Advertisement

ಕೆಂಪಾಗುವತ್ತ ಹಸುರು ವಲಯ; ಶಾಪವಾಯಿತೇ ಸಡಿಲಿಕೆ ,ಹಾವೇರಿ, ಚಿತ್ರದುರ್ಗಕ್ಕೂ ಕೋವಿಡ್-19

08:29 AM May 10, 2020 | Sriram |

ಬೆಂಗಳೂರು: ಆರ್ಥಿಕ ಎಂಜಿನ್‌ಗೆ ಬಲ ತುಂಬುವ ಭರದಲ್ಲಿ ನೀಡಲಾಗಿರುವ ಲಾಕ್‌ಡೌನ್‌ ಸಡಿಲಿಕೆಯೇ ರಾಜ್ಯದಲ್ಲಿ ಕೋವಿಡ್-19 ವೈರಸ್‌ ಸೋಂಕಿನ ತೀವ್ರತೆಗೆ ಎಡೆಮಾಡಿಕೊಟ್ಟಿತೇ?

Advertisement

ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಸೋಂಕಿನಿಂದ ಮುಕ್ತವಾಗಿ ಹಸುರು ವಲಯದಲ್ಲಿದ್ದ ರಾಜ್ಯದ ಎರಡು ಜಿಲ್ಲೆಗಳಿಗೆ ಕೋವಿಡ್-19 ವೈರಸ್‌ ದಾಳಿ ಮಾಡಿದೆ. “ಕಿತ್ತಳೆ ವಲಯ’ದಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಅಂಶಗಳು ಪರೋಕ್ಷವಾಗಿ ಲಾಕ್‌ಡೌನ್‌ ಸಡಿಲಿಕೆಯೇ ಕಾರಣ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಮಾರ್ಚ್‌ 15ರಿಂದ ಜಾರಿಯಲ್ಲಿದ್ದ ಲಾಕ್‌ಡೌನ್‌ ವಾರದ ಹಿಂದೆ ಸಡಿಲಿಕೆಯಾಯಿತು. ಇದು ಆರ್ಥಿಕ ಚಟುವಟಿಕೆ ಗರಿಗೆದರಲು ಅನಿವಾರ್ಯ ಕೂಡ. ಹಸುರು, ಕಿತ್ತಳೆ ವಲಯದಲ್ಲಿದ್ದ ಜಿಲ್ಲೆಗಳಲ್ಲಿ ಓಡಾಟ, ವ್ಯಾಪಾರ ವಹಿವಾಟುಗಳು ಆರಂಭವಾದವು. ಇವೆಲ್ಲದರ ಪರಿಣಾಮ ಈಗ ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಕೋವಿಡ್-19 ಸೋಂಕು ಪ್ರವೇಶಿಸಿದೆ.

ಲಾಕ್‌ಡೌನ್‌ ಉಲ್ಲಂಘಿಸಿದವರಿಂದ
55 ಮಂದಿಗೆ ಸೋಂಕು
ಕಳೆದ ಒಂದು ವಾರದಲ್ಲಿ ದಾವಣಗೆರೆಯಲ್ಲಿ ಸೋಂಕಿತ ನರ್ಸ್‌ನಿಂದ 31 ಮಂದಿಗೆ ಹಾಗೂ ಮೃತ ವೃದ್ಧನಿಂದ 24 ಮಂದಿಗೆ ಸೋಂಕು ತಗಲಿದೆ. ಆದರೆ ಈ ಇಬ್ಬರಿಗೂ ಸೋಂಕು ತಗಲಿರುವುದು ಲಾಕ್‌ಡೌನ್‌ ಉಲ್ಲಂಘಿಸಿ ಸೋಂಕು ಹೆಚ್ಚಿದ್ದ ಪ್ರದೇಶಕ್ಕೆ ಪ್ರಯಾಣ ಮಾಡಿದ್ದರಿಂದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸೋಂಕಿತ ನರ್ಸ್‌ ಮಾರ್ಚ್‌ 29ರಂದು ಬಾಗಲಕೋಟೆಯಲ್ಲಿ ಮದುವೆಯಲ್ಲಿ ಭಾಗವಹಿಸಿದ್ದರು. ಮೃತ ವೃದ್ಧರ ಕುಟುಂಬಸ್ಥರೊಬ್ಬರು ಎಪ್ರಿಲ್‌ನಲ್ಲಿ ಗುಜರಾತ್‌ನಿಂದ ಬಂದಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

Advertisement

ಹೊರಗಿನಿಂದ ಬಂದ ಪ್ರಕರಣಗಳು
1.ರಾಜ್ಯದ ಗಡಿಯಲ್ಲಿ ಸರಕಾರವು ನೀಡಿದ ಸಂಚಾರ ವಿನಾಯಿತಿಯಿಂದ 10 ಕೋವಿಡ್-19 ಪ್ರಕರಣಗಳು ದೃಢ ಪಟ್ಟಿವೆ. ಮೇ 4ರಂದು ಹಾವೇರಿಯಲ್ಲಿ ಮೊದಲ ಸೋಂಕು ಪತ್ತೆಯಾಗಿದ್ದು, ಸೋಂಕಿತ ವ್ಯಕ್ತಿಯು ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಮುಂಬಯಿಯಿಂದ ಬಂದಿದ್ದು, ಆತನಿಂದ ಜಿಲ್ಲೆಯ ಮತ್ತೂಬ್ಬ ವ್ಯಕ್ತಿಗೂ ಸೋಂಕು ತಗಲಿದೆ.
2.ಗುಜರಾತ್‌ನ ಅಹ್ಮದಾಬಾದ್‌ನಿಂದ ಚಿತ್ರದುರ್ಗಕ್ಕೆ ಮೇ 5ರಂದು ಆಗಮಿಸಿದ್ದ 15 ತಬ್ಲಿ ಜಮಾತ್‌ನ ಸದಸ್ಯರ ಪೈಕಿ ಮೂವರಲ್ಲಿ ಶುಕ್ರವಾರ ಸೋಂಕು ಪತ್ತೆಯಾಗಿದೆ.
3.ಮೇ 4ರಂದು ಮುಂಬಯಿಯಿಂದ ಮಂಡ್ಯಕ್ಕೆ ಮೃತ ದೇಹವನ್ನು ತಂದಿದ್ದವರ ಪೈಕಿ ಇಬ್ಬರು ಮಹಿಳೆಯರಲ್ಲಿ ಹಾಗೂ ಕಲಬುರಗಿಯಲ್ಲಿ ಹೈದರಾಬಾದ್‌ ಪ್ರಯಾಣ ಹಿನ್ನೆಲೆ ಹೊಂದಿದ್ದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
4.ಮೇ 5ರಂದು ಬಳ್ಳಾರಿಯಲ್ಲಿ ಉತ್ತರಾಖಂಡದಿಂದ ಬಂದ ವ್ಯಕ್ತಿಯಲ್ಲಿ, ಧಾರವಾಡದಲ್ಲಿ ಮುಂಬಯಿಯಿಂದ ಬಂದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಕಾಲುಭಾಗದಷ್ಟು ಸೋಂಕು!
ರಾಜ್ಯದಲ್ಲಿ ಸದ್ಯ 762 ಕೋವಿಡ್-19 ಸೋಂಕು ಪ್ರಕರಣಗಳಿವೆ. ಈ ಪೈಕಿ ಲಾಕ್‌ಡೌನ್‌ ಜಾರಿಯಲ್ಲಿದ್ದ ಒಂದೂವರೆ ತಿಂಗಳು ಅವಧಿಯಲ್ಲಿ 559 ಪ್ರಕರಣಗಳು ದೃಢಪಟ್ಟಿದ್ದವು. ಆದರೆ ಮೇ ತಿಂಗಳಿಂದೀಚೆಗೆ ಒಟ್ಟು 188 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಕಾಲುಭಾಗದಷ್ಟು ಸಡಿಲಿಕೆ ಅವಧಿಯಲ್ಲಿ ಕಾಣಿಸಿಕೊಂಡಿವೆ.

ರಾಜ್ಯಕ್ಕೆ ಸೋಂಕು ಪ್ರವೇಶಿಸಿ ಇಂದಿಗೆ ಎರಡು ತಿಂಗಳು
ಕೋವಿಡ್-19 ವೈರಸ್‌ ಸೋಂಕು ರಾಜ್ಯಕ್ಕೆ ಪ್ರವೇಶಿಸಿ ಇಂದಿಗೆ ಎರಡು ತಿಂಗಳು ಕಳೆದಿದ್ದು, ಒಟ್ಟು 762 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 376 ಮಂದಿ ಗುಣಮುಖರಾಗಿದ್ದು, 30 ಮಂದಿ ಸಾವಿಗೀಡಾಗಿದ್ದಾರೆ. ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಕಿ 346 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 13ನೇ ಸ್ಥಾನದಲ್ಲಿದೆ.

ಕೆಂಪಿಗಿಂತ ಹಸುರು, ಕಿತ್ತಳೆ ವಲಯದಲ್ಲೇ ಸೋಂಕು ಹೆಚ್ಚು !
ಕೇಂದ್ರ ಹಾಗೂ ರಾಜ್ಯ ಸರಕಾರವು ಕಿತ್ತಳೆ ಹಾಗೂ ಹಸುರು ವಲಯ ಎಂದು ವರ್ಗೀಕರಿಸಿ ಸಡಿಲಿಕೆ ನೀಡಿದ ಜಿಲ್ಲೆಗಳಲ್ಲಿಯೇ ಹೆಚ್ಚು ಸೋಂಕು ಪ್ರಕರಣಗಳು ಹಾಗೂ ಸಾವು ವರದಿಯಾಗಿವೆ. ಮೇ 1ರಿಂದೀಚೆಗೆ ಕಿತ್ತಳೆ ವಲಯವಾಗಿರುವ ದಾವಣಗೆರೆಯಲ್ಲಿ 57, ಬಾಗಲಕೋಟೆಯಲ್ಲಿ 22, ಬೆಳಗಾವಿಯಲ್ಲಿ 16, ಉತ್ತರ ಕನ್ನಡದಲ್ಲಿ 13, ಮಂಡ್ಯದಲ್ಲಿ 10, ಕಲಬುರಗಿಯಲ್ಲಿ 14, ದಕ್ಷಿಣ ಕನ್ನಡದಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ. ಹಸುರು ವಲಯಗಳಾದ ಹಾವೇರಿಯಲ್ಲಿ ಎರಡು, ಚಿತ್ರದುರ್ಗದಲ್ಲಿ ಮೂರು ಪ್ರಕರಣಗಳು ದೃಢಪಟ್ಟಿವೆ. ಆದರೆ ಬೆಂಗಳೂರು ಗ್ರಾಮಾಂತರ, ಮೈಸೂರಿನಲ್ಲಿ ಯಾವುದೇ ಒಂದು ಪ್ರಕರಣವೂ ವರದಿಯಾಗಿಲ್ಲ.

ಕೋವಿಡ್-19 ಮರು ದಾಳಿ!
ಚಿತ್ರದುರ್ಗ: ಹಸುರು ವಲಯದಲ್ಲಿದ್ದ ಚಿತ್ರದುರ್ಗ ಜಿಲ್ಲೆಗೆ ಕೋವಿಡ್-19 ಮಹಾಮಾರಿ ಕಾಲಿಟ್ಟಿದೆ. ಕಳೆದ ತಿಂಗಳು ಗುಜರಾತ್‌ನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದ ಮೂವರಿಗೆ ಮತ್ತೆ ಸೋಂಕು ತಗಲಿದೆ.

ಗುಜರಾತ್‌ನ ಅಹ್ಮದಾಬಾದ್‌ನಿಂದ ಮೇ 5ರಂದು ನಗರಕ್ಕೆ ಆಗಮಿಸಿದ್ದ 15 ಮಂದಿ ತಬ್ಲಿಘಿ ಸದಸ್ಯರಲ್ಲಿ ಮೂವರಿಗೆ ಕೋವಿಡ್‌-19 ಪಾಸಿಟಿವ್‌ ಬಂದಿದೆ. ಎಪ್ರಿಲ್‌ ನಲ್ಲಿ ಈ ಮೂವರು ಸೋಂಕು ದೃಢಪಟ್ಟು ಗುಜರಾತಿನಲ್ಲಿ 14 ದಿನ ಚಿಕಿತ್ಸೆ ಪಡೆದಿದ್ದು, ಬಳಿಕ ವರದಿ ನೆಗೆಟಿವ್‌ ಬಂದಿತ್ತು. ಈಗ ಮತ್ತೂಮ್ಮೆ ಸೋಂಕು ತಗಲಿದೆ.

ಕರಾಳ ಶುಕ್ರವಾರ
ರಾಜ್ಯದಲ್ಲಿ ಶುಕ್ರವಾರ ಹೊಸದಾಗಿ 51 ಕೋವಿಡ್-19 ವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿಗೊಳಗಾದವ ಸಂಖ್ಯೆ 762ಕ್ಕೆ ಏರಿಕೆಯಾಗಿದೆ. ಶುಕ್ರವಾರ ದಾವಣಗೆರೆಯ 14 ಮಂದಿಗೆ, ಉತ್ತರ ಕನ್ನಡದ ಭಟ್ಕಳದಲ್ಲಿ 12 ಮಂದಿಗೆ, ಬೆಳಗಾವಿಯ 11 ಮಂದಿಗೆ ಸೋಂಕು ತಗಲಿದೆ. ಇದುವರೆಗೆ ಹಸುರಾಗಿದ್ದ ಚಿತ್ರದುರ್ಗದಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಭಟ್ಕಳದಲ್ಲಿ ಯುವತಿಯೊಬ್ಬಳಿಂದ ಬರೋಬ್ಬರಿ 18 ಮಂದಿಗೆ ಸೋಂಕು ತಗಲಿದೆ.

ಮುಂದಿನ ಮೂರು ತಿಂಗಳು ಸೋಂಕು ಪ್ರಕರಣಗಳು ಮುಂದುವರಿಯುವ ಸಾಧ್ಯತೆಗಳಿವೆ. ಸೋಂಕು ಹೆಚ್ಚಿದ್ದ ಪ್ರದೇಶಗಳಿಂದ ಬಂದವರು ಕಡ್ಡಾಯ ವಾಗಿ ಕ್ವಾರಂಟೈನ್‌ ಆಗಬೇಕು. ಸದ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ಥಿತಿ ಸುಧಾರಿಸಿ ಕೊಳ್ಳುವಂತಿದೆ. ರಾಜ್ಯವು ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳುತ್ತಿದೆ.
– ಡಾ| ದೇವಿಪ್ರಸಾದ್‌ ಶೆಟ್ಟಿ
ಚೇರ್ಮನ್‌, ನಾರಾಯಣ ಹೃದಯಾಲಯ

Advertisement

Udayavani is now on Telegram. Click here to join our channel and stay updated with the latest news.

Next