Advertisement

ಗ್ರಾಹಕರ ವೇದಿಕೆ ಕಾರ್ಯಾರಂಭಕ್ಕೆ ಗ್ರೀನ್‌ ಸಿಗ್ನಲ್‌

09:46 PM Jul 22, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯ ಗ್ರಾಹಕರಿಗೆ ಶುಭ ಸುದ್ದಿ. ನೀವು ಯಾವುದೇ ವಸ್ತು ಖರೀದಿ ಮಾಡಿ ಅದರ ತೂಕ, ವ್ಯಾಲಿಡಿಟಿ ವಿಚಾರದಲ್ಲಿ ಮಾರಾಟ ಸಂಸ್ಥೆ ನಿಮ್ಮನ್ನು ಮೋಸ ಮಾಡಿದರೆ ಅಥವಾ ಗುಣಮಟ್ಟದ ವಿಚಾರದಲ್ಲಿ ಸಂಕಷ್ಟಕ್ಕೆ ತಳ್ಳಿದರೆ ಇನ್ಮುಂದೆ ನೀವು ಗ್ರಾಹಕರ ವೇದಿಕೆಯ ಕದ ತಟ್ಟಿ ನ್ಯಾಯ ಪಡೆಯಬಹುದು.

Advertisement

ಹೌದು, ಗ್ರಾಹಕರ ಪಾಲಿಗೆ ವರದಾನವೆಂದೇ ಕರೆಯುವ‌ ವೇದಿಕೆ ಜಿಲ್ಲೆಯಲ್ಲಿ ಕಾರ್ಯಾರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 11 ವರ್ಷಗಳ ಬಳಿಕ ರಾಜ್ಯದ ಮೈತ್ರಿ ಸರ್ಕಾರ ಜಿಲ್ಲೆಯಲ್ಲಿ ಗ್ರಾಹಕರ ಹಿತ ಕಾಯುವ ನಿಟ್ಟಿನಲ್ಲಿ ಗ್ರಾಹಕರ ವೇದಿಕೆ ಸ್ಥಾಪಿಸುವ ಕಾರ್ಯಕ್ಕೆ ಮುಂದಾಗಿದ್ದು, ಇದೇ ತಿಂಗಳ 27 ಕ್ಕೆ ಉದ್ಘಾಟನೆಗೊಳ್ಳಲಿದೆ.

ಸಮಾಜದಲ್ಲಿ ಶ್ರೀ ಸಾಮಾನ್ಯನಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಸೇರಿ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿದ್ದಾರೆ. ನಿತ್ಯ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪ್ರತಿಯೊಬ್ಬರು ನಿತ್ಯ ಖರೀದಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರು ಕೆಲವೊಮ್ಮೆ ಮಾರಾಟ ಸಂಸ್ಥೆಗಳಿಂದ ಮೋಸ ಹೋಗಿ ಅಪಾರ ನಷ್ಟಕ್ಕೆ ಒಳಗಾಗುತ್ತಾರೆ.

ಕೆಲವೊಮ್ಮೆ ಜೀವ ರಕ್ಷಕ ವಸ್ತುಗಳನ್ನು ಖರೀದಿ ಮಾಡುವ ವೇಳೆ ಅದರ ಗುಣಮಟ್ಟ, ತೂಕದಲ್ಲಿ ವಂಚನೆಯಾಗಿ ಗ್ರಾಹಕರು ಪ್ರಾಣ ಕಳೆದುಕೊಳ್ಳುವ ಸನ್ನಿವೇಶಗಳು ಹೆಚ್ಚಾಗಿರುತ್ತದೆ. ಇದಕ್ಕೆ ಸಂತ್ರಸ್ತ ಗ್ರಾಹಕರು ತಮಗೆ ಆದ ಅನ್ಯಾಯವನ್ನು ಪ್ರಶ್ನಿಸಿ ಗ್ರಾಹಕರ ವೇದಿಕೆ ಮೂಲಕ ನ್ಯಾಯ ಅಥವಾ ಅದಕ್ಕೆ ಸೂಕ್ತ ಪರಿಹಾರ ಪಡೆಯುವುದೇ ಗ್ರಾಹಕರ ವೇದಿಕೆ ಮುಖ್ಯ ಉದ್ದೇಶ.

ನ್ಯಾಯ, ಪರಿಹಾರ: ಖರೀದಿ ವಸ್ತುಗಳ ಮೌಲ್ಯ ಅಲ್ಪ ಪ್ರಮಾಣದ್ದಾದರೂ ಅದರಿಂದ ಸಂಭವಿಸುವ ನಷ್ಟ ದೊಡ್ಡ ಪ್ರಮಾಣದಲ್ಲಿರುತ್ತದೆ. ಇದಕ್ಕಾಗಿ ಕೆಲವು ಗ್ರಾಹಕರ ವೇದಿಕೆ ಮೊರೆ ಹೋಗಿ 1,000, 2,000 ರೂ. ಬೆಲೆಯ ವಸ್ತುಗಳಿಗೆ ಲಕ್ಷಾಂತರ ರೂ. ಪರಿಹಾರ ಪಡೆದಿರುವ ಉದಾಹರಣೆಗಳು ಕಣ್ಮುಂದಿವೆ. ಹೀಗಾಗಿ ಜಿಲ್ಲೆಯ ಗ್ರಾಹಕರಿಗೆ ಆಗುವ ನಷ್ಟಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಗ್ರಾಹಕರ ವೇದಿಕೆ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದು, ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿ ಜಿಲ್ಲೆಯಾದ 11 ವರ್ಷಗಳ ಬಳಿಕ ಗ್ರಾಹಕರ ವೇದಿಕೆ ಅಸ್ತಿತ್ವಕ್ಕೆ ಬರುತ್ತಿರುವುದು ಜಿಲ್ಲೆಯ ಗ್ರಾಹಕರ ಪಾಳೆಯದಲ್ಲಿ ಸಂತಸ ಮನೆ ಮಾಡಿದೆ.

Advertisement

ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌: ಜಿಲ್ಲೆಯಲ್ಲಿ ಮಹತ್ವಕಾಂಕ್ಷಿ ಗ್ರಾಹಕದ ವೇದಿಕೆಯನ್ನು ಆರಂಭಿಸಲು ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ, ಕಳೆದ ಮೇ ತಿಂಗಳ 22 ರಂದೇ ಗ್ರೀನ್‌ ಸಿಗ್ನಿಲ್‌ ಕೊಟ್ಟಿದೆ. ವಿಶೇಷ ಅಂದರೆ ಚಿಕ್ಕಬಳ್ಳಾಪುರದೊಂದಿಗೆ ಜಿಲ್ಲೆಯಾದ ರಾಮನಗರದಲ್ಲೂ ಕೂಡ ಗ್ರಾಹಕರ ವೇದಿಕೆ ಆರಂಭಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಇದಕ್ಕೂ ಮೊದಲು ಜಿಲ್ಲೆಯ ಗ್ರಾಹಕರು ಏನೇ ನಷ್ಟ ಅನುಭವಿಸಿದರೂ ಕೋಲಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಹಕರ ವೇದಿಕೆಯ ಮೊರೆ ಹೋಗಬೇಕಿತ್ತು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಕೋಲಾರ ದೂರವಾಗಿದ್ದರಿಂದ ಬಹಳಷ್ಟು ಮಂದಿ ಗ್ರಾಹಕರು ತಮಗೆ ನಷ್ಟವಾದರೂ ಗ್ರಾಹಕರ ಮೊರೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದೀಗ ಜಿಲ್ಲೆಯ ವೇದಿಕೆಗೆ ಮೊರೆ ಹೋಗಬಹುದು.

ಚದಲುಪುರದಲ್ಲಿ ಕಚೇರಿ: ಜಿಲ್ಲೆಗೆ ಗ್ರಾಹಕರ ವೇದಿಕೆ ಮಂಜೂರಾಗಿ ಎರಡು ತಿಂಗಳಾದರೂ ಕಟ್ಟಡ ಸಮಸ್ಯೆ, ಸಂಪನ್ಮೂಲ ಕೊರತೆಯಿಂದ ವೇದಿಕೆಯ ಕಚೇರಿ ಕಾರ್ಯಾರಂಭಕ್ಕೆ ತುಸು ಹಿನ್ನಡೆ ಆಗಿತ್ತು. ಆದರೆ ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿಯಿಂದ ಗ್ರಾಹಕರ ವೇದಿಕೆಯನ್ನು ಶೀಘ್ರವೇ ಕಾರ್ಯಾರೂಪಕ್ಕೆ ತರಲು ಮುಂದಾಗಿದ್ದಾರೆ.

ಈ ಮೊದಲು ಜಿಲ್ಲಾಡಳಿತ ಭವನದಲ್ಲಿಯೇ ಕಚೇರಿ ಒದಗಿಸಿದರೂ ಸ್ಥಳಾವಕಾಶ ಸಾಲುವುದಿಲ್ಲ ಎಂಬ ಕಾರಣಕ್ಕೆ ಈ ಹಿಂದೆ ಜಿಲ್ಲಾಡಳಿತ ಭವನವನ್ನು ತಾತ್ಕಾಲಿಕವಾಗಿ ತೆರೆಯಲಾಗಿದ್ದ ನಗರದ ಹೊರ ವಲಯದ ಚದಲುಪುರ ಸಮೀಪ ಇರುವ ರೇಷ್ಮೆ ಇಲಾಖೆ ಕಟ್ಟಡದಲ್ಲಿ ಗ್ರಾಹಕರ ವೇದಿಕೆ ತೆರೆಯಲು ಸಿದ್ಧತೆಗಳು ಭರದಿಂದ ಸಾಗಿದ್ದು, ಕಚೇರಿಯ ನವೀಕರಣ ಕಾಮಗಾರಿ ನಡೆಯುತ್ತಿದೆ.

ಜಿಲ್ಲೆಗೆ ಗ್ರಾಹಕರ ವೇದಿಕೆ ಮಂಜೂರಾಗಿದ್ದು, ಚದಲುಪುರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಇದ್ದ ಕಟ್ಟಡದಲ್ಲಿಯೇ ಗ್ರಾಹಕರ ವೇದಿಕೆ ಕಾರ್ಯಾಲಯಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. ಜು.27 ರಂದು ಲೋಕಾರ್ಪಣೆಗೊಳ್ಳಲಿದೆ. ಗ್ರಾಹಕರ ಹಕ್ಕು ಬಾಧ್ಯತೆಗಳಿಗೆ ಸಂಬಂಧಿದಂತೆ ಜಿಲ್ಲೆಯ ಗ್ರಾಹಕರು ಜಿಲ್ಲೆಯಲ್ಲಿ ಹೊಸರಾಗಿ ಆರಂಭಗೊಳ್ಳುತ್ತಿರುವ ಗ್ರಾಹಕರ ವೇದಿಕೆಯ ಮೊರೆ ಹೋಗಬಹುದು.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 11 ವರ್ಷ ಕಳೆದರೂ ಗ್ರಾಹಕರ ವೇದಿಕೆ ಮಂಜೂರಾಗಿರಲಿಲ್ಲ. ಇದರಿಂದ ಜಿಲ್ಲೆಯ ಗ್ರಾಹಕರು ನೆರೆಯ ಕೋಲಾರಕ್ಕೆ ಹೋಗಿ ಗ್ರಾಹಕರ ವೇದಿಕೆಗೆ ದೂರು ಕೊಡಬೇಕಿತ್ತು. ಆದರೆ ಕೋಲಾರ ದೂರ ಎಂದು ಹೇಳಿ ಗ್ರಾಹಕರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. 11 ವರ್ಷದ ಬಳಿಕ ಈಗ ರಾಜ್ಯ ಸರ್ಕಾರ ಜಿಲ್ಲೆಗೆ ಗ್ರಾಹಕರ ವೇದಿಕೆ ಮಂಜೂರು ಮಾಡಿರುವುದು ಸಂತಸ ತಂದಿದೆ.
-ಕೆ.ಎಚ್‌.ತಮ್ಮೇಗೌಡ, ಜಿಲ್ಲಾಧ್ಯಕ್ಷರು, ವಕೀಲರ ಸಂಘ

ಇಂದಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಿಗೆ ತೂಕ, ಗುಣಮಟ್ಟದ ವಸ್ತುಗಳ ಖರೀದಿ ವಿಚಾರದಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತಲೇ ಇವೆ. ಸ್ಥಳೀಯವಾಗಿ ಗ್ರಾಹಕರ ವೇದಿಕೆ ಇಲ್ಲದಿದ್ದರಿಂದ ಯಾರು ವೇದಿಕೆ ಮೊರೆ ಹೋಗುತ್ತಿರಲಿಲ್ಲ. ಇದೀಗ ಜಿಲ್ಲೆಗೆ ಪ್ರತ್ಯೇಕವಾಗಿ ಗ್ರಾಹಕರ ವೇದಿಕೆ ರಾಜ್ಯ ಸರ್ಕಾರ ಮಂಜೂರು ಮಾಡಿರುವುದು ಗ್ರಾಹಕರಿಗೆ ಸಂತಸದ ವಿಚಾರ.
-ಮುನಿಕೃಷ್ಣಪ್ಪ, ರೈತ ಮುಖಂಡ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next