ಬಾಳೆಪುಣಿ: ಅಮಾನವೀಯತೆ ಯನ್ನು ಅಳಿಸಿ ಮಾನವೀಯತೆಯನ್ನು ಬೆಳೆಸಲು, ಅಂಬೇಡ್ಕರ್ ಅವರ ಆಶಯದಂತೆ ಬದುಕಲು ಮಾನವ ಗ್ರಂಥಾಲಯ ಪ್ರೇರಣಾ ಕೇಂದ್ರವಾಗಲಿ ಎಂದು ಉದ್ಯಮಿ ರಮೇಶ್ ಶೇಣವ ಅಭಿಪ್ರಾಯಪಟ್ಟರು.
ಸಮಾಜ ಸೇವಾ ಸಂಸ್ಥೆ ಜನ ಶಿಕ್ಷಣ ಟ್ರಸ್ಟ್‌ನಲ್ಲಿ ಮಹಾ ಮಾನವತಾವಾದಿ ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ‘ಮಾನವ ಗ್ರಂಥಾಲಯ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾದರಿ ಗ್ರಾಮ ಅಭಿಯಾನದಡಿ ಜನ ಶಿಕ್ಷಣ ಟ್ರಸ್ಟ್, ಸ್ಟೈಲ್ ಟ್ರಸ್ಟ್, ಅಪ್ನಾದೇಶ್ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಮಾತನಾಡಿ, ಮನುಷ್ಯರನ್ನು ಪುಸ್ತಕಗಳಂತೆ ಓದುವ ಅವಕಾಶ ಕಲ್ಪಿಸುವ ಹ್ಯೂಮನ್ ಲೈಬ್ರರಿ ಅಭಿಯಾನ 2 ದಶಕಗಳ ಹಿಂದೆ ಡೆನ್‌ಮಾರ್ಕ್‌ನಲ್ಲಿ ಆರಂಭವಾಗಿ ಭಾರತವೂ ಸೇರಿದಂತೆ 80ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿದ್ದು ಭಿನ್ನ ಭಿನ್ನ ವ್ಯಕ್ತಿಗಳೊಂದಿಗೆ ಸಂಪರ್ಕ, ಸಂಬಂಧ, ಸಂವಾದಕ್ಕೆ ಅವಕಾಶ ಕಲ್ಪಿಸುವ ಹ್ಯೂಮನ್ ಲೈಬ್ರರಿಗಳು ಅಜ್ಞಾನ, ಪೂರ್ವಾಗ್ರಹಗಳನ್ನು ಅಳಿಸಿ ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗಲಿದೆ ಎಂದರು.
ಪಂಚಾಯತ್ ಸದಸ್ಯೆ ಸೆಮೀಮಾ, ಜೋಹಾರ, ಲೆಕ್ಕ ಪರಿಶೋಧಕ ಪುಂಡರೀಕಾಕ್ಷ, ತಾ.ಪಂ. ಮಾಜಿ ಸದಸ್ಯ ಹೈದರ್, ಪ್ರಜ್ಞಾ ತರಬೇತಿ ಕೇಂದ್ರದ ಶರತ್, ಪೊಲೀಸ್ ಸಹಾಯಕ ಉಪನಿರೀಕ್ಷಕ ಮೋಹನ್, ಆದಿವಾಸಿ ಕೊರಗ ಸಂಘಟನೆಯ ಲೀಲಾ, ಜಯಂತಿ, ಬಾಬು, ಮಂದಾರ ಸಂಜೀವಿನಿ ಒಕ್ಕೂಟದ ಜಯ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ಎಸ್.ಡಿ.ಎಂ.ಸಿ.ಯ ಅಬೂಬಕ್ಕರ್ ಕುಂಞ ಬಾವು, ಬಾಪು ಸಂಘದ ವಿದ್ಯಾ, ಸ್ಮೈಲ್ ಸ್ಕಿಲ್ ಸ್ಕೂಲಿನ ಕಾವೇರಿ, ಜನ ಶಿಕ್ಷಣ ಟ್ರಸ್ಟ್‌ನ ಚೇತನ್, ಪ್ರಜ್ಞಾ ಅನುಭವಗಳನ್ನು ಹಂಚಿಕೊಂಡರು.
ಇದೇ ಸಂದರ್ಭ ರಾಜ್ಯ ಮಟ್ಟದ ಪ್ರತಿಷ್ಟಿತ ಡಾ| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ನಿರ್ದೇಶಕ ಕೃಷ್ಣ ಮೂಲ್ಯ ನಿರ್ವಹಿಸಿದರು.