ಬೆಂಗಳೂರು: ವಿವಿಧ ಬಗೆಯ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ 78 ಲಕ್ಷ ಮಂದಿಯೂ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಲಿದ್ದಾರೆ, ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.
ಕಂದಾಯ ಇಲಾಖೆಯ ವ್ಯಾಪ್ತಿಗೊಳಪಡುವ ಪಿಂಚಣಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ವಿಕಲಚೇತನರು, ವಯೋವೃದ್ಧರು, ವಿಧವೆಯರು, ಮಂಗಳಮುಖೀಯರು ಸೇರಿ ಒಟ್ಟು 78 ಲಕ್ಷ ಮಂದಿಗೆ ವರ್ಷಕ್ಕೆ 10,411 ಕೋಟಿ ರೂ.ಗಳನ್ನು ಪಿಂಚಣಿಗಾಗಿ ಸರ್ಕಾರ ಖರ್ಚು ಮಾಡಲಾಗುತ್ತಿದೆ. ಈ ಕಾರ್ಯಕ್ರಮ 2023-24ನೇ ಸಾಲಿಗೂ ಮುಂದುವರಿಯಲಿದೆ. ಈ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಪಿಂಚಣಿ ಮೊಟಕುಗೊಳಿಸುವುದಿಲ್ಲ, ಪಿಂಚಣಿ ಜತೆಗೆ ಹೆಚ್ಚುವರಿಯಾಗಿ ಗೃಹಲಕ್ಷ್ಮೀ ಯೋಜನೆಯೂ ದೊರೆಯಲಿದೆ ಎಂದರು.
1.30 ಕೋಟಿ ಅರ್ಜಿ ನಿರೀಕ್ಷೆ: ಗೃಹಲಕ್ಷ್ಮೀ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸುತ್ತಿದ್ದು, ತಳಮಟ್ಟದಲ್ಲಿ ಈ ಇಲಾಖೆಗೆ ಸಿಬ್ಬಂದಿ ಕೊರತೆ ಇರುವುದರಿಂದ ಪಿಂಚಣಿ ಪಾವತಿಯಲ್ಲಿ ಕಂದಾಯ ಇಲಾಖೆಗೆ ಅನುಭವ ಇರುವುದು ಹಾಗೂ ಈಗಾಗಲೇ ವ್ಯವಸ್ಥೆ ಇರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸ್ವೀಕಾರ ಮತ್ತು ವಿಲೇವಾರಿಗೆ ಕಂದಾಯ ಇಲಾಖೆ ಸಹಕಾರ ನೀಡಲಿದೆ ಎಂದು ಸಚಿವರು ವಿವರಿಸಿದರು.
ಈ ಸಂಬಂಧ ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಅಂದಾಜು 1.30 ಕೋಟಿ ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಅರ್ಜಿಗಳನ್ನು ಕೇವಲ ಒಂದು ತಿಂಗಳಲ್ಲಿ ವಿಲೇವಾರಿ ಮಾಡುವುದು ಇಲಾಖೆಗೆ ಸವಾಲಾಗಿದೆ. ಇಡೀ ವರ್ಷದಲ್ಲಿ 1.50 ಕೋಟಿ ಅರ್ಜಿ ವಿಲೇವಾರಿ ಮಾಡುವ ಇಲಾಖೆ ಎರಡು ತಿಂಗಳಲ್ಲಿ 1.30 ಕೋಟಿ ಅರ್ಜಿ ಸ್ವೀಕರಿಸಿ ವಿಲೇವಾರಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಅಟಲ್ ಜನಸ್ನೇಹಿ ಕೇಂದ್ರದ ನಿರ್ದೇಶಕ ಕರೀಗೌಡ ಉಪಸ್ಥಿತರಿದ್ದರು.
ಆನ್‌ಲೈನ್ ಅರ್ಜಿಗೆ ಆದ್ಯತೆ ನೀಡಿ
898 ನಾಡ ಕಚೇರಿಗಳು, ಬಾಪೂಜಿ ಸೇವಾ ಕೇಂದ್ರಗಳು, ಬೆಂಗಳೂರು ಒನ್, ಗ್ರಾಮ ಒನ್ ಸೇರಿದಂತೆ ಒಟ್ಟು 7 ರಿಂದ 8 ಸಾವಿರ ಕೇಂದ್ರಗಳಿಗೆ ಅರ್ಜಿ ಕಳುಹಿಸಬೇಕಿದೆ. ಕೆಲವು ಕಡೆ ಎಲ್ಲಾ ರೀತಿಯ ಸೌಲಭ್ಯಗಳು ಇಲ್ಲ. ಕೆಲವೊಂದು ಸಮಸ್ಯೆಗಳಿವೆ. ಅನ್‌ಲೈನ್ ಮತ್ತು ಆಫ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದರೂ ಆನ್‌ಲೈನ್‌ಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ ಸಚಿವ ಕೃಷ್ಣಬೈರೇಗೌಡ ಅವರು ಈ ಸಂಬಂಧ ಆ್ಯಪ್ ಸಹ ಸಿದ್ಧಪಡಿಸಲಾಗುತ್ತಿದೆ. ಆ್ಯಪ್ ವಾರದೊಳಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಹೇಳಿದರು.