Advertisement

ಹಸುರು ಜಿಲ್ಲೆ ಉಡುಪಿಯಲ್ಲಿ ಖಾಸಗಿ ಬಸ್‌ ಸಂಚಾರ ದೂರ

01:46 PM May 10, 2020 | sudhir |

ಉಡುಪಿ: ಲಾಕ್‌ಡೌನ್‌ ಆರಂಭದಿಂದ ರಾಜ್ಯದೆಲ್ಲೆಡೆ ಖಾಸಗಿ ಬಸ್‌ ಸಂಚಾರ ಸ್ಥಗಿತಗೊಂಡ ಪರಿಣಾಮ ಈ ಉದ್ಯಮವನ್ನೇ ನಂಬಿರುವ ಸಾವಿರಾರು ಕುಟುಂಬಗಳ ಬದುಕು ದುಸ್ತರವಾಗಿದೆ. ಸರಕಾರದ ನಿಯಾಮಾವಳಿಗಳಂತೆ ಬಸ್‌ಗಳನ್ನು ಮತ್ತೆ ರಸ್ತೆಗಿಳಿಸಲು ಹಲವು ಸವಾಲುಗಳಿದ್ದು, ಬಸ್‌ ಮಾಲಕರೂ ಸರಕಾರದ ಮುಂದೆ ಕೆಲವು ಬೇಡಿಕೆಗಳನ್ನು ಮಂಡಿಸಿದ್ದಾರೆ.

Advertisement

ರಾಜ್ಯದಲ್ಲಿ 8,000ಕ್ಕೂ ಅಧಿಕ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ 2,500ಕ್ಕೂ ಅಧಿಕ ಬಸ್‌ಗಳಿವೆ.
ಆಸನ ಸಾಮರ್ಥ್ಯಕ್ಕನುಗುಣವಾಗಿ ಮೂರು ತಿಂಗಳಿಗೆ ಒಂದು ಬಸ್‌ಗೆ ಸರಾಸರಿ 50 ಸಾವಿರ ರೂ.ನಂತೆ ಮುಂಗಡವಾಗಿ ತೆರಿಗೆ ಪಾವತಿಸಬೇಕು. ಒಟ್ಟು ಪ್ರತಿ ಮೂರು ತಿಂಗಳಿಗೆ 300 ಕೋಟಿ ರೂ.ಗೂ ಹೆಚ್ಚು ತೆರಿಗೆ ಪಾವತಿಸಲಾಗುತ್ತಿದೆ. ಪ್ರಸ್ತುತ ಶೇ. 70ರಷ್ಟು ಬಸ್ಸುಗಳನ್ನು ರಸ್ತೆ ತೆರಿಗೆ ಪಾವತಿಸಬೇಕಾದ ಹಿನ್ನೆಲೆಯಲ್ಲಿ ಮೂಲ ದಾಖಲೆಗಳೊಂದಿಗೆ ಆರ್‌ಟಿಒ ಕಚೇರಿಗಳಿಗೆ ಈಗಾಗಲೇ ಸರೆಂಡರ್‌ ಮಾಡಲಾಗಿದೆ ಇದರೊಂದಿಗೆ ಸರೆಂಡರ್‌ ಬಗ್ಗೆ ಮಾಹಿತಿ ಇಲ್ಲದ ಹಲವಾರು ಮಾಲಕರು ಈಗ ಸ್ವಲ್ಪ ರಿಯಾಯಿತಿ ಕೊಟ್ಟರೂ ಬಾಕಿ ಹಣವನ್ನು ಪಾವತಿಸಲು ಹರಸಾಹಸ ಪಡಬೇಕಿದೆ.

ಸಿಬಂದಿಗೆ ವೇತನ
ಸಂಚಾರ ಸ್ಥಗಿತಗೊಂಡಿದ್ದರೂ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳಿಗೆ ಈ ಹಿಂದಿನಷ್ಟು ಅಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಿಯಾದರೂ ವೇತನ ಪಾವತಿಸಲಾಗುತ್ತಿದೆ. ಮಾಲಕರು ವೇತನ ನೀಡುತ್ತಿದ್ದಾರೆ.

ತಾಂತ್ರಿಕ ತೊಂದರೆ
ಎರಡು ತಿಂಗಳಿಂದ ಸಂಚಾರ ಸ್ಥಗಿತಗೊಳಿಸಿರುವುದರಿಂದ ಬಸ್‌ಗಳಲ್ಲಿ ತಾಂತ್ರಿಕ ತೊಂದರೆಗಳು ತಲೆದೋರಿವೆ. ಬಸ್‌ಗಳನ್ನು ಮತ್ತೆ ರಸ್ತೆಗಿಳಿಸಲು ತಾಂತ್ರಿಕ ನಿರ್ವಹಣೆಗಾಗಿ ಕನಿಷ್ಠ 30 ಸಾವಿರ ರೂ. ವ್ಯಯಿಸಬೇಕಾದೀತು ಎನ್ನುತ್ತಾರೆ ಬಸ್‌ ಮಾಲಕರು.

ಸಂಚಾರ ಆರಂಭ ಯಾವಾಗ?
ಹಸುರು ವಲಯ ವ್ಯಾಪ್ತಿಯಲ್ಲಿ ಬಸ್‌ ಸಂಚಾರ ಆರಂಭಿಸಬಹುದು ಎಂದು ಸರಕಾರ ತಿಳಿಸಿದೆ. ಆದರೆ ಸರಕಾರದ ಕಾರ್ಯಸೂಚಿಯಂತೆ ಬಸ್‌ ಸಂಚಾರ ಆರಂಭಿಸಲು ಮಾಲಕರು ತಯಾರಿಲ್ಲ. ಶೇ. 50ಕ್ಕಿಂತ ಅಧಿಕ ಪ್ರಯಾಣಿಕ ರನ್ನು ಹಾಕಬಾರದು, ಯಾನದರ ಹೆಚ್ಚಿಸ ಬಾರದು, ಬಸ್‌ಗಳನ್ನು ಸ್ಯಾನಿಟೈಸ್‌ಗೆ ಒಳಪಡಿಸುವುದು, ಮಾಸ್ಕ್ ಒದಗಿಸುವುದು ಸಹಿತ ಹಲವಾರು ಷರತ್ತು ಗಳಿದ್ದು, ಅವುಗಳ ಪಾಲನೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ ಎಂಬುದು ಮಾಲಕರ ಅಭಿಪ್ರಾಯ.

Advertisement

ಮಾಲಕರ ಬೇಡಿಕೆ ಏನು?
ಯಾನ ದರದಲ್ಲಿ ಶೇ. 50ರಷ್ಟು ಹೆಚ್ಚಳ ಮಾಡುವುದು, ವಿಮೆ ಅವಧಿಯನ್ನು 2 ತಿಂಗಳು ವಿಸ್ತರಿಸುವುದು, 3 ತಿಂಗಳ ಕಾಲ ತೆರಿಗೆ-ಟೋಲ್‌ನಲ್ಲಿ ವಿನಾಯಿತಿ ಸಹಿತ ಇನ್ನಿತರ ಬೇಡಿಕೆಗಳನ್ನು ಬಸ್‌ ಮಾಲಕರು ಮಂಡಿಸಿದ್ದಾರೆ. ಆದರೆ ಎಲ್ಲವನ್ನು ಈಡೇರಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಶುಕ್ರವಾರ ಬೆಂಗಳೂರಿನಲ್ಲಿ ಸಾರಿಗೆ ಆಯುಕ್ತರೊಂದಿಗೆ ನಡೆದ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾವಿಸಲಾಗಿತ್ತು. ಮೂರು ತಿಂಗಳಿಗೆ ಅನ್ವಯವಾಗುವಂತಹ ಪರಿಷ್ಕೃತ ದರವನ್ನು ನೀಡುವುದಾಗಿ ಆಯುಕ್ತರು ಸೂಚಿಸಿದ್ದರು ಎನ್ನಲಾಗಿದೆ. ಆದರೆ ಲಾಕ್‌ಡೌನ್‌ ಮುಗಿಯಲು ಕೆಲವೇ ದಿನಗಳು ಬಾಕಿಯಿದ್ದು, ಆ ಬಳಿಕವೇ ಬಸ್‌ ಸಂಚಾರ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ ಬಸ್‌ ಮಾಲಕರು.

ಖಾಸಗಿ ಬಸ್‌ ಕರಾವಳಿಯಲ್ಲೇ ಅಧಿಕ
ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳೇ ಸೇವೆ ನೀಡುತ್ತಿವೆ. ಆದರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಖಾಸಗಿ ಸಾರಿಗೆ ಮುಂಚೂಣಿಯಲ್ಲಿದೆ. ಕೆಎಸ್ಸಾರ್ಟಿಸಿ ಬಸ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಬೇಕೆಂಬ ಆಗ್ರಹ ಈ ಹಿಂದಿನಿಂದಲೂ ಕೇಳಿಬರುತ್ತಿತ್ತಾದರೂ ಖಾಸಗಿ ಬಸ್‌ಗಳನ್ನು ಜನರು ಆಶ್ರಯಿಸಿದ್ದಾರೆ.

ಪೂರ್ಣ ಪ್ರಮಾಣದ ಸೇವೆ ಅಸಾಧ್ಯ
ನಮ್ಮ ಬೇಡಿಕೆಗಳನ್ನು ಸರಕಾರ ಒಪ್ಪಿಕೊಂಡರೂ ಎಲ್ಲ ಬಸ್‌ಗಳನ್ನು ರಸ್ತೆಗಿಳಿಸುವುದು ಅಸಾಧ್ಯ. ಯಾನ ದರದಲ್ಲಿ ಶೇ. 50
ರಷ್ಟು ಹೆಚ್ಚಳ ಮಾಡಿದರೂ ಈ ಹಿಂದಿನ ಸಮಯದಂತೆ ಬಸ್‌ಗಳನ್ನು ಓಡಿಸ ಲಾಗದು. ಶೇ. 50 ಪ್ರಯಾಣಿಕ ರಿಗೆ ಮಾತ್ರ ಅವಕಾಶ ಎಂಬ ಷರತ್ತು ಎಷ್ಟು ದಿನ ಇರುವುದೋ ಅಷ್ಟು ದಿನ ಸುಲಲಿತ ಸಾರಿಗೆ ಕಷ್ಟಸಾಧ್ಯ.
– ಸದಾನಂದ ಛಾತ್ರ, ಖಾಸಗಿ ಬಸ್‌ ಮಾಲಕರು

ಬೇಡಿಕೆ ಈಡೇರಿದರೆ ಮಾತ್ರ ಆರಂಭ
ಸರಕಾರದ ನಿಯಮಗಳಂತೆ ಬಸ್‌ ಸಂಚಾರ ಅಸಾಧ್ಯ. ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಸಂಚಾರ ಆರಂಭಿಸಬಹುದು. ಇಲ್ಲದಿದ್ದರೆ ಲಾಕ್‌ಡೌನ್‌ ಮುಗಿದ ಬಳಿಕವೇ ಬಸ್‌ಗಳು ಓಡಾಡಲಿವೆ.
– ರಾಜವರ್ಮ ಬಲ್ಲಾಳ್‌ ಅಧ್ಯಕ್ಷರು, ಕೆನರಾ ಬಸ್‌ ಮಾಲಕರ ಸಂಘ

ಆರ್ಥಿಕತೆ ಮೇಲೆ ಪರಿಣಾಮ!
ಹಸುರು ವಲಯಗಳಲ್ಲಿ ಅಗತ್ಯ ವಸ್ತು ಖರೀದಿ ಸಹಿತ ಇನ್ನಿತರ ಕೆಲಸಗಳಿಗೆ ವಿನಾಯಿತಿ ಇದ್ದರೂ ಬಸ್‌ ಸಂಚಾರ ಆರಂಭವಾಗದಿರುವುದರಿಂದ ಅಂಗಡಿ ಬಾಗಿಲುಗಳು ತೆರೆದಿದ್ದರೂ ಆರ್ಥಿಕ ಹೊಡೆತ ಬಿದ್ದಿದೆ. ಸಣ್ಣಪುಟ್ಟ ಉದ್ಯಮಗಳು, ಕಾರ್ಖಾನೆಗಳು, ಕೂಲಿ ಕಾರ್ಮಿಕರು, ರೈತರು, ಕಾರ್ಮಿಕರು ಬಸ್‌ಗಳನ್ನು ಆಶ್ರಯಿಸಿರುವುದೇ ಇದಕ್ಕೆ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next