ಬೀದರ: ಮಾನವನ ಎಲ್ಲ ಸಮಸ್ಯೆಗಳಿಗೆ ಬೌದ್ಧ ಧಮ್ಮದಲ್ಲಿ ಪರಿಹಾರ ಇದೆ ಎಂದು ಶ್ರೀ ಭಂತೆ ಮನೋರಖೀತ ಕೊಳ್ಳೆಗಾಲ ಹೇಳಿದರು.
ಭಾರತೀಯ ಬೌದ್ಧ ಮಹಾಸಭಾ ಮತ್ತು ಸಮತಾ ಸೈನಿಕ ದಳ ಆಶ್ರಯದಲ್ಲಿ ನಗರದ ಸಿದ್ಧಾರ್ಥ ಕಾಲೇಜು ಆವರಣದಲ್ಲಿ
ಆಯೋಜಿಸಿರುವ 3ನೇ ದಿನದ ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಸಮಸ್ಯೆಗಳಿಗೆ ಅಜ್ಞಾನ ಮತ್ತು ದುರಾಸೆಯೇ ಕಾರಣ. 6 ವರ್ಷಗಳ ತಪಸ್ಸಿನ ನಂತರ ಬುದ್ಧನಿಗೆ ಜ್ಞಾನೋದಯವಾಯಿತು. ದುಃಖಕ್ಕೆ ಅಜ್ಞಾನ ಮತ್ತು ದುರಾಸೆಯೇ ಕಾರಣ ಎಂಬುದನ್ನು ಅರಿತು ಅವುಗಳ ಪರಿಹಾರಕ್ಕೆ ಮಾರ್ಗ ಕಂಡು ಹಿಡಿದು ಜಗತ್ತಿಗೆ ಧಾರೆಯೆರೆದಿದ್ದಾರೆ ಎಂದರು.
ಮಾನವನು ಇಂದ್ರೀಯ ಭೋಗ ಸುಖಗಳಿಗೆ ಅಂಟಿಕೊಳ್ಳಬಾರದು ಎಂದು ಅವರು, ಕಣ್ಣು ಸುಂದರವಾಗಿದ್ದರೆ ಬೇಕು ಅನ್ನುತ್ತದೆ. ಕುರೂಪಿ ಇದ್ದರೆ ಬೇಡ ಅನ್ನುತ್ತದೆ. ಕಿವಿ ಸಂಗೀತ ಕೇಳುತ್ತದೆ, ಕರ್ಕಶ ಶಬ್ದ ಬೇಡವೆನ್ನುತ್ತದೆ. ಮೂಗು ಪರಿಮಳ ಬೇಕು ಅನ್ನುತ್ತದೆ, ಕೆಟ್ಟ ವಾಸನೆ ಬೇಡ ಅನ್ನುತ್ತದೆ. ನಾಲಿಗೆ ರುಚಿ ಬಯಸುತ್ತದೆ, ಕಹಿ ಬೇಡ ಅನ್ನುತ್ತದೆ. ಶರೀರ ಸ್ಪರ್ಶ ಬಯಸುತ್ತದೆ, ಬೆಂಕಿ ಬೇಡ ಅನ್ನುತ್ತದೆ. ಹೀಗೆ ಮಾನವ ಇಂದ್ರೀಯಗಳ ಸುಖ ಭೋಗಗಳಿಗೆ ಅಂಟಿಕೊಂಡಿರುವುದರಿಂದ ದುಃಖ, ಅಂಧಕಾರಗಳಿಗೆ ಬಲಿಯಾಗುತ್ತಿದ್ದಾನೆ ಎಂದು ಹೇಳಿದರು.
ಬುದ್ಧ ಸಾರಿದ ಪಂಚಶೀಲ, ನಾಲ್ಕು ಆರ್ಯ ಸತ್ಯಗಳು ಹಾಗೂ ಅಷ್ಟಾಂಗ ಮಾರ್ಗಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನವನ ದುಃಖಕ್ಕೆ ಏನು ಕಾರಣ ಎಂಬುದನ್ನು ಚೆನ್ನಾಗಿ ಅರಿತು ಅದನ್ನು ಬೇರು ಸಮೇತ
ಕಿತ್ತು ಹಾಕಿದಾಗ ಮಾತ್ರ ಸುಖ ಹಾಗೂ ಶಾಂತಿ ನೆಲೆಸಲು ಸಾಧ್ಯವಿದೆ ಎಂದು ಹೇಳಿದರು.
ಶ್ರೀ ಭಂತೆ ಸಂಘಪಾಲ ಸಾನ್ನಿಧ್ಯ ವಹಿಸಿ, ಸಮಯಪ್ರಜ್ಞೆ ಹಾಗೂ ಧಮ್ಮದಾನದ ಕುರಿತು ಪ್ರವಚನ ನೀಡಿದರು. ಭಂತೆ ಸಂಘಸೈನಿಕ, ಭಂತೆ ಮೇಧಾಂಕರ್ ಮುಂಬಯಿ, ಭಂತೆ ಧಮ್ಮಕೀರ್ತಿ, ಭಂತೆ ಸಂಘಜ್ಯೋತಿ ಇದ್ದರು. ಮಹಾಸಭಾ ಜಿಲ್ಲಾಧ್ಯಕ್ಷ ಜಗನ್ನಾಥ ಬಡಿಗೇರ, ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಶೆಟ್ಟಿ ದೀನೆ, ರಾಜ್ಯ ಪದಾಧಿಕಾರಿ ರಾಜಪ್ಪಾ ಗೂನಳ್ಳಿ ಮತ್ತಿತರರು ಇದ್ದರು. ಜೈ ಭೀಮನಗರ ಜೈಭೀಮ ಭಜನೆ ಮಂಡಳಿಯಿಂದ ಭೀಮ ಗೀತೆಗಳನ್ನು
ಹಾಡಲಾಯಿತು. ಬಾಬು ಆಣದೂರೆ ನಿರೂಪಿಸಿದರು.