ಕಾರವಾರ: ಜಿಲ್ಲೆಯ ಪ್ರವಾಸಿ ಸ್ಥಳಗಳು ಮತ್ತೆ ತೆರೆದುಕೊಳ್ಳುತ್ತಿದ್ದು, ಕಾರವಾರ ಕಡಲತೀರ ಸೇರಿದಂತೆ ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆ ಆರಂಭಿಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಕಂದಾಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ತುಷಾರ್ ಗಿರಿನಾಥ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ಕಾರವಾರ ಉಪ ವಿಭಾಗದ ಸಹಾಯಕ ಕಮಿಷನರ್ ವಿದ್ಯಾ ಚಂದರಗಿ ಸರ್ಕಾರದ ಆದೇಶವನ್ನು ಅನುಷ್ಟಾನ ಗೊಳಿಸಲಾಗುವುದು ಎಂದಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣದ ನಿಯಂತ್ರಣಕ್ಕೆ ಬೇರೆ ರಾಜ್ಯ, ಜಿಲ್ಲೆಯಿಂದ ಉತ್ತರ ಕನ್ನಡಕ್ಕೆ ಬರುವ ಪ್ರವಾಸಿಗರ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿತ್ತು. ಸದ್ಯ ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವಿಟಿ ದರ 1 ಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಹಲವು ಸಾರ್ವಜನಿಕ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ತೆರವು ಮಾಡಲಾಗಿದ್ದು, ಜಲಸಾಹಸ ಕ್ರೀಡೆ ಆರಂಭಿಸಲು ಅನುಮತಿ ನೀಡಲಾಗಿದೆ. ಬೇರೆ ರಾಜ್ಯ, ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರು ಆಗಮಿಸಿದರೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದ್ದುದರಿಂದ, ಲಾಕ್ ಡೌನ್ ಅವಧಿಯ ಬಳಿಕವೂ ಜಿಲ್ಲೆಯ ಪ್ರವಾಸಿ ತಾಣಗಳು ಬರಿದಾಗಿದ್ದವು. ಅಂತೆಯೇ ಜಲಸಾಹಸ ಕ್ರೀಡೆಯನ್ನು ಸಹ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ಪಕ್ಕದ ಮಹಾರಾಷ್ಟ್ರ ಹಾಗೂ ಇನ್ನಿತರ ಪ್ರದೇಶದಿಂದ ಇಲ್ಲಿ ಜಲ ಸಾಹಸ ಕ್ರೀಡೆಯ ಮೂಜು ಪಡೆಯಲು ಪ್ರವಾಸಿಗರು ಆಗಮಿಸುತ್ತಾರೆ.
ಕಾರವಾರ, ಭಟ್ಕಳದ ಮುರುಡೇಶ್ವದ ಕಡಲ ತೀರದಲ್ಲಿ ವಾಟರ್ ಬೋಟ್ ರೈಡಿಂಗ್ ಸೇರಿದಂತೆ ವಿವಿಧ ಜಲಕ್ರೀಡೆಗಳು ಜನರ ಗಮನ ಸೆಳೆದಿದ್ದವು. ಭಟ್ಕಳದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ದೇಶದೆಲ್ಲೆಡೆ ಪ್ರಖ್ಯಾತಿ ಪಡೆದಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಈ ಎಲ್ಲ ಜಲಸಾಹಸ ಕ್ರೀಡೆಗಳು ಮಂಕಾಗಿದ್ದವು.
ಇದನ್ನೂ ಓದಿ :ಪ್ರವಾಹದ ನಡುವೆಯೂ ಡೋಣಿ ನದಿ ದಾಟಲು ಹೋದ ವ್ಯಕ್ತಿ ನೀರು ಪಾಲು : ಶೋಧ ಕಾರ್ಯ
ಜಿಲ್ಲೆಯ ಪ್ರವಾಸಿ ಸ್ಥಳಗಳಾದ ವಿವಿಧ ಪ್ರವಾಸಿ ತಾಣಗಳಲ್ಲಿ ಕಳೆದೊಂದು ವರ್ಷದಿಂದ ಪ್ರವಾಸಿಗರಿಲ್ಲದಂತಾಗಿದೆ. ಅಲ್ಲದೆ ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುವವರು, ಪ್ರವಾಸಿ ಸ್ಥಳವನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿರುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸದ್ಯ ಜಿಲ್ಲೆಗೆ ಪ್ರವಾಸಿಗರ ಆಗಮನ ಆರಂಭಗೊಂಡಿದ್ದರಿಂದ ಕಡಲತೀರ ಹಾಗೂ ಧಾರ್ಮಿಕ ಸ್ಥಳ ಕೊಂಚ ಚೇತರಿಸಿಕೊಳ್ಳುತ್ತಿವೆ. ಈಗ ಜಲಸಾಹಸ ಕ್ರೀಡೆಯೂ ಆರಂಭಗೊಂಡಿದ್ದರಿಂದ ಪ್ರವಾಸಿ ಸ್ಥಳಕ್ಕೆ ಮತ್ತಷ್ಟು ಚೈತನ್ಯ ಬರುವ ನಿರೀಕ್ಷೆ ಹುಟ್ಟಿದೆ.
ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳ ಹಾಗೂ ದಾಂಡೇಲಿಯಲ್ಲಿ ಎಲ್ಲ ರೀತಿಯ ಜಲ ಸಾಹಸ ಕ್ರೀಡೆಗಳನ್ನು ಆರಂಭಿಸಲು ಸರಕಾರ ಆದೇಶ ನೀಡಿದೆ. ಕೊವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದ್ದಾರೆ.