Advertisement

ಚೆಕ್‌ಪೋಸ್ಟ್‌ಗೆ ಗ್ರೀನ್‌ಸಿಗ್ನಲ್‌

09:10 AM Jun 06, 2019 | Lakshmi GovindaRaj |

“ಪ್ರದರ್ಶನಗಳ ಸಂಖ್ಯೆ ಹೆಚ್ಚಳ. ಬಿಡುಗಡೆ ನಂತರದ ಗಳಿಕೆಯಲ್ಲೂ ಶೇ.65 ರಷ್ಟು ಹೆಚ್ಚಳ. ಚಿತ್ರಮಂದಿರಗಳಿಂದ ಚಿತ್ರಕ್ಕೆ ಬೇಡಿಕೆ ….’ ಇದು ಹೊಸಬರೇ ಸೇರಿ ಮಾಡಿದ “ಕಮರೊಟ್ಟು ಚೆಕ್‌ಪೊಸ್ಟ್‌’ ಚಿತ್ರದ ಫ‌ಲಿತಾಂಶದ ಹೈಲೈಟ್ಸ್‌. ಹೌದು, ಕಳೆದ ವಾರ ಬಿಡುಗಡೆಯಾದ ಈ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಆ ಖುಷಿಯಲ್ಲೇ ಚಿತ್ರತಂಡ ಮಾಧ್ಯಮದವರ ಮುಂದೆ ಬಂದು ಸಿನಿಮಾಗೆ ಸಿಕ್ಕ ಒಳ್ಳೆಯ ಮೆಚ್ಚುಗೆ ಬಗ್ಗೆ ಹೇಳಿಕೊಂಡಿತು.

Advertisement

ನಿರ್ದೇಶಕ ಎ.ಪರಮೇಶ್‌ ಅವರಿಗೆ ಚಿತ್ರವನ್ನು ಜನರು ಹೇಗೆ ಸ್ವೀಕರಿಸುತಾರೋ ಎಂಬ ಗೊಂದಲ ಮತ್ತು ಭಯ ಇತ್ತಂತೆ. ಆದರೆ, ಅವರಿಗೆ ಬಂದ ಅಭಿಪ್ರಾಯಗಳಲ್ಲಿ ಮೆಚ್ಚುಗೆ ಮಾತುಗಳೇ ಹೆಚ್ಚಾಗಿದ್ದವಂತೆ. ಅದರಲ್ಲೂ ದ್ವಿತಿಯಾರ್ಧದ ಸನ್ನಿವೇಶಗಳು ಜನರಿಗೆ ಇಷ್ಟವಾಗಿದ್ದು, ನೋಡಿದವರೆಲ್ಲರೂ ಹೊಸ ಅನುಭವ ಕಟ್ಟಿಕೊಟ್ಟಿದೆ ಎನ್ನುತ್ತಿದ್ದಾರೆ. ಸಾಮಾನ್ಯವಾಗಿ ಹೊಸಬರ ಚಿತ್ರಗಳಿಗೆ ಬೇಡಿಕೆ ಕೊಂಚ ಕಮ್ಮಿ.

ಆದರೆ, ಚಿತ್ರ ಬಿಡುಗಡೆಯಾಗಿ, ಮೂರುದಿನಗಳ ನಂತರ ಬೇಡಿಕೆ ಹೆಚ್ಚಿಸಿಕೊಂಡಿದೆ. ತುಮಕೂರಿನಲ್ಲಿ ಮೊದಲು ಎರಡು ಪ್ರದರ್ಶನಗಳಿಗೆ ಅವಕಾಶ ಕೊಟ್ಟಿದ್ದರು. ಚಿತ್ರದ ಗಳಿಕೆ ನೋಡಿ, ಇನ್ನು ಎರಡು ಪ್ರದರ್ಶನ ಏರಿಸಿದ್ದಾರೆ. ಸೋಮವಾರ ಕೂಡ ಗಳಿಕೆಯಲ್ಲಿ ಶೇ.65 ರಷ್ಟು ಹೆಚ್ಚಿದೆ. ಹೊಸಬರಿಗೆ ಇಷ್ಟೊಂದು ಮೆಚ್ಚುಗೆ ಸಿಕ್ಕಿದ್ದು ಖುಷಿಯ ವಿಷಯ. ಅದರಲ್ಲೂ, ನಿರ್ಮಾಪಕರು ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ, “ಭಾಗ-2’ಕ್ಕೆ ಯೋಚಿಸುತ್ತಿದ್ದಾರೆ.

ಸಂಪೂರ್ಣ ವಿದೇಶದಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಹೊಂದಿದ್ದಾರೆ. ಈಗಾಗಲೇ ಅದಕ್ಕೆ ತಕ್ಕ ಕಥೆ ಸಿದ್ಧವಾಗುತ್ತಿದೆ. ಇಷ್ಟಕ್ಕೆಲ್ಲಾ ಕಾರಣ ಮಾಧ್ಯಮ ಮತ್ತ ಪತ್ರಕರ್ತರು ಕೊಟ್ಟ ಸಹಕಾರ’ ಎನ್ನುವುದನ್ನು ಮರೆಯಲಿಲ್ಲ ಪರಮೇಶ್‌. ನಿರ್ಮಾಪಕ ಚೇತನ್‌ರಾಜ್‌ ಅವರಿಗೆ ಚಿತ್ರ ಬಿಡುಗಡೆ ಮೊದಲೇ ಚಿತ್ರದ ಬಗ್ಗೆ ನಂಬಿಕೆ ಇತ್ತಂತೆ. ಆ ನಂಬಿಕೆ ಈಗ ನಿಜವಾಗಿದ್ದಕ್ಕೆ ಖುಷಿಯಾಗಿದೆಯಂತೆ. ಮೀಡಿಯಾ ಮತ್ತು ಪತ್ರಕರ್ತರ ಪ್ರೋತ್ಸಾಹ ಸಿನಿಮಾಗೆ ಬಲ ಸಿಕ್ಕಂತಾಗಿದೆ.

ಎಲ್ಲರೂ ಚಿತ್ರದ ತಾಂತ್ರಿಕತೆ ಬಗ್ಗೆಯೇ ಮಾತಾಡಿದ್ದಾರೆ. ಇಲ್ಲಿ ಪ್ರತಿಯೊಬ್ಬ ತಂತ್ರಜ್ಞರ ಶ್ರಮದಿಂದ ಈಗ ಒಳ್ಳೆಯ ಪ್ರತಿಫ‌ಲ ಸಿಕ್ಕಿದೆ. ನಮ್ಮ ನಿರ್ದೇಶಕ ಪರಮೇಶ್‌ ಅವರು, ಒಬ್ಬ ರೈತರಾಗಿ ಅತ್ತ ಬೆಳೆ ಕಡೆ ಗಮನಹರಿಸಿ, ಬಿಡುವಿನ ಸಮಯದಲ್ಲಿ ರಾತ್ರಿ-ಹಗಲು ಚಿತ್ರಕ್ಕೆ ದುಡಿದಿದ್ದಾರೆ. ಆ ಶ್ರಮ ಈಗ ನಗುವಂತೆ ಮಾಡಿದೆ. ಇನ್ನು, ಮೊದಲವಾರ ನಾನು ಸೇಫ್ ಆಗುತ್ತೇನೆ. ಹೀಗೆಯೇ ಎರಡನೇ ವಾರ ಮುಂದುವರೆದರೆ, ಚಿತ್ರತಂಡದ ಶ್ರಮ ಸಾರ್ಥಕವಾಗುತ್ತೆ.

Advertisement

ಇನ್ನೊಂದು ಬೇಸರದ ವಿಷಯವೆಂದರೆ, ಬುಕ್‌ ಮೈ ಶೋನ ಕೆಲವರು ರೇಟಿಂಗ್‌ಗಾಗಿ ಹಣಕ್ಕೆ ಬೇಡಿಕೆ ಇಡುತ್ತಾರೆ. ನಾವು ಅವರಿಗೆ ಸ್ಪಂದಿಸದಿದ್ದರೆ, ರೇಟಿಂಗ್‌ನಲ್ಲಿ ಬದಲಾವಣೆ ಮಾಡುತ್ತಾರೆ. ಹೊಸ ನಿರ್ಮಾಪಕರಿಗೆ ಇದು ತೊಂದರೆಯಾಗುತ್ತಿದೆ. ಈ ಬಗ್ಗೆ ಮಂಡಳಿಗೆ ಹಾಗು ಪೊಲೀಸ್‌ ಆಯುಕ್ತರಿಗೆ ದೂರು ನೀಡುವುದಾಗಿ ಹೇಳಿಕೊಂಡರು ನಿರ್ಮಾಪಕ ಚೇತನ್‌ರಾಜ್‌.

ಹೀರೋ ಸನತ್‌ಕುಮಾರ್‌ಗೆ, ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಖುಷಿ ಕೊಟ್ಟಿದೆಯಂತೆ. ಸಿನಿಮಾ ಬದುಕಿನ ಮೊದಲ ಗೆಲುವು ಇದು ಎಂದರು ಸನತ್‌. ಇನ್ನು, ನಾಯಕ ಉತ್ಪಲ್‌ ಅವರಿಗೆ ಈ ಮಟ್ಟಕ್ಕೆ ಮೆಚ್ಚುಗೆ ಸಿಗುತ್ತೆ ಎಂಬುದು ಗೊತ್ತಿರಲಿಲ್ಲವಂತೆ. ಜನರು ತೋರುತ್ತಿರುವ ಪ್ರೀತಿ ಜವಾಬ್ದಾರಿ ಹೆಚ್ಚಿಸಿದೆ. ಇಲ್ಲಿ ಸಿನಿಮಾ ಗೆದ್ದಿದೆ. ಹಾಗಾಗಿ ಎಲ್ಲರೂ ಗೆದ್ದಿದ್ದೇವೆ. ಇಲ್ಲಿ ಮೂರನೇ ಆತ್ಮವೊಂದಿದೆ. ಅದಕ್ಕೆ ಉತ್ತರ ಭಾಗ-2ನಲ್ಲಿ ನೋಡಬೇಕು ಅಂದರು ಉತ್ಪಲ್‌. ಸ್ವಾತಿಕೊಂಡೆ, ಸಹ ನಿರ್ದೇಶಕ ರಾಜೇಶ್‌ ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆ ಕುರಿತು ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next