Advertisement

ದುಃಖದ ಜತೆ ನೀರಿನ ಬವಣೆ ನೀಗಿಸಿದ ‘ಪ್ರಾಜೆಕ್ಟ್ ಹ್ಯಾಪಿನೆಸ್‌’

09:10 AM Sep 10, 2020 | Karthik A |

ಆಕೆಗೆ 18 ವರ್ಷದಲ್ಲೇ ಮದುವೆಯಾಯಿತು. ಬಿ.ಕಾಂ ಪದವಿ ಪಡೆಯಬೇಕು ಎನ್ನುವ ಆಸೆಗೆ ಅನಿವಾರ್ಯ ಕಾರಣದಿಂದ ತಿಲಾಂಜಲಿ ಇಟ್ಟು ಪತಿ ಜತೆಗೆ ಕತಾರ್‌ಗೆ ತೆರಳಿದರು.

Advertisement

ಸುಮಾರು ಎಂಟು ವರ್ಷಗಳ ಅನಂತರ ದಂಪತಿ ಊರಿಗೆ ಮರಳಿದರು.

ಈ ಮಧ್ಯೆ ಹಿರಿಯ ಪುತ್ರ ಆಟಿಸಂನಿಂದ ಬಳಲುತ್ತಿದ್ದ ಮತ್ತು ಮಾತನಾಡಲು, ಸಂವಹನ ನಡೆಸಲು ಕಷ್ಟವಾಗುತ್ತಿತ್ತು. ಜತೆಗೆ ಆಕೆಯ ಊರಲ್ಲಿ ನೀರಿಗೆ ಕ್ಷಾಮವಿತ್ತು.

ಈ ಎಲ್ಲ ಸಮಸ್ಯೆಯಿಂದ ಹೊರ ಬರಲು ಆಕೆ ಕಂಡುಕೊಂಡ ದಾರಿ ಗಿಡಗಳನ್ನು ಬೆಳೆಸುವುದು. ಹೀಗೆ 56 ಸೆಂಟ್ಸ್‌ ಸ್ಥಳದಲ್ಲಿ ಕಾಡು ಬೆಳೆದ ಆಕೆ ತನ್ನ ಬೇಸರದಿಂದ ತಕ್ಕ ಮಟ್ಟಿಗೆ ಹೊರ ಬಂದರು.

ಇದು ಯಾವುದೇ ಕತೆಯಲ್ಲ. ಕೇರಳದ ಆಲಪ್ಪುಳ ಜಿಲ್ಲೆಯ ಮಾವೇಲಿಕ್ಕರ ಕುನ್ನಂನ ಜಯಶ್ರೀ ಎಂ.ಬಿ. ಯಶೋಗಾಥೆ. ಕಾಡು ಬೆಳೆಸುವುದನ್ನು ‘ಪ್ರಾಜೆಕ್ಟ್ ಹ್ಯಾಪಿನೆಸ್‌’ ಎಂದು ಕರೆಯುವ ಜಯಶ್ರೀ ಇದರಲ್ಲೇ ದುಃಖ ಮರೆತಿದ್ದಾರೆ, ಸಮಾಧಾನ ಕಂಡುಕೊಂಡಿದ್ದಾರೆ.

Advertisement

ಸಂಬಂಧಿಕರ ವಿರೋಧ
ಕಾಡು ಬೆಳೆಸುವ ತನ್ನ ನಿರ್ಧಾರ ಸುಲಭದ್ದೇನೂ ಆಗಿರಲಿಲ್ಲ ಎನ್ನುತ್ತಾರೆ ಜಯಶ್ರೀ. ‘ಪತಿ ವಿಶ್ವಂಭರ ಜತೆ ಕತಾರ್‌ನಿಂದ ಕುನ್ನಂಗೆ ಹಿಂದಿರುಗಿದ ಸಮಯ. ಇಲ್ಲಿ ನೀರಿಗೆ ಕೊರತೆಯಿತ್ತು. ಹೀಗಾಗಿ ನಾನು ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಲು ನಿರ್ಧರಿಸಿದೆ. ಆಗ ನೆರೆ ಹೊರೆಯವರು, ಸಂಬಂಧಿಕರೆಲ್ಲ ನನ್ನನ್ನು ಗೇಲಿ ಮಾಡಿದರು. ಕಾಡು ಗಿಡಗಳನ್ನು ನೆಡುವ ಬದಲು ಮರಗೆಣಸು ಮುಂತಾದ ಆದಾಯ ತರುವ ಸಸಿಗಳನ್ನು ಬೆಳಸಬಹುದಲ್ಲ ಎಂದು ಪ್ರಶ್ನಿಸಿದರು. ಆದರೆ ನನಗೆ ಅದು ಇಷ್ಟವಿರಲಿಲ್ಲ. ಕಾಡು ಬೆಳೆಸಬೇಕೆನ್ನುವ ನಿರ್ಧಾರದಲ್ಲಿ ಗಟ್ಟಿಯಾಗಿದ್ದೆ. ಹೀಗಾಗಿ 28 ವರ್ಷಗಳ ಹಿಂದೆ ತೇಗ, ಮಹಾಗನಿ, ಮಾವು, ಆಲ ಮುಂತಾದ ಗಿಡಗಳನ್ನು ನೆಟ್ಟೆ. ಇದೀಗ ನಮ್ಮೂರಿನಲ್ಲಿ ಕಾಡುತ್ತಿದ್ದ ನೀರಿನ ಸಮಸ್ಯೆ ಬಗೆಹರಿದಿದೆ. ಅಂದು ಟೀಕಿಸುತ್ತಿದ್ದವರೆಲ್ಲ ಶ್ಲಾ ಸುತ್ತಿದ್ದಾರೆ’ ಎಂದು ವಿವರಿಸುತ್ತಾರೆ ಜಯಶ್ರೀ.

ದುಃಖ ಮರೆಸಿತು
‘ಹಿರಿಯ ಪುತ್ರ ಆಟಿಸಂ ತೊಂದರೆ ಕಾಣಿಸಿಕೊಂಡಿತ್ತು. ಅನೇಕ ಚಿಕಿತ್ಸೆ ನೀಡಿದರೂ ಗುಣಮುಖನಾಗಿರಲಿಲ್ಲ. ಸಂವಹನ ನಡೆಸಲು ಆತನಿಗೆ ಕಷ್ಟವಾಗುತ್ತಿತ್ತು. ಈ ಸಮಯದಲ್ಲಿ ಎಲ್ಲ ಭರವಸೆಯನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದೆ. ಆಗ ಕೈ ಹಿಡಿದದ್ದು ಗಿಡಗಳ ಒಡನಾಟ. ಅವುಗಳನ್ನು ಆರೈಕೆ ಮಾಡುತ್ತಾ ದುಃಖ ಮರೆತೆ’ ಎಂದು ಹೇಳುತ್ತಾರೆ ಜಯಶ್ರೀ.

2008ರಲ್ಲಿ ವಿಶ್ವಂಭರಂ ಕಾಯಿಲೆಯಿಂದ ನಿಧನ ಹೊಂದಿದರು. ಆಗ ಮಕ್ಕಳಿನ್ನು ಚಿಕ್ಕವರು. ಜಯಶ್ರೀ ಹೃದಯ ಚೂರಾಗಿತ್ತು.’ಆಗ ನಾನು ಸಂಪೂರ್ಣವಾಗಿ ಗಿಡಗಳ ಜತೆಗೆ ಸಮಯ ಕಳೆದೆ. ಇದರಿಂದ ನನಗೆ ಜೀವನೋತ್ಸಾಹ ಲಭಿಸಿತು’ ಎಂದು ಸ್ಮರಿಸಿಕೊಳ್ಳುತ್ತಾರೆ ಅವರು.
ಇದೀಗ ಮಕ್ಕಳು ದೊಡ್ಡವರಾಗಿದ್ದು, ಸಮಯ ಸಿಕ್ಕಾಗಲೆಲ್ಲ ತಾಯಿ ಜತೆ ಕೈ ಜೋಡಿಸುತ್ತಾರೆ. ದೊಡ್ಡ ಮಗ ವಿಷ್ಣು ಪಿಎಸ್‌ಸಿ ಪರೀಕ್ಷೆ ತಯಾರಾಗುತ್ತಿದ್ದರೆ ಕಿರಿಯ ಮಗ ವಿಶಾಖ್‌ ಪಿಎಚ್‌ಡಿ ಪಡೆದಿದ್ದಾನೆ. ಸುಮಾರು 50 ವಿಧದ ಮರ ಬೆಳೆದಿರುವ ಜಯಶ್ರೀ ಕೆಲವು ಔಷಧೀಯ ಗಿಡಗಳನ್ನೂ ಆರೈಕೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗಿಡಗಳ ಸಹವಾಸದಿಂದ ದುಃಖ ಮರೆತ ಜಯಶ್ರೀ ಊರಿನ ನೀರಿನ ಸಮಸ್ಯೆಯನ್ನೂ ಬಗೆಹರಿಸಿ ಮಾದರಿಯಾಗಿದ್ದಾರೆ.

ರಮೇಶ್‌ ಬಳ್ಳಮೂಲೆ, ಕಾಸರಗೋಡು

 

Advertisement

Udayavani is now on Telegram. Click here to join our channel and stay updated with the latest news.

Next