Advertisement

ಗ್ರೀನ್‌ ಸಿಗ್ನಲ್‌

12:30 AM Mar 14, 2019 | |

ರಸ್ತೆಗಳ ಮೇಲೆ ಟ್ರಾಫಿಕ್‌ನಲ್ಲಿ  ಹಸಿರನ್ನು ಸೃಷ್ಟಿಸುವಂಥ ಸ್ಪರ್ಧೆ ಜಪಾನ್‌ನಲ್ಲಿ ನಡೆಯುತ್ತದೆ. ಇದು ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿನ ಹಸಿರು ಸಂಕೇತವಲ್ಲ. ಲಾರಿಗಳ ಮೇಲಿನ ಹೂದೋಟದ ಹಸಿರು!

Advertisement

ಸಸ್ಯಗಳ ಅಭಿವೃದ್ಧಿಯ ಕ್ಷೇತ್ರದಲ್ಲಿ ಜಪಾನ್‌ ದೇಶ ಸಾಕಷ್ಟು ಕೆಲಸ ಮಾಡಿದೆ. ಕುಬj ತಳಿಯ ಮರಗಳ ಸೃಷ್ಟಿ ಅಲ್ಲಿಂದಲೇ ಇತರ ದೇಶಗಳಿಗೆ ಪರಿಚಯವಾಯಿತು. ಇಂತಹ ಹಸಿರು ಸಾಧನೆಯ ಹೊಸ ರೂಪವೇ ಮಿನಿ ಲಾರಿ ಮೇಲಿನ ಹಸಿರು ಉದ್ಯಾನವನ. ಟ್ರಕ್‌ ನಡೆಸುವ ಚಾಲಕರಿಗೆ ವರ್ಷಕ್ಕೊಂದು ಸಲ ಇಂಥ ಅದ್ಧೂರಿ ಸ್ಪರ್ಧೆ ನಡೆಯುತ್ತದೆ. ಈ ಮಿನಿ ಲಾರಿಗಳು ಆ ದೇಶದಲ್ಲಿ ಸಾಕಷ್ಟಿವೆ, ಅವನ್ನು ಕೇಯಿ ಟ್ರಕ್‌ ಎಂದು ಕರೆಯಲಾಗುತ್ತದೆ. ತೋಟಗಾರಿಕೆ ಮತ್ತು ಮೀನುಗಾರಿಕೆ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲವಾಗಿರುವ ಕೇಯೀ ಟ್ರಕ್ಕುಗಳ ಒಳಗೆ ಹೇಗೆ ಉದ್ಯಾನವನ್ನು ಸೃಷ್ಟಿಸಬಹುದು ಎಂಬ ಕುತೂಹಲಕ್ಕೆ ಉತ್ತರವಾಗಿ ಒಂದು ಅದ್ಭುತ ಮಾಯಾಲೋಕವೇ ಸೃಷ್ಟಿಯಾಗುತ್ತಿದೆ.

ಕೃತಕತೆ ಇಲ್ಲ
ಒಂದು ಮಿನಿ ಲಾರಿಯನ್ನು ಅಂದ ಚಂದದ ಹೂತೋಟವಾಗಿ ಪರಿವರ್ತಿಸುವುದು ಅರೆಕ್ಷಣದ ಪವಾಡವಲ್ಲ. ಪರಿಶ್ರಮ ಮತ್ತು ತಾಳ್ಮೆ ಬೇಕು. ಹಿನ್ನೆಲೆಯಲ್ಲಿ ಬೆಟ್ಟ ಗುಡ್ಡಗಳು, ಹಸಿರು ಹುಲ್ಲುಗಾವಲು, ವೈವಿಧ್ಯಮಯ ಹೂಗಳು ಅರಳಿ, ತಲೆದೂಗುತ್ತಿರುವ ಗಿಡಗಳು ಅಲ್ಲಿರಬೇಕು. ಕೃತಕ ವಸ್ತುಗಳ ಬಳಕೆಗೆ ಆದ್ಯತೆಯಿಲ್ಲ. ಬೇಕಿದ್ದರೆ ನೀರು ಧುಮ್ಮಿಕ್ಕುವ ಜಲಪಾತವನ್ನೂ ಪೈಪುಗಳ ಬಳಕೆಯಿಂದ ಸೃಜಿಸಬಹುದು. ಬಿದಿರನ್ನು ಧಾರಾಳವಾಗಿ ಉಪಯೋಗಿಸಬಹುದು. ಯೋಜನೆ, ಅಭಿವ್ಯಕ್ತಿ, ವಿನ್ಯಾಸಗಳೇ ಅಂತಿಮವಾಗಿ ಅಭ್ಯರ್ಥಿಯ ಗೆಲುವನ್ನು ನಿರ್ಣಯಿಸುತ್ತದೆ.

ಹಸಿರು ಸ್ಫೂರ್ತಿ
ಇದರಿಂದ ಏನು ಲಾಭ ಎಂದು ಕೇಳಿದರೆ ನೂರಾರು ಜನ ಬಂದು ನೋಡುತ್ತಾರೆ. ತಮ್ಮ ಮನೆಯ ಅಂಗಳದಲ್ಲೋ, ತಾರಸಿಯಲ್ಲೋ ಒಂದು ಉದ್ಯಾನ ಮಾಡಲು ಪ್ರೇರಣೆಯಾಗುತ್ತದೆ. ಇದರಿಂದ ದೇಶದ ಯಾವ ಮೂಲೆಗೆ ಹೋದರೂ ನಿಸರ್ಗದ ಚೆಲುವು ಪರಿಶೋಭಿಸುತ್ತದೆ. ಹೊಗೆಯುಗುಳುವ ವಾಹನಗಳಿಂದ ಪರಿಸರಕ್ಕೆ ಹಾನಿ ಮಾಡುವ ವಾಹನಗಳ ಒಡೆಯರು ಹಸಿರು ಬೆಳೆಸಿದರೆ ವಾತಾವರಣಕ್ಕೂ ಉಪಕಾರವಿದೆ ಎನ್ನುತ್ತಾರೆ ಸ್ಪರ್ಧೆಯ ಆಯೋಜಕರು. ಸ್ಪರ್ಧೆ ನಡೆಯುವ ದಿನ ಸಾವಿರಾರು ಲಾರಿಗಳು ನಡೆಸುವ ಪ್ರದರ್ಶನ ಕಣ್ಣುಗಳಿಗಂತೂ ಹಬ್ಬ.

ಲಾರಿಯೇ ಬಹುಮಾನ
ಜಪಾನಿನ ಫೆಡರೇಷನ್‌ ಆಫ್ ಲ್ಯಾಂಡ್‌ಸ್ಕೇಪ್‌ ಸಂಸ್ಥೆ ಇಂತಹ ಸ್ಪರ್ಧೆಯನ್ನು ಆಯೋಜಿಸುತ್ತದೆ. ಸಸ್ಯ ವಿನ್ಯಾಸದಲ್ಲಿ ಪರಿಣತರಾದ ಮೂವರು ಖ್ಯಾತನಾಮರು ಮನ ಸೆಳೆಯುವ ವಿನ್ಯಾಸವನ್ನು ರೂಪಿಸಿದ ಟ್ರಕ್‌ ಚಾಲಕರನ್ನು ಗುರುತಿಸಿ ತೀರ್ಪು ನೀಡುತ್ತಾರೆ. ಬಹುಮಾನವಾಗಿ ಒಂದು ಹೊಸ ಟ್ರಕ್‌ ಹಾಗೂ ನಗದು ಹಣವೂ ಇರುತ್ತದೆ. ಹಲವರಿಗೆ ಪ್ರೋತ್ಸಾಹಕ ಬಹುಮಾನಗಳೂ ಸಿಗುತ್ತವೆ.

Advertisement

– ಪ.ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next