Advertisement

ಶರಣಬಸವ ವಿವಿಗೆ ಹಸಿರು ನಿಶಾನೆ

03:32 PM Jul 31, 2017 | Team Udayavani |

ಕಲಬುರಗಿ: ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯ ಕಲ್ಯಾಣ ಕರ್ನಾಟಕದ ಪ್ರಥಮ ಖಾಸಗಿ ಶರಣಬಸವ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ.

Advertisement

ಬಹಳ ವರ್ಷಗಳಿಂದ ನಿರೀಕ್ಷೆ ಇಟ್ಟುಕೊಂಡಿದ್ದ ಶರಣಬಸವ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಾರಂಭಕ್ಕೆ ಶನಿವಾರ (ಜುಲೈ 29) ರಾಜ್ಯಪಾಲರು ಅನುಮತಿ ನೀಡಿದ್ದು, ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ. ಇದರಿಂದ ಸಂಸ್ಥೆಗೆ ಮತ್ತೂಂದು ಹೆಮ್ಮೆಯ
(ಜ್ಞಾನದ) ಗರಿ ಸೇರ್ಪಡೆಯಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಶರಣಬಸವಪ್ಪ ಅಪ್ಪ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದಲ್ಲಿ ರವಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿನ ಕರ್ನಾಟಕ ಹೈಕೋರ್ಟ್‌ ಪೀಠದ ಹಿಂದುಗಡೆ ಪ್ರದೇಶದ ಶರಣಸಿರಸಗಿ ಸೀಮಾಂತರದ ವಿಶಾಲವಾದ 61 ಎಕರೆ ಭೂಮಿಯಲ್ಲಿ ಶರಣಬಸವ ವಿಶ್ವವಿದ್ಯಾಲಯ ತಲೆ ಎತ್ತಲಿದೆ. ಈ ಕುರಿತು ಕಾರ್ಯಚಟುವಟಿಕೆಗಳನ್ನು ಈಗಿನಿಂದಲೇ ಆರಂಭಿಸಲಾಗುವುದು. ಗುಣಮಟ್ಟದ ಶಿಕ್ಷಣ
ಹಾಗೂ ಹೊಸತನಕ್ಕೆ ನಾಂದಿ ಹಾಡುತ್ತ ಬಂದಿರುವ ವಿದ್ಯಾವರ್ಧಕ ಸಂಘದ ಶ್ರೇಷ್ಠತೆಯನ್ನು ವಿವಿಯಲ್ಲಿ ಮತ್ತಷ್ಟು ಬಲಪಡಿಸಲಾಗುವುದು ಎಂದು ಪೂಜ್ಯರು ನುಡಿದರು. ಕಠಿಣ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳನ್ನೇ ಮೂಲ ಗುರಿಯನ್ನಾಗಿಸಿಕೊಂಡ ಹೊಸ ವಿವಿಯಲ್ಲಿ ಸುಮಾರು 10 ವಿಭಾಗಗಳನ್ನು ತೆರೆಯಲಾಗುತ್ತಿದೆ. ಪ್ರಮುಖವಾಗಿ ಇಂಜಿನಿಯರಿಂಗ್‌, ಬಿಸಿನೆಸ್‌ ಮ್ಯಾನೇಜ್‌ ಮೆಂಟ್‌, ಸಾಮಾಜಿಕ ವಿಜ್ಞಾನ, ಮೂಲ ವಿಜ್ಞಾನ ಮತ್ತು ತಂತ್ರಜ್ಞಾನ, ಕಂಪ್ಯೂಟರ್‌ ಅಪ್ಲಿಕೇಶನ್‌, ಎಜುಕೇಶನ್‌ ಟೆಕ್ನಾಲಾಜಿ, ಭಾಷಾ ತಂತ್ರಜ್ಞಾನ, ಚಿತ್ರಕಲಾ ವಿಭಾಗ, ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಹಾಗೂ ಆರೋಗ್ಯ ವಿಜ್ಞಾನ ವಿಭಾಗಗಳ ಜತೆಗೆ ಪಿಎಚ್‌ಡಿ ಮತ್ತು ಡಿ.ಲಿಟ್‌ ಅಧ್ಯಯನಕ್ಕೂ ಹೆಚ್ಚು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.10 ವಿಭಾಗಗಳು ಆರಂಭವಾದಲ್ಲಿ ಸುಮಾರು 3000 ವಿದ್ಯಾರ್ಥಿಗಳು ಪ್ರವೇಶ ಪಡೆದರೆ 5 ವರ್ಷಗಳಲ್ಲಿ 15 ಸಾವಿರ ವಿದ್ಯಾರ್ಥಿಗಳು ಸ್ನಾತಕೋತ್ತರ ಕೋಸ್‌ ìಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಇಂಜಿನಿಯರಿಂಗ್‌ ವಿಭಾಗದಲ್ಲಿ 9 ಸ್ನಾತಕ ಕೋರ್ಸ್‌, 20 ಸ್ನಾತಕೋತ್ತರ ಮತ್ತು 17 ಇಂಟಿಗ್ರೇಟೆಡ್‌ ಕೋರ್ಸ್‌ಗಳನ್ನು ಅಳವಡಿಸಲಾಗಿದೆ. ಅದಲ್ಲದೇ ಎಂಬಿಐ, ಎಂಟಿಎ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಬಿಎಡ್‌, ಎಂಎಡ್‌, ಎಂಎಸ್ಸಿ, ವಿಜುವಲ್‌ ಆರ್ಟ್‌ ಕೋಸ್‌ ìಗಳು ಸೇರಿದಂತೆ ಇತರ ಕೋರ್ಸ್‌ಗಳಿಗೆ ಪಿಎಚ್‌ಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಮಹಿಳಾ ಶಿಕ್ಷಣಕ್ಕೆ ಆದ್ಯತೆ: ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಇಂಜಿನಿಯರಿಂಗ್‌ ಕಾಲೇಜು ತೆಗೆದಿದ್ದೇ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಮಾತ್ರ. ಸರ್ಕಾರಿ ಶುಲ್ಕದೊಂದಿಗೆ ಮಾತ್ರ ಇಂಜಿನಿಯರಿಂಗ್‌ ಪ್ರವೇಶಾತಿ ನೀಡಿ ಮಹಿಳೆಯರಿಗೆ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ. ಹೊಸ ವಿವಿಯಲ್ಲೂ ಮಹಿಳಾ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಲು ಅದರಲ್ಲೂ ಪ್ರವೇಶಾತಿ ಹಾಗೂ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ. ಉನ್ನತ ಶಿಕ್ಷಣಕ್ಕೆ ನಮ್ಮ ಭಾಗದವರೂ ಹೆಚ್ಚಿನ ಸಂಖ್ಯೆಯಲ್ಲಿ ಬರುವುದೇ ತಮ್ಮ ಬಯಕೆಯಾಗಿದೆ ಎಂದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿದಂತೆ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಜರಿದ್ದರು.
 
ಶೈಕ್ಷಣಿಕ ಅಭಿವೃದ್ಧಿಗೆ ಪೂರಕ
ಕಲಬುರಗಿಯಲ್ಲಿ ಈಗಾಗಲೇ ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇದ್ದು, ಈಗ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ಶರಣಬಸವ ವಿಶ್ವವಿದ್ಯಾಲಯ ಆರಂಭಗೊಂಡಿದೆ. ಒಂದೇ ಜಿಲ್ಲೆಯಲ್ಲಿ ಮೂರು ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿರುವುದು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗಿದೆ.
 ಡಾ| ಶರಣಬಸವಪ್ಪ ಅಪ್ಪ ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ 

Advertisement
Advertisement

Udayavani is now on Telegram. Click here to join our channel and stay updated with the latest news.

Next