲ್ಲಿ ಕೋಲಾರ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು 3.26 ಲಕ್ಷ ಕುಟುಂಬಗಳಿವೆ. ಇದುವರೆಗೆ ಜಿಲ್ಲೆಯ 2 ಲಕ್ಷ ಕುಟುಂಬಗಳನ್ನು ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ನೋಂದಣಿ ಮಾಡುವ ಮೂಲಕ ಒಟ್ಟಾರೆ ಶೇ.66ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಕಾರಿ ಅಕ್ರಂ ಪಾಷಾ ಹೇಳಿದರು.
ನಗರಸಭಾ ಕಾರ್ಯಾಲಯಕ್ಕೆ ಭೇಟಿ ನೀಡಿ ಗೃಹಲಕ್ಷ್ಮೀ ನೋಂದಣಿ ಪ್ರಕ್ರಿಯೆ ಪರಿಶೀಲಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲೆಲ್ಲಾ ಈಗಾಗಲೇ ಬಹುತೇಕ ನೋಂದಣಿ ಕಾರ್ಯ ಪೂರ್ಣಗೊಂಡಿದ್ದು, ಪುರಸಭೆ ಮತ್ತು ನಗರಸಭೆಗಳಲ್ಲಿ ನೋಂದಣಿ ಕಾರ್ಯ ಕ್ಷಿಪ್ರ ಗತಿಯಲ್ಲಿ ಸಾಗುತ್ತಿದೆ ಎಂದರು.
ಮೂಲದಲ್ಲಿಯೇ ಕಸ ವಿಂಗಡಿಸಿ: ಸ್ವಚ್ಛತೆಗೆ ಆದ್ಯತೆ ನೀಡಿ ನಗರದಾದ್ಯಂತ ಎಲ್ಲೆಲ್ಲೆ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೇ ನಿಲ್ಲುತ್ತದೆಯೋ, ಅದೆಲ್ಲವನ್ನೂ ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಸ್ವತ್ಛತೆಯನ್ನು ಕಾಪಾಡಲು ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲಿಯೇ ವಿಂಗಡಣೆ ಮಾಡಲು ಪ್ರತಿ ಮನೆ ಮನೆಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ರಸ್ತೆ ಡಾಂಬರೀಕರಣಕ್ಕೆ ಸೂಚನೆ: ಉರಿಗಾಂಪೇಟೆ ರಸ್ತೆಗೆ ಭೇಟಿ ನೀಡಿ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಕೂಡಲೇ ಆಸ್ಪಾಲ್ಟಿಂಗ್ ಕಾಮಗಾರಿ ಪ್ರಾರಂಭಿಸಿ ಮುಂದಿನ ಬುಧವಾರದೊಳಗೆ ರಸ್ತೆ ಡಾಂಬರೀಕರಣ ಕಾರ್ಯ ಮುಗಿಸುವಂತೆ ತಾಕೀತು ಮಾಡಿದರು. ಇದಲ್ಲದೇ ಕಳೆದ ತಿಂಗಳ 21ರಂದು ಉರಿಗಾಂಪೇಟೆಯ ತಗ್ಗುಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ, ಮೇಲಿನಿಂದ ನೀರು ಹರಿಯುವ ಜಾಗದಲ್ಲಿ ಬ್ರಾಂಚ್ ಕೆನಾಲ್ ನಿರ್ಮಿಸಲು ನಗರಸಭಾ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು. ಆಶ್ರಯ ಬಡಾವಣೆಯಲ್ಲಿ 14 ಎಕರೆ ಪ್ರದೇಶದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡಿರುವ 456 ನಿವೇಶನಗಳು ಅಂತಿಮ ನಕ್ಷೆ ಅನುಮೋದನೆ ಹಂತದಲ್ಲಿದ್ದು, ಅದನ್ನು ತ್ವರಿತವಾಗಿ ವಿಲೇ ಮಾಡುವುದಾಗಿ ತಿಳಿಸಿದರು.
ಅನುದಾನ ಬಿಡುಗಡೆಗೆ ಸೂಚನೆ: ಗೃಹಭಾಗ್ಯ ಯೋಜನೆಯಡಿಯಲ್ಲಿ ಪೌರ ಕಾರ್ಮಿಕರಿಗಾಗಿ ನಿರ್ಮಾಣ ಮಾಡಲಾಗಿರುವ 60 ಮನೆಗಳು ಕೂಡಲೇ ಸಂಬಂಧಪಟ್ಟ ಫಲಾನುಭವಿಗಳಿಗೆ ಹಸ್ತಾಂತರ ಆಗಬೇಕಾಗಿದೆ. ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ ಅನುದಾನ ಬಿಡುಗಡೆ ಆಗದ ಕಾರಣ, ಎರಡು ವರ್ಷಗಳಿಂದ ಗುತ್ತಿಗೆದಾರರು 10 ರಿಂದ 15 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿರಲಿಲ್ಲ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಕೂಡಲೇ ಆಶ್ರಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ, ತಡೆ ಹಿಡಿದಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮಾತುಕತೆ ನಡೆಸಿ, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಆಶ್ರಯ ಬಡಾವಣೆಗೆ ತ್ವರಿತವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಜರಾತಿ ಪರಿಶೀಲನೆ: ಸಿಬ್ಬಂದಿ ಹಾಜರಾತಿ ಪುಸ್ತಕದ ಪರಿಶೀಲನೆ ನಡೆಸಿ, ಹಾಜರಾತಿಯಲ್ಲಿ ಎಲ್ಲ ಸಿಬ್ಬಂದಿ ಹಾಜರಾತಿ ಇದ್ದು, ಸಿಬ್ಬಂದಿ ಕೊರತೆ ಇಲ್ಲವೇ ಎಂದು ಪೌರಾಯುಕ್ತರನ್ನು ಪ್ರಶ್ನೆ ಮಾಡಿದಾಗ, ಶೇ.40 ರಷ್ಟು ಸಿಬ್ಬಂದಿ ಕೊರತೆ ಇರುವುದಾಗಿ ತಿಳಿಸಿ, ಪ್ರಮುಖವಾಗಿ ಕರ ವಸೂಲಿ ಮಾಡುವ ಸಿಬ್ಬಂದಿಯೇ ಇಲ್ಲ ಎಂದು ಪೌರಾಯುಕ್ತ ಪವನ್‌ಕುಮಾರ್ ಮಾಹಿತಿ ನೀಡಿದರು. ಪೌರಾಯುಕ್ತ ಪವನ್‌ಕುಮಾರ್, ಎಇಇ ಮಂಜುನಾಥ್, ಶಿವಪ್ರಕಾಶ್, ಶಶಿಕುಮಾರ್, ಜಯರಾಂ, ಕೃಷ್ಣಮೂರ್ತಿ, ಜೆಇ ಶಿವರಾಂ ಮೊದಲಾದವರು ಇದ್ದರು.
ವಾಹನಗಳ ಹಾರಾಜಿಗೆ ಟೆಂಡರ್: ನಗರಸಭೆ ಆವರಣದಲ್ಲಿ ತುಕ್ಕು ಹಿಡಿದು ನಿಂತಿರುವ ಮೂರು ಚಕ್ರದ 4 ಗಾಡಿಗಳು ಮತ್ತು ನಾಲ್ಕು ಚಕ್ರದ ಮಹಿಂದ್ರಾ 5 ಗಾಡಿಗಳ ವಿಲೇವಾರಿಗೆ ಟೆಂಡರ್ ಕರೆಯಲಾಗಿದ್ದು, ಜು.31ಕ್ಕೆ ಆನ್‌ಲೈನ್ ಮೂಲಕ ಹರಾಜುದಾರರು ಅರ್ಜಿಗಳನ್ನು ಹಾಕಿಕೊಳ್ಳಬಹುದಾಗಿದ್ದು, ಹರಾಜು ಪ್ರಕ್ರಿಯೆ ಆಗಸ್ಟ್ ಒಂದರಿಂದ ನಾಲ್ಕನೇ ತಾರೀಖೀನವರೆಗೆ ನಡೆಯಲಿದೆ ಎಂದರು.